ಮೂಡುಬಿದಿರೆ ಮೊಸರು ಕುಡಿಕೆಗೆ 108 ವರ್ಷಗಳ ಇತಿಹಾಸ! *ಶ್ರೀ* *ಗೋಪಾಲಕೃಷ್ಣ* *ದೇವಸ್ಥಾನದ* *ಬೆದ್ರ* *ಮೊಸರು* *ಕುಡಿಕೆಯ* *ಭಾಗ* ' *ಕೃಷ್ಣೋತ್ಸವ* '

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಮೊಸರು ಕುಡಿಕೆಗೆ 108 ವರ್ಷಗಳ ಇತಿಹಾಸ!

 *ಶ್ರೀ* *ಗೋಪಾಲಕೃಷ್ಣ* *ದೇವಸ್ಥಾನದ*  *ಬೆದ್ರ* *ಮೊಸರು* *ಕುಡಿಕೆಯ* *ಭಾಗ*  ' *ಕೃಷ್ಣೋತ್ಸವ* ' 

ಸಾವಿರಾರು ವರ್ಷ ಪುರಾತನ ದೇವಸ್ಥಾನ ಕುರಿತು ಒಂದು ಸಂಕ್ಷಿಪ್ತ ನೋಟ

ಭಗವದ್ಗೀತೆಯ ಮೂಲಕ ಇಡೀ ವಿಶ್ವಕ್ಕೆ ವಿದ್ವತ್ತಿನ ಸಾರ ಸಾರಿದ ಶ್ರೀ ಕೃಷ್ಣ ಪರಮಾತ್ಮ ಎಲ್ಲರ ಅಚ್ಚುಮೆಚ್ಚಿನ ದೇವರು. ಅಂತಹ ಶ್ರೀ ಕೃಷ್ಣನ ಜನ್ಮ ದಿನವಾದ ಕೃಷ್ಣಾಷ್ಟಮಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಮೂಲೆ ಮೂಲೆಯಲ್ಲೂ ಶ್ರೀ ಕೃಷ್ಣನ ಜನ್ಮಾಷ್ಟಮಿ ಸಂಭ್ರಮ ಸಂಭ್ರಮಿಸಲು ಭಕ್ತರು ಸಿದ್ಧರಾಗುತ್ತಿದ್ದಾರೆ. ಕೃಷ್ಣಾಷ್ಟಮಿ ಎಂದರೆ ಮೊಸರು ಕುಡಿಕೆ ಉತ್ಸವ ಸಂಭ್ರಮ ಜನರಿಗೆ ಅಚ್ಚುಮೆಚ್ಚಿನದ್ದು. ಅದರಲ್ಲೂ ತುಳುನಾಡಿನಲ್ಲಿ ಮೂಡುಬಿದಿರೆ ಮೊಸರು ಕುಡಿಕೆ ಪ್ರಸಿದ್ಧವಾದುದು. ಇಡೀ ತುಳುನಾಡಿನಲ್ಲಿ ವಿಶಿಷ್ಟವಾದ ಮೊಸರು ಕುಡಿಕೆ ಮೂಡುಬಿದಿರೆಯಲ್ಲಿ ನಡೆಯುವುದು ಇದಕ್ಕೆ ಕಾರಣ. ಬಹುಶಃ ಇನ್ನೆಲ್ಲೂ ಇಲ್ಲದ ವಿಶಿಷ್ಟ ಮೊಸರು ಕುಡಿಕೆ ಸಂಪ್ರದಾಯ ಬರೋಬ್ಬರಿ ಒಂದು ಶತಮಾನದಿಂದಲೂ ಮೀರಿ ಇಲ್ಲಿ ನಡೆದುಕೊಂಡು ಬಂದಿದೆ. ಉತ್ಸವದ ಮಾದರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಇಲ್ಲಿ ಆಚರಿಸಲ್ಪಡುತ್ತದೆ. ಸಾವಿರಾರು ಜನರು ಇಲ್ಲಿನ ಮೊಸರು ಕುಡಿಕೆ ಉತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಾರೆ. ಆದರೆ ಇದರಲ್ಲಿ ಭಾಗವಹಿಸುವ ಬಹುತೇಕರಿಗೆ ಈ ಮೊಸರು ಕುಡಿಕೆ ಉತ್ಸವಕ್ಕೆ 108 ವರ್ಷಗಳ ಇತಿಹಾಸವಿದೆ, ಇದು ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಉತ್ಸವವಾದ ʻಮೊಸರುಕುಡಿಕೆ'ಯ ಒಂದು ಭಾಗ ಎಂಬುದು ತಿಳಿದಿಲ್ಲ. ಹೌದು, ಅಚ್ಚರಿಯಾದರೂ ಇದು ನಿಜ. ಮೂಡುಬಿದಿರೆಯ ಮೊಸರು ಕುಡಿಕೆ ಬೇರೆಡೆ ನಡೆಯುವಂತೆ ಕೇವಲ ಕೃಷ್ಣಾಷ್ಟಮಿ ಆಧಾರಿತವಾಗಿ ನಡೆಯುವ ಸಾಮಾನ್ಯ ಕಾರ್ಯಕ್ರಮವಲ್ಲ. ಇದು ಮೂಡುಬಿದಿರೆಯ ಕಲ್ಸಂಕ ಬಳಿ (ಹಳೆ ಪೊಲೀಸ್‌ಸ್ಟೇಶನ್‌ಗಿಂತ ಸ್ವಲ್ಪ ಮುಂದೆ) ಇರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕೇಂದ್ರಿತವಾಗಿ ನಡೆಯುವ ಮೊಸರು ಕುಡಿಕೆ. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಶ್ರೀ ಕೃಷ್ಣನ ಭಕ್ತರಲ್ಲಿ ಬಹುತೇಕರು ಇಲ್ಲಿ ನಡೆಯುವ ಮೊಸರು ಕುಡಿಕೆಯ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು, ಮಡಿಕೆ ಒಡೆಯುವ ದೃಶ್ಯಾವಳಿಗಳನ್ನು, ಮೆರವಣಿಗೆಗಳನ್ನು ಕಣ್ತುಂಬಿಕೊಂಡು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಆದರೆ ಶ್ರೀ ಕೃಷ್ಣ ಲೀಲೋತ್ಸವದ ಕೇಂದ್ರ ಬಿಂದುವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಗ್ಗೆ ಮಾಹಿತಿಯ ಕೊರತೆಯಿರುವುದರಿಂದ ಇತ್ತೀಚಿನವರೆಗೂ ಈ ಪರ್ವ ದಿನಗಳಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಭಕ್ತರ ಸಂಖ್ಯೆ ವಿರಳವಾಗಿತ್ತು.  ಅಂದಾಜು ಸಾವಿರ ವರ್ಷಗಳ ಇತಿಹಾಸವಿರುವ ಇಲ್ಲಿನ ವಿಶಿಷ್ಟ ಗೋಪಾಲಕೃಷ್ಣ ದೇವಸ್ಥಾನಕ್ಕೆಗಣನೀಯ ಸಂಖ್ಯೆಯಲ್ಲಿ ಮೂಡುಬಿದಿರೆಯ ಆಸ್ತಿಕ ಬಂಧುಗಳು ಭೇಟಿ ನೀಡಬೇಕೆಂಬುದು ನಮ್ಮೆಲ್ಲರ ಆಶಯ.

ಮೂಡುಬಿದಿರೆಯಲ್ಲಿ ಮೊಸರು ಕುಡಿಕೆ ಭಾಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಸೆಂಟ್ರಲ್‌ಫ್ರೆಂಡ್ಸ್‌ ವತಿಯಿಂದ ಹಲವಾರು ವರ್ಷಗಳಿಂದ ರಸಮಂಜರಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.

ಮೊದಲು ಯೋಗೀಶರ ಅಂಗಡಿಯ ಮುಂಭಾಗದಲ್ಲಿ, ಈಗ ಕೃಷ್ಣ ಕಟ್ಟೆಯ ಬಳಿ ಶ್ರೀ ಕೃಷ್ಣ ಫ್ರೆಂಡ್ಸ್‌ ವತಿಯಿಂದ ನೃತ್ಯ ಕಾರ್ಯಕ್ರಮ ಮತ್ತು ಧಾರ್ಮಿಕ ಕಲಾಪಗಳು ನಡೆಯುತ್ತವೆ. ಅಲ್ಲದೆ, ಕಳೆದ ವರ್ಷದಿಂದ ಅಮರನಾಥ ಶೆಟ್ಟಿ ವೃತ್ತದ ಬಳಿ ಜವನೆರ್‌ ಬೆದ್ರ ಪ್ರತಿಷ್ಠಾನ (ರಿ.) ವತಿಯಿಂದ ʻಕೃಷ್ಣೋತ್ಸವʼ ಕಾರ್ಯಕ್ರಮ ನಡೆಯುತ್ತಿದೆ. ಇದನ್ನು ಹೊರತುಪಡಿಸಿದರೆ, ಕೃಷ್ಣ ವೇಷಧಾರಿಯು ಮೆರವಣಿಗೆಯಲ್ಲಿ ಮಡಿಕೆಗಳನ್ನು ಒಡೆಯುವುದನ್ನು ಜನ ಕಣ್ತುಂಬಿಕೊಳ್ಳುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳು ಜನರನ್ನು ಮನೋರಂಜನೆಯ ಸಂಭ್ರಮದಲ್ಲಿ ತೇಲುವಂತೆ ಮಾಡುತ್ತದೆ, ಆದರೆ ಹೆಚ್ಚಿನವರಿಗೆ ಈ ಕಾರ್ಯಕ್ರಮದ ಇತಿಹಾಸ, ಹಿನ್ನೆಲೆ ತಿಳಿದಿಲ್ಲ. ಅದಕ್ಕಾಗಿ ಈ ಸಂಚಿಕೆಯಲ್ಲಿ ಇದರ ಬಗ್ಗೆ ತಿಳಿದವರಿಂದ, ಹಿರಿಯರಿಂದ ಒಂದಷ್ಟು ಮಾಹಿತಿಗಳನ್ನು ಪಡೆದುಕೊಂಡು ಈ ಲೇಖನ ಬರೆಯಲಾಗಿದೆ. ನಮಗೆ  ದೊರಕಿರುವ ಮಾಹಿತಿಯ ಪ್ರಕಾರ, ಮೂಡುಬಿದಿರೆಯ ಮೊಸರು ಕುಡಿಕೆಗೆ ೧೦೮ ವರ್ಷಗಳ ಇತಿಹಾಸವಿದೆ. ಆ ಇತಿಹಾಸದ ಬಗ್ಗೆ ನಮಗೆ ತಿಳಿದುಬಂದ ಮಾಹಿತಿಯನ್ವಯ ಒಂದಷ್ಟು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. 


೧೦೮ ವರ್ಷಗಳ ಇತಿಹಾಸ: ಸಾವಿರಾರು ವರ್ಷಗಳ ಇತಿಹಾಸವಿರುವ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೂಲಕ ಮೊಸರು ಕುಡಿಕೆ ಆರಂಭವಾಗಿ ೧೦೮ ವರ್ಷಗಳಾಗಿವೆ. ಸಹಸ್ರಾರು ವರ್ಷಗಳ ಇತಿಹಾಸವಿದ್ದರೂ ಜೀರ್ಣಾವಸ್ಥೆಯಲ್ಲಿದ್ದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ೧೯೧೨ರಲ್ಲಿ ಶ್ರೀ ವೇಣೂರು ಕೃಷ್ಣಯ್ಯರ ನೇತೃತ್ವದಲ್ಲಿ  ಆರಂಭವಾಗುತ್ತದೆ. ವೇಣೂರು  ಮೂಲದವರಾದ ಶ್ರೀ ಕೃಷ್ಣಯ್ಯರವರು ಕರಿಮಣೇಲು ಗ್ರಾಮ ಶಾನುಬೋಗರಾಗಿದ್ದರು. ಭೂ ಮಾಲಕರಾಗಿದ್ದ ಅವರು ಮೂಡುಬಿದಿರೆಯಲ್ಲಿ ಚಿರಪರಿಚಿತರಾಗಿ ಮತ್ತು ಮೂಡುಬಿದಿರೆಯಲ್ಲೇ ನೆಲೆಸಿದ ಇವರು ಜೀರ್ಣಾವಸ್ಥೆಯಲ್ಲಿದ್ದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ . ಜೀರ್ಣೋದ್ಧಾರ ಕೈಂಕರ್ಯ ಕೈಗೊಂಡು, ೧೯೧೭ರಲ್ಲಿ ಬ್ರಹ್ಮಕಲಶೋತ್ಸವ, ಪುನರ್‌ಪ್ರತಿಷ್ಠೆ ಸಂಪನ್ನಗೊಳಿಸುತ್ತಾರೆ. ಬ್ರಹ್ಮಕಲಶೋತ್ಸವ, ಪುನರ್‌ಪ್ರತಿಷ್ಠೆಯ ಸವಿ ನೆನಪಿಗಾಗಿ ಅದೇ ವರ್ಷ ವೇಣೂರು ಕೃಷ್ಣಯ್ಯರವರ ಮಾರ್ಗದರ್ಶನದಲ್ಲಿ ಮೂಡುಬಿದಿರೆಯಲ್ಲಿ ಮೊಸರು ಕುಡಿಕೆ ಉತ್ಸವ ಆರಂಭವಾಗುತ್ತದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಭಾಗವಾಗಿಯೇ ಈ ಕಾರ್ಯಕ್ರಮ ಆರಂಭವಾಗುತ್ತದೆ. ಯಕ್ಷಗಾನ ಪ್ರೇಮಿಯಾಗಿದ್ದ ವೇಣೂರು ಕೃಷ್ಣಯ್ಯರವರು ಯಕ್ಷಗಾನ ಶೈಲಿಯ ಶ್ರೀಕೃಷ್ಣ, ಬಲರಾಮ ವೇಷಧಾರಿಗಳನ್ನು ಸಿದ್ಧಪಡಿಸಿ, ಅದಕ್ಕೆ ಯಕ್ಷಗಾನದ ಹಿಮ್ಮೇಳದೊಂದಿಗೆ ಮೂಡುಬಿದಿರೆ ಪೇಟೆಯಾದ್ಯಂತ ಮೆರವಣಿಗೆ ನಡೆಸಿ ಪುರ ಜನರ ಸಹಕಾರದೊಂದಿಗೆ ಮೊಸರು ಕುಡಿಕೆ ಉತ್ಸವ ಆರಂಭಿಸಲಾಯಿತು. ಬಹುಶಃ ಮೊಸರು ಕುಡಿಕೆ ಉತ್ಸವದಲ್ಲಿ ಇಂದಿಗೂ ಯಕ್ಷಗಾನ ಶೈಲಿಯ ಕೃಷ್ಣ ವೇಷಧಾರಿ ಮಡಿಕೆ ಒಡೆಯುವುದು ಮೂಡುಬಿದಿರೆಯಲ್ಲಿ ಮಾತ್ರ ಇರಬೇಕು. ಅದು ಯಕ್ಷಗಾನ ಕಲಾವಿದರ ಬಗ್ಗೆ ವೇಣೂರು ಕೃಷ್ಣಯ್ಯರಿಗಿದ್ದ ಅಭಿಮಾನ ಮತ್ತು ಕಾಳಜಿಯೂ ಆಗಿತ್ತು. ಮಳೆಗಾಲದಲ್ಲಿ ಯಕ್ಷಗಾನ ಕಡಿಮೆಯಿರುವುದರಿಂದ, ಕಲಾವಿದರಿಗೆ ಮೊಸರು ಕುಡಿಕೆ ಉತ್ಸವದಲ್ಲಿ ಒಂದು ಅವಕಾಶವನ್ನು ಒದಗಿಸಿದಂತಾಗುತ್ತಿತ್ತು. ಯಕ್ಷಗಾನ ಶೈಲಿಯ ಪಾತ್ರದಾರಿ ಮಡಿಕೆ ಒಡೆಯುವುದು ಒಂದು ಕಡೆಯಾದರೆ, ಹುಲಿ ವೇಷ ಪ್ರಧಾನವಾಗಿ, ಬೇರೆ ಬೇರೆ ವೇಷಧಾರಿಗಳ ಮೆರವಣಿಗೆಯೂ ಇರುತ್ತಿತ್ತು, ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಮಿಯ ದಿನ ಸಂಜೆ ನಾರದ ವೇಷಧಾರಿಯೊಂದಿಗೆ ಸಾಮೂಹಿಕ ಭಜನೆಯ ಮೂಲಕ ಮೆರವಣಿಗೆಯೊಂದಿಗೆ ಯಶೋದಾ ಕೃಷ್ಣರ ಮೃಣ್ಮಯ ಮೂರ್ತಿ ಮೆರವಣಿಗೆಯಲ್ಲಿ ತಂದು ರಾತ್ರಿ ಭಜನೆ, ಪೂಜೆ-ಪುನಸ್ಕಾರ,ಅರ್ಘ್ಯ ಪ್ರದಾನ ನಡೆಯುತ್ತಿದ್ದವು, ಮರುದಿನ ಬೆಳಿಗ್ಗೆ ಯಜ್ಞ, ಯಾಗಾದಿಗಳು ನಡೆದು ಶ್ರೀ ಕೃಷ್ಣನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆದು, ಮಧ್ಯಾಹ್ನದ ಬಳಿಕ ಮೊಸರು ಕುಡಿಕೆಯ ಭಾಗವಾಗಿ ಯಶೋದಾಶ್ರೀ ಕೃಷ್ಣರ ಮೂರ್ತಿ ಹಾಗೂ ನಾನಾ ವೇಷಗಳ ಮೆರವಣಿಗೆ ಪೇಟೆಯುದ್ದಕ್ಕೂ ನಡೆಯುತ್ತಿತ್ತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು, ಹಳೇ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಹಿಂದಿರುಗಿ ಕೃಷ್ಣ ಕಟ್ಟೆಯಲ್ಲಿ ಪಲ್ಲಕಿ ಸಮೇತ ವಿರಾಜಮಾನರಾಗಿ ನಂತರ ಅರಮನೆ ಬಾಗಿಲಿಗೆ ಬಂದು, ಅಲ್ಲಿಂದ ಜೈನ ಪೇಟೆಯ ಮೂಲಕ ಅಲಂಗಾರು ದೇವಸ್ಥಾನಕ್ಕೆ ತೆರಳಿ ಅಲ್ಲಿನ ಪುಷ್ಕರಣಿಯಲ್ಲಿ ತೆಪ್ಪದಲ್ಲಿ ಯಶೋದಾಶ್ರೀ ಮೂರ್ತಿಯ ಪ್ರದಕ್ಷಿಣೆಗೊಂಡು, ಅಲ್ಲಿಂದ ಹಿಂದಿರುಗಿ ಮತ್ತೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಆಗಮಿಸಿ, ಅಲ್ಲಿನ ಪುಷ್ಕರಣಿಯಲ್ಲಿ ಪ್ರತಿಮೆಗಳ ವಿಸರ್ಜನೆಯೊಂದಿಗೆ ಮೊಸರು ಕುಡಿಕೆ ಉತ್ಸವ ಸಂಪನ್ನವಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಯಕ್ಷಗಾನ ಶೈಲಿಯ ಕೃಷ್ಣ ವೇಷಧಾರಿಯು ಪೇಟೆಯುದ್ಧಕ್ಕೂ ಅಲ್ಲಲ್ಲಿ ಕಟ್ಟಿರುವ ಮಡಿಕೆಗಳನ್ನು ಒಡೆಯುವುದು ಮತ್ತು ಹುಲಿ ವೇಷ ಪ್ರಧಾನವಾಗಿತ್ತು, ಅಷ್ಟಮಿ ಆರಂಭಕ್ಕೆ ೧೫ ದಿನ ಮುಂಚಿತವಾಗಿಯೇ ಹುಲಿ ವೇಷ ತಂಡಗಳು ಬೀದಿಗಿಳಿಯುತ್ತಿದ್ದವು. ತಾಲೀಮು ಅಪ್ಪಣ್ಣ ಮತ್ತು ಬಾಬು ಮುಂತಾದವರ ಹುಲಿ ವೇಷ ತಂಡಗಳು ಪ್ರಮುಖವಾಗಿದ್ದವು. ಮೊಸರು ಕುಡಿಕೆ ದಿನ ಎಲ್ಲಾ ಹುಲಿ ವೇಷ ತಂಡಗಳು, ಇತರ ವೇಷಧಾರಿಗಳು ಮೊಸರು ಕುಡಿಕೆ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಮೊಸರು ಕುಡಿಕೆಯ ಸಂಭ್ರಮದ ಭಾಗವಾಗಿ ಅರಮನೆ ಬಾಗಿಲು ಬಳಿ ಮತ್ತು ಅಲಂಗಾರು ದೇವಸ್ಥಾನದಲ್ಲಿ ಎಣ್ಣೆಗಂಬ, ತಪ್ಪಂಗಾಯಿ  ಸಹಿತ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಮೊಸರು ಕುಡಿಕೆ ಅತಿದೊಡ್ಡ ಹಗಲು ಉತ್ಸವ ಎಂಬ ಖ್ಯಾತಿಗೆ ಪಾತ್ರವಾಗಿತ್ತು.


೧೯೬೨ರ ವಿವಾದ: ಮೊಸರು ಕುಡಿಕೆ ಮೆರವಣಿಗೆಯಲ್ಲಿ ಹುಲಿ ವೇಷ ಪ್ರಮುಖವಾಗಿತ್ತು. ಹಲವು ತಂಡಗಳು ಭಾಗಿಯಾಗುತ್ತಿದ್ದವು. ೧೯೬೨ರಲ್ಲಿ  ಹುಲಿ ವೇಷಧಾರಿಗಳ ಒಂದು ತಂಡ ಮಾಡಿದ ಸಣ್ಣ ಪ್ರಮಾದವೊಂದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಹುಲಿ ವೇಷಧಾರಿಗಳ ತಂಡವೊಂದು ಹಳೇ ಬಸ್ ಸ್ಟ್ಯಾಂಡ್ ಬಳಿ ʻಕುರಿ ಹೊಡೆದರುʼ ಎಂಬ ವಿಷಯ ಸುದ್ದಿಯಾಗುತ್ತದೆ. ಹೀಗಾಗಿ ಪ್ರಾಣಿ ಹಿಂಸೆಯಾಯಿತು, ಮೊಸರು ಕುಡಿಕೆಗೆ ಅಪಚಾರವಾಯಿತು ಎಂದು ಒಂದು ವರ್ಗ ಮೆರವಣಿಗೆ ಮುಂದುವರಿಸುವುದಕ್ಕೆ ಆಕ್ಷೇಪಿಸಿದರು.ಆದರೂ ಶೋಭಾಯಾತ್ರೆಯು ಮುಂದುವರಿಯಿತು. ಅರಮನೆ ಬಾಗಿಲು ಬಳಿಯ ಕಟ್ಟೆಯಲ್ಲಿ ದೇವರು ಕೂರಿಸುವುದಕ್ಕೂ ಆಕ್ಷೇಪ ವ್ಯಕ್ತವಾಯಿತು. ಆದರೆ ಅಲ್ಲಿ ಕೊನೆಗೂ ಪೂಜೆಯಾಯಿತು, ಆದರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೆಪ್ಪೋತ್ಸವಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು. ಹೀಗಾಗಿ ಅಲ್ಲಿಂದಾಚೆಗೆ ಅಲಂಗಾರು ದೇವಸ್ಥಾನದವರೆಗೆ ಮೊಸರು ಕುಡಿಕೆ ಮೆರವಣಿಗೆ ಹೋಗುವ ಸಂಪ್ರದಾಯ ನಿಂತಿತು. ನಂತರದ ವರ್ಷಗಳಲ್ಲಿ ಮೊಸರು ಕುಡಿಕೆ ಉತ್ಸವದ ಸ್ವರೂಪವೂ ಬದಲಾಯಿತು. 

ಶ್ರೀ ಕೃಷ್ಣ - ಬಲರಾಮರ ವೇಷ ಧರಿಸುತ್ತಿದ್ದ ಆರಂಭಿಕ ಪಾತ್ರದಾರಿಗಳ ಬಗ್ಗೆ ಹೆಚ್ಚಿನ ವಿವರ ಸಿಗುತ್ತಿಲ್ಲ. ಆದರೆ ೧೯೪೦ರ ದಶಕದಲ್ಲಿ ವಾಸು ಸಮಗಾರ, 

ಮಂಜುನಾಥ ಸಮಗಾರ ಕೃಷ್ಣ - ಬಲರಾಮನಾಗಿ ಮತ್ತು ಅವರ ತಂಡವೇ ಹಿಮ್ಮೇಳದಲ್ಲಿ ಪಾಲ್ಗೊಳ್ಳುತ್ತಿತ್ತು. ೧೯೫೭ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಯಕ್ಷಗಾನವೊಂದರಲ್ಲಿ ಮೋನಪ್ಪ ಕುಲಾಲ್‌ಎಂಬವರು ಅಭಿನಯಿಸಿದ ಕೃಷ್ಣನ ಪಾತ್ರವನ್ನು ಮೆಚ್ಚಿ ವೇಣೂರು ಕೃಷ್ಣಯ್ಯರವರು ಮುಂದಿನ ವರ್ಷದ ಮೊಸರು ಕುಡಿಕೆಯಲ್ಲಿ ಅವರಿಗೆ ಕುಡಿಕೆ ಒಡೆಯುವ ಕೃಷ್ಣನಾಗಿ ಬರಲು ಆಹ್ವಾನವನ್ನೀಯುತ್ತಾರೆ. ಇದಕ್ಕೆ ಸಮ್ಮತಿಸಿದ ಮೋನಪ್ಪ ಕುಲಾಲರು ೧೯೫೮ರಿಂದ ತನ್ನ ಮಳಲಿಯ ಹಿಮ್ಮೇಳದೊಂದಿಗೆ  ಮೊಸರುಕುಡಿಕೆಯ ಕಲಾಪದಲ್ಲಿ ಭಾಗಿಯಾಗುತ್ತಾರೆ, ೧೯೯೧ರಲ್ಲಿ ಮೋನಪ್ಪ ಕುಲಾಲ್‌ರ ನಿವೃತ್ತಿಯ ನಂತರ ಅವರ ಮಗ ದಿವಾಕರ ಕುಲಾಲ್‌ ಕೃಷ್ಣ ವೇಷಧಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ಸುಧೀರ್ಘ ವರ್ಷಗಳ ಕಾಲ ಅವರು ಕೃಷ್ಣ ವೇಷಧಾರಿಯಾಗಿ  ಮೂಡುಬಿದಿರೆ ಮೊಸರು ಕುಡಿಕೆ ಉತ್ಸವದ ಕೇಂದ್ರ ಬಿಂದುವಾದರು.ಅವರ ನಿಧನಾನಂತರ ೨೦೨0 ರಿಂದ ಅವರ ಸೋದರ ಸಂಬಂಧಿ ಚಂದ್ರಶೇಖರ ಕುಲಾಲ್‌ ಅವರು ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಶತಮಾನದ ಬಳಿಕ ಮತ್ತೆ ಜೀರ್ಣೋದ್ಧಾರ: ಬರೋಬ್ಬರಿ 100 ವರ್ಷಗಳು ಅಂದರೆ ಭರ್ತಿ ಒಂದು ಶತಮಾನದ ಬಳಿಕ, ಕಾಕತಾಳೀಯವೆಂಬಂತೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತದೆ. ದೇವಸ್ಥಾನದ ಈಗಿನ ಆಡಳಿತ ಮೊಕೇಸ್ತರರು ಗುರುಪ್ರಸಾದ್‌ಹೊಳ್ಳರವರ ನೇತೃತ್ವದಲ್ಲಿ 2012ರಲ್ಲಿ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡು, 2017ರಲ್ಲಿ ಬ್ರಹ್ಮ ಕಲಶೋತ್ಸವ, ಪುನರ್‌ಪ್ರತಿಷ್ಠೆ ಕಾರ್ಯಗಳು ನಡೆಯುತ್ತವೆ, ಜೀರ್ಣೋದ್ಧಾರಗೊಂಡಿರುವ ಈ ದೇವಸ್ಥಾನದ ಮುಂದೆ ಸುಂದರವಾದ ಪುಷ್ಕರಣಿಯಿದೆ. ಅತ್ಯಂತ ಶಾಂತಿ, ನೆಮ್ಮದಿಯ ವಾತಾವರಣವಿದೆ. ಸುತ್ತುಪೌಳಿ ಮಾದರಿಯ ಈ ದೇವಸ್ಥಾನದೊಳಗೆ ಗರ್ಭಗುಡಿಯಲ್ಲಿ ಪುರಾತನ ಶ್ರೀ ಕೃಷ್ಣನ ಮೂರ್ತಿಯಿದೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದ ಚತುರ್ಭುಜ ಕೃಷ್ಣನ ಮೂರ್ತಿ ಇಲ್ಲಿದೆ. ಸಾಮಾನ್ಯವಾಗಿ ಚತುರ್ಭುಜ ಮೂರ್ತಿ ಶ್ರೀ ವಿಷ್ಣು ದೇವರದ್ದಾಗಿರುತ್ತದೆ. ಆದರೆ ಈ ಮೂರ್ತಿಯ ಕಾಲಿನಲ್ಲಿ ಗೆಜ್ಜೆಯಿರುವುದರಿಂದ ಸಹಸ್ರಾರು ವರ್ಷಗಳ ಇತಿಹಾಸವಿರುವ ಈ ಮೂರ್ತಿಯನ್ನು ಶ್ರೀ ಕೃಷ್ಣನ ಮೂರ್ತಿ ಎಂದು ಗುರುತಿಸಲಾಯಿತು ಎಂದು ಇಲ್ಲಿನ ಅರ್ಚಕರು ವಿವರಿಸುತ್ತಾರೆ. ಮೂಡುಬಿದಿರೆಯಂತಹ ಸದ್ದುಗದ್ದಲದ ಪೇಟೆಯ ನಡುವೆ ಅತ್ಯಂತ ಪ್ರಶಾಂತವಾಗಿರುವ ಈ ದೇವಸ್ಥಾನ ಶಾಂತಿ ಪ್ರಿಯರಿಗೆ ಹೆಚ್ಚು ಪ್ರಿಯವಾಗುವುದು. ದೇವಸ್ಥಾನದ ತೀರ್ಥಪೀಠದಲ್ಲಿ ಒಂದು ವಿಶೇಷವಾದ ಹಸು-ಕರುವಿನ ಶಿಲಾಮಯ ಪ್ರತಿಮೆಯಿದೆ. ಜೀರ್ಣೋದ್ಧಾರದ ವೇಳೆ ಕಪಿಲಾ ಹಸುವಿನ ಪವಾಡ: ಸಾಮಾನ್ಯವಾಗಿ ಶಿವನ ದೇವಸ್ಥಾನದಲ್ಲಿ ಗರ್ಭ ಗುಡಿಯ ಮುಂದೆ ನಂದಿಯ ವಿಗ್ರಹವಿರುತ್ತದೆ. ಆದರೆ ಶ್ರೀ ಕೃಷ್ಣನ ದೇವಸ್ಥಾನಗಳಲ್ಲಿ ಯಾವುದೇ ಇಂತಹ ವಿಗ್ರಹವಿರುವುದು ಕಡಿಮೆ. ಆದರೆ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭ ಗುಡಿಯ ಮುಂಭಾಗದಲ್ಲಿರುವ ತೀರ್ಥಮಂಟಪದಲ್ಲಿ ಹಸು-ಕರುವಿನ ಶಿಲಾಮಯ ಪ್ರತಿಮೆಯಿದೆ. ಈ ಶಿಲಾಮಯ ಹಸು-ಕರುವಿನ ಪ್ರತಿಮೆಗೆ ಒಂದು ಹಿನ್ನೆಲೆಯಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿತ್ತು. ಈ ವೇಳೆ ಸಾಯಂಕಾಲದ (ಗೋಧೂಳಿ) ಹೊತ್ತಿಗೆ ದೇವಸ್ಥಾನದೊಳಗೆ ಪ್ರವೇಶಿಸಿದ ಕಪಿಲಾ (ಕಬೆತ್ತಿ) ಹಸು 3 ಅಡಿ ಎತ್ತರದ ತೀರ್ಥ ಮಂಟಪ ಹತ್ತಿ ಶ್ರೀ ಕೃಷ್ಣನ ಗರ್ಭಗುಡಿಯತ್ತ ತದೇಕ ಚಿತ್ತದಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ನೋಡುತ್ತಿತ್ತಂತೆ. ಇದನ್ನು  ಗಮನಿಸಿದ ಜೀರ್ಣೋದ್ಧಾರದ ರೂವಾರಿ ಶ್ರೀ ಶಿವಾನಂದ ಪ್ರಭು ಅವರು ಅದರ ಫೋಟೊ ತೆಗೆದು ಸಂಗ್ರಹಿಸಿಟ್ಟುಕೊಂಡರು. ಈ ಪವಾಡ ಸದೃಶವಾದ ಘಟನೆಯು ಜಿಜ್ಞಾಸೆಗೆ ಕಾರಣವಾಯಿತು. ಇದರ ಬಗ್ಗೆ ಚಿಂತಿಸಲು, ಹಸು ಕರುವಿನ ಕೃಷ್ಣ ಶೀಲಾ ಮೂರ್ತಿಗೆ ಸೇವಾರ್ಥಿಗಳೂ ಕೃಷ್ಣಾನುಗ್ರಹದಿಂದ ಕೂಡಲೇ ದೊರಕಿದರು. ಈ ಕುರುಹಾಗಿ ತೀರ್ಥಮಂಟಪದಲ್ಲಿ ಹಸು-ಕರು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೋವಿನ ಈ ಪ್ರತಿಮೆ ಹೆಚ್ಚು ಅರ್ಥಪೂರ್ಣವಾಗಿದೆ. ನೋಡುವವರಿಗೂ ಮುದ ನೀಡುವಂತದ್ದು. ದೂರದೂರುಗಳ ಶ್ರೀ ಕೃಷ್ಣ ದೇವಸ್ಥಾನಗಳಿಗೆ ಭೇಟಿ ನೀಡುವವರು ನಮ್ಮದೇ ಊರಿನ ಈ ಗೋಪಾಲಕೃಷ್ಣ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆಯುವುದು ಒಳ್ಳೆಯದು. ದಿನ ನಿತ್ಯ ಇದೇ ಮಾರ್ಗದಲ್ಲಿ ಓಡಾಡುವವರು ಒಂದು ಬಾರಿ ಇಲ್ಲಿ ಭೇಟಿ ನೀಡಿದರೆ, ಮತ್ತೆ ಆಗಾಗ ಬಂದು ಹೋಗೋಣ ಎನ್ನುವಂತಹ ವಾತಾವರಣ ಇಲ್ಲಿದೆ. ಆ ಮೂಲಕ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗುವ ಸದವಕಾಶವಿದೆ.


ಬಾಕ್ಸ್

ಬದಲಾದ ಮೊಸರು ಕುಡಿಕೆ ಸ್ವರೂಪ: ವರ್ಷಗಳು ಕಳೆದಂತೆ ಮೊಸರು ಕುಡಿಕೆ ಉತ್ಸವದ ಸ್ವರೂಪ ಬದಲಾಯಿತು. ಹುಲಿ ವೇಷದ ಹಿಂದಿನ ಅಬ್ಬರ ಕಡಿಮೆಯಾಯಿತು. ಯೋಗೀಶರ ಅಂಗಡಿ ಬಳಿ ಶ್ರೀ ಕೃಷ್ಣ ಫ್ರೆಂಡ್ಸ್‌ವತಿಯಿಂದ ಮೊಸರು ಕುಡಿಕೆ ಉತ್ಸವದ ಭಾಗವಾಗಿ ನೃತ್ಯ ಕಾರ್ಯಕ್ರಮ ಮತ್ತು ಧಾರ್ಮಿಕ ಕಲಾಪಗಳು ಅದ್ದೂರಿಯಾಗಿ ನಡೆದರೆ, ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಸೆಂಟ್ರಲ್‌ಫ್ರೆಂಡ್ಸ್‌ ವತಿಯಿಂದ ರಸಮಂಜರಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಾರಂಭವಾಯಿತು. ಶ್ರೀ ಕೃಷ್ಣ - ಬಲರಾಮ  ವೇಷಧಾರಿಗಳ ಬದಲಿಗೆ ಶ್ರೀ ಕೃಷ್ಣ ವೇಷಧಾರಿ ಮಾತ್ರ ಉಳಿದರು. ಮಡಿಕೆ ಒಡೆಯುವ ಸ್ವರೂಪ ಮಾತ್ರ ಹಾಗೆಯೇ ಮುಂದುವರಿದಿದೆ. ಈ ಎಲ್ಲಾ ಮನೋರಂಜನೆ ಕಾರ್ಯಕ್ರಮಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಾರಂಭಿಸಿದರು. ಮೊಸರು ಕುಡಿಕೆಯ ಶ್ರೀ ಕೃಷ್ಣನ ಮೂರ್ತಿ ಮತ್ತು ಶ್ರೀ ಕೃಷ್ಣ ವೇಷಧಾರಿ ಹಿಮ್ಮೇಳದೊಂದಿಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮೆರವಣಿಗೆ ಹೊರಟು, ಕೊನೆಗೆ ಅಲ್ಲೇ ಮೆರವಣಿಗೆ ಕೊನೆಗೊಳಿಸುವ ಸಂಪ್ರದಾಯ ಮಾತ್ರ ಹಾಗೆಯೇ ಮುಂದುವರಿದಿದೆ. ಈ ನಡುವೆ ಬಹುತೇಕರಿಗೆ ಈ ಮೊಸರು ಕುಡಿಕೆ ಗೋಪಾಲಕೃಷ್ಣ ದೇವಸ್ಥಾನದ ಮೊಸರುಕುಡಿಕೆಯ ಭಾಗವೆಂಬುದು ತಿಳಿಯದ ಕಾರಣ, ಕೃಷ್ಣಾಷ್ಟಮಿ ದಿನ ಅಥವಾ ಬೇರೆ ಯಾವುದೇ ದಿನಗಳಲ್ಲಾಗಲೀ ಮೂಡುಬಿದಿರೆ ಸುತ್ತಮುತ್ತಲ ಊರುಗಳಲ್ಲಿರುವ ಏಕೈಕ ಶ್ರೀ ಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡುವ ಅಭ್ಯಾಸವೇ ಕಡಿಮೆಯಾಯಿತು.


ಬಾಕ್ಸ್

ಈ ವರ್ಷದ ಕೃಷ್ಣಾಷ್ಟಮಿ ಕಾರ್ಯಕ್ರಮಗಳು:

ಈ ವರ್ಷ ಆಗಸ್ಟ್‌26-27ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಅಷ್ಟಮಿಯ ದಿನವಾದ ಆ.26ರಂದು ಸಂಜೆ ಮೆರವಣಿಗೆಯೊಂದಿಗೆ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ವೆಂಕಟ್ರಮಣ ದೇವಸ್ಥಾನದ ಬಳಿಯ ಶ್ರೀ ಶಿವಾನಂದ ಪ್ರಭುಗಳ ಮನೆಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತರಲಾಗುವುದು.

ಅವರ ಸಹೋದರ ಶ್ರೀ ಜಗನ್ನಾಥ ಪ್ರಭು ಇವರು 2018 ರಿಂದ ಯಶೋದಾ ಕೃಷ್ಣರ ಸುಂದರ ಮೃಣ್ಮಯ ಮೂರ್ತಿಯ ನಿರ್ಮಾಣ ಕಾರ್ಯವನ್ನು ಮಾಡುತ್ತಿದ್ದಾರೆ.

ಅಂದು ಮಧ್ಯಾಹ್ನದಿಂದ ರಾತ್ರಿ ಚಂದ್ರೋದಯದವರೆಗೆ ದೇವಸ್ಥಾನದಲ್ಲಿ ಅಖಂಡ ಭಜನೆ ಕಾರ್ಯಕ್ರಮ ನಡೆಯುವುದು. ಆ ದಿನ ಪ್ರಧಾನ ಸೇವೆಯಾಗಿ ಕೃಷ್ಣಾರ್ಘ್ಯ ಅರ್ಪಣೆಗೊಳ್ಳುತ್ತದೆ. ಇದೇ ಮೊದಲ ಬಾರಿ ಆ.26ರಂದು ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯನ್ನೂ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. 

ಮರುದಿನ ಆ.27ರ ಬೆಳಿಗ್ಗೆ ಯಜ್ಞ ಯಾಗಾದಿ ನಡೆದು, ಮಧ್ಯಾಹ್ನದ ವೇಳೆಗೆ ಶ್ರೀ ಕೃಷ್ಣನ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯುತ್ತದೆ. ಮಧ್ಯಾಹ್ನ ನಂತರ ಶ್ರೀ ಕೃಷ್ಣನ ಬಾಲಲೀಲೆಯ ಪ್ರತೀಕವಾಗಿ ಮೊಸರು ಕುಡಿಕೆ ನಡೆಯಲಿದೆ. ಯಕ್ಷಗಾನ ಶೈಲಿಯ ಶ್ರೀ ಕೃಷ್ಣ ವೇಷದಾರಿಯು ಹಿಮ್ಮೇಳದೊಂದಿಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹೊರಟು ಪೇಟೆಯುದ್ಧಕ್ಕೂ ಕಟ್ಟಿರುವ ಮಡಿಕೆಗಳನ್ನು ಒಡೆಯುತ್ತಾ ಸಾಗುತ್ತಾರೆ. ಎಲ್ಲಾ ಕಡೆಯ ಮಡಿಕೆಗಳನ್ನು ಒಡೆದ ಬಳಿಕ ದೇವಸ್ಥಾನಕ್ಕೆ ಹಿಂದಿರುಗಿ ದೇವಸ್ಥಾನದಲ್ಲಿ ವಸಂತ ಪೂಜೆ ನಡೆದು, ದೇವಸ್ಥಾನದ ಪುಷ್ಕರಣಿಯಲ್ಲಿ ಮೂರ್ತಿ ವಿಸರ್ಜನೆಗೊಂಡು ಕೃಷ್ಣಾಷ್ಟಮಿ ಸಂಪನ್ನಗೊಳ್ಳುತ್ತದೆ. 

ಸಬ್‌ ಸ್ಟೋರಿ..

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಂಪರೆ ಉಳಿಸುವ ಹಾದಿಯಲ್ಲಿ  ಜವನೆರ್‌  ಬೆದ್ರ ತಂಡದ ʻಕೃಷ್ಣೋತ್ಸವʼ

ಸ್ವಚ್ಛ ಭಾರತ, ರಕ್ತದಾನ, ಪರಿಸರ ಪ್ರೇಮ, ಐತಿಹಾಸಿಕ ಕಾಳಜಿ ಸಹಿತ ಬಹಳಷ್ಟು ಸಾಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಜನಪಪ್ರಿಯಗೊಳ್ಳುತ್ತಿರುವ ಜವನೆರ್‌ಬೆದ್ರ ಫೌಂಡೇಶನ್‌(ರಿ. ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಅಲ್ಲದೆ 108 ವರ್ಷಗಳ ಇತಿಹಾಸವುಳ್ಳ ಮೂಡುಬಿದಿರೆ ಮೊಸರು ಕುಡಿಕೆಯ ಪರಂಪರೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಪರಂಪರಾಗತ ಕಾರ್ಯಕ್ರಮಗಳನ್ನು ಮರುಸೃಷ್ಟಿಸುವ ಕಾರ್ಯದಲ್ಲಿ ಜವನೆರ್‌ಬೆದ್ರ ಫೌಂಡೇಶನ್‌ಕಳೆದ ಒಂದು ವರ್ಷದಿಂದ ಹೆಜ್ಜೆಯನ್ನಿಟ್ಟಿದೆ. ಕಳೆದ ವರ್ಷ ಜವನೆರ್‌ಬೆದ್ರ ತಂಡದಿಂದ ಮೂಡುಬಿದಿರೆಯ ಅಮರನಾಥ ಶೆಟ್ಟಿ ವೃತ್ತದ ಬಳಿ ಯಶಸ್ವಿಯಾಗಿ ʻಕೃಷ್ಣೋತ್ಸವʼ ಸಂಭ್ರಮ ಆಚರಿಸಲಾಯಿತು. ಇದೀಗ ಎರಡನೇ ವರ್ಷದ ʻಕೃಷ್ಣೋತ್ಸವʼದ ಸಿದ್ಧತೆ ಭರದಿಂದ ನಡೆದಿದೆ. 

ಅಷ್ಟಮಿದ ಗೊಬ್ಬು: ಈ ವರ್ಷದ ʻಕೃಷ್ಣೋತ್ಸವʼದ ಪ್ರಯುಕ್ತ ಜವನೆರ್‌ಬೆದ್ರ ಫೌಂಡೇಶನ್‌ವತಿಯಿಂದ ಆ.25ರಂದು ʻಅಷ್ಟಮಿದ ಗೊಬ್ಬುʼ ಎಂಬ ಆಟೋಟ ಸ್ಪರ್ಧೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಪಿರಮಿಡ್‌, ತಪ್ಪಂಗಾಯಿ, ನಿಧಿಶೋಧನ, ಲಗೋರಿ, ಒಂಟಿ ಕಾಲು ಓಟ, ಗೋಣಿ ಚೀಲ ಓಟ ಹಾಗೂ ಇತರ ಸಾಂಪ್ರದಾಯಿಕ ಆಟಗಳು ನಡೆಯಲಿವೆ. ಮಹಿಳೆಯರಿಗೆ, ಪುರುಷರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗವಿದೆ. 

ಮುದ್ದುಕೃಷ್ಣ ರೀಲ್ಸ್‌ಸ್ಪರ್ಧೆ: ಜವನೆರ್‌ಬೆದ್ರ ಫೌಂಡೇಶನ್‌ವತಿಯಿಂದ ಮುದ್ದುಕೃಷ್ಣ ರೀಲ್ಸ್‌ಸ್ಪರ್ಧೆಯೂ ನಡೆಯಲಿದೆ. ಸ್ಪರ್ಧೆಯ ಕಾಲಾವಧಿ ಆ.1ರಿಂದ ಆ.25ರವರೆಗೆ. ರೀಲ್ಸ್‌ಒಂದು ನಿಮಿಷ ಮೀರುವಂತಿಲ್ಲ. ಸೃಜನಶೀಲತೆಯನ್ನು ಉಪಯೋಗಿಸಿದ, ಆಕರ್ಷಕ, ಹೆಚ್ಚು ವೀಕ್ಷಣೆಗೊಳಪಡುವ ಹಾಗೂ ಗುಣಾತ್ಮಕ ರೀಲ್ಸ್‌ಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. 

ಮೊಸರು ಕುಡಿಕೆ ಉತ್ಸವ: ಆ.27ರಂದು ಮಧ್ಯಾಹ್ನ 3.00 ಗಂಟೆಯಿಂದ ಮೂಡುಬಿದಿರೆಯ ಅಮರನಾಥ ಶೆಟ್ಟಿ ವೃತ್ತದ ಬಳಿ ನಿರ್ಮಿಸಲಾಗುವ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ʻಕೃಷ್ಣೋತ್ಸವʼ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪದ್ಮಭೂಷಣ ಡಾ. ಕೆ. ಯೇಸುದಾಸ್‌ಇವರ ಶಿಷ್ಯರಾದ ಗಾನಭೂಷಣ ಆರ್ಯಭಟ ಪ್ರಶಸ್ತಿ ವಿಜೇತ ಕೆ. ವೆಂಕಟಕೃಷ್ಣ ಭಟ್‌ಮತ್ತು ಬಳಗದ ಶ್ರೀ ರಾಗಂ ಆರ್ಕೆಸ್ಟ್ರಾ ತಂಡದಿಂದ ʻಭಕ್ತಿಭಾವ ಸಂಗೀತ ರಸಮಂಜರಿʼ ಕಾರ್ಯಕ್ರಮ ನಡೆಯಲಿದೆ. ಖ್ಯಾತ ನಿರೂಪಕ, ನಟ ದೀಕ್ಷಿತ್‌ಕೆ. ಅಂಡಿಂಜೆ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. 

ಸಂಜೆ 5.30ರಿಂದ ಸಭಾ ಕಾರ್ಯಕ್ರಮ, ಸನ್ಮಾನ, ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಮಾಡಿರುವ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರದ ಗುರುತರ ಸೇವೆಯನ್ನು ಗುರುತಿಸಿ ಉದ್ಯಮಿ ಶ್ರೀ ಶಿವಾನಂದ ಪ್ರಭುರವರನ್ನು ಈ ವೇಳೆ ಸನ್ಮಾನಿಸಲಾಗುವುದು. ಸಂಜೆ 6.30ರಿಂದ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್‌ಕೋಡಪದವು ಅವರ ಸಾರಥ್ಯದಲ್ಲಿ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮ: ಸಂಜೆ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಭಾಜಪಾ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್‌, ಅದಾನಿ ಗ್ರೂಪ್ಸ್‌ ಕರ್ನಾಟಕ ಅಧ್ಯಕ್ಷರು ಮತ್ತು ನಿರ್ದೇಶಕರು ಕಿಶೋರ್‌ ಆಳ್ವ, ಎಕ್ಸಲೆಂಟ್‌ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಯುವರಾಜ ಜೈನ್‌, ಉದ್ಯಮಿ ಶ್ರೀಪತಿ ಭಟ್‌, ಚೌಟರ ಅರಮನೆ ಕುಲದೀಪ್‌ ಎಂ., ಮೂಡಾ ಅಧ್ಯಕ್ಷ ಹರ್ಷವರ್ಧನ್‌ ಪಡಿವಾಳ್‌, ಬಿಜೆಪಿ ಮುಖಂಡ ಜಗದೀಶ್‌ ಅಧಿಕಾರಿ, ಜೆಡಿಎಸ್‌ ರಾಜ್ಯ ನಾಯಕಿ ಡಾ. ಅಮರಶ್ರೀ ಶೆಟ್ಟಿ, ವಕೀಲ ಶರತ್‌ ಶೆಟ್ಟಿ, ಉದ್ಯಮಿ ರಾಘವೇಂದ್ರ ಪ್ರಭು, ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಪ್ರಜ್ವಲ್‌ ಆಚಾರ್ಯ, ಬಿಜೆಪಿ ಮೂಡುಬಿದಿರೆ ಪ್ರಧಾನ ಕಾರ್ಯದರ್ಶಿ ರಂಜಿತ್‌ ಪೂಜಾರಿ ತೋಡಾರು, ಪುರಸಭಾ ಸದಸ್ಯ ನಾಗರಾಜ ಪೂಜಾರಿ, ಪುರಂದರ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜವನೆರ್‌ ಬೆದ್ರ ಫೌಂಡೇಶನ್‌ (ರಿ.) ಅಧ್ಯಕ್ಷ ಅಮರ್‌ ಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕೇಸ್ತರರಾದ ಗುರುಪ್ರಸಾದ್‌ ಹೊಳ್ಳ ಸಹಕಾರ ನೀಡಲಿದ್ದಾರೆ ಎಂದು ಜವನೆರ್‌ ಬೆದ್ರ ಫೌಂಡೇಶನ್‌ ಅಧ್ಯಕ್ಷ ಅಮರ್‌ ಕೋಟೆ, ಜವನೆರ್‌ ಬೆದ್ರ ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಜವನೆರ್‌ ಬೆದ್ರ ರಕ್ತ ನಿಧಿ ಸಂಚಾಲಕ ಮನು ಎಸ್. ಒಂಟಿಕಟ್ಟೆ, ಜವನೆರ್‌ ಬೆದ್ರ ಭಕುತಿ ಭಜನಾ ವೃಂದದ ಸಂಚಾಲಕ ಪ್ರಥಮ್‌ ಬನ್ನಡ್ಕರವರ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪರಂಪರೆ ಎತ್ತಿಹಿಡಿಯುವ ಕಾರ್ಯ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹಳೆಯ ಸಂಪ್ರದಾಯದ ವೈಭವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜವನೆರ್‌ ಬೆದ್ರ ತಂಡ ಕಾರ್ಯಾಚರಿಸುತ್ತಿದೆ. ಅದಕ್ಕಾಗಿ ದಶಕಗಳ ಹಿಂದೆ ಗೋಪಾಲಕೃಷ್ಣ ದೇವಸ್ಥಾನದ ನೇತೃತ್ವದಲ್ಲಿ ನಡೆಯುತ್ತಿದ್ದ ಮಾದರಿಯಲ್ಲೇ ಮೊಸರು ಕುಡಿಕೆ ಉತ್ಸವವನ್ನು ʻಕೃಷ್ಣೋತ್ಸವʼ ಶಿರೋನಾಮೆಯಲ್ಲಿ ಜವನೆರ್‌ ಬೆದ್ರ ತಂಡ ಆಯೋಜಿಸುತ್ತಿದೆ. ಅಲ್ಲದೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಎಲ್ಲಾ ಸೇವೆಗಳಲ್ಲಿ ಜವನೆರ್‌ ಬೆದ್ರ ತಂಡ ತನ್ನನ್ನು ತಾನು ತೊಡಗಿಸಿಕೊಂಡಿದೆ, ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಸಂಕ್ರಾಂತಿ ದಿನ ನಡೆಯುವ ಸತ್ಯನಾರಾಯಣ ಪೂಜೆ ಸಹಿತ ಎಲ್ಲಾ ಕಾರ್ಯಗಳಲ್ಲಿ ಈ ತಂಡ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ. ಮಾರ್ಚ್‌ನಲ್ಲಿ ನಡೆಯುವ ದೇವಸ್ಥಾನದ ವಾರ್ಷಿಕ ವರ್ಧಂತಿ ಕಾರ್ಯಕ್ರಮದಲ್ಲೂ ಜವನೆರ್‌ ಬೆದ್ರ ತಂಡ ತನ್ನ ಸೇವೆ ಸಲ್ಲಿಸುತ್ತದೆ. 

ಗೋಪಾಲಕೃಷ್ಣ ದೇಗುಲದಲ್ಲಿ ಜವನೆರ್‌ ಬೆದ್ರ ಫೌಂಡೇಶನ್‌ ದೀಪಾವಳಿಯ ಸಂದರ್ಭ ಗೂಡುದೀಪ ಸ್ಪರ್ಧೆ ಆಯೋಜಿಸುತ್ತದೆ. ಪ್ರತಿ ಶನಿವಾರ ಭಜನೆ ಆಯೋಜಿಸುತ್ತದೆ, ಭಗವದ್ಗೀತೆ ಅಭಿಯಾನವನ್ನೂ ತಂಡ ಕೈಗೊಂಡಿದೆ. ಜ, 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡ ಸ್ಮರಣಾರ್ಥವಾಗಿ ಮುಂದಿನ ವರ್ಷದಿಂದ ಪ್ರತಿ ವರ್ಷ ಆ ದಿನ ನಗರ ಭಜನೆ ಆಯೋಜಿಸಲು ತಂಡ ನಿರ್ಧರಿಸಿದೆ.  ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಅದರ ಜೊತೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಂಪರೆಯನ್ನು ಉಳಿಸುವ ಮಹತ್ವದ ಕಾರ್ಯದಲ್ಲಿ ಕೈಜೋಡಿದೆ. 108 ವರ್ಷಗಳ ಹಿಂದೆ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಸಹಸ್ರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ಉಳಿಸಿಕೊಟ್ಟ ವೇಣೂರು ಕೃಷ್ಣಯ್ಯರ ಹೆಸರನ್ನು ಈ ವರ್ಷದ ಕೃಷ್ಣೋತ್ಸವ ವೇದಿಕೆಗೆ ಇಡುವ ಮೂಲಕ, ಅವರಿಗೂ ಸೂಕ್ತ ಗೌರವವನ್ನು ಅರ್ಪಿಸಿದೆ. ಹೀಗೆ ಜವನೆರ್‌ ಬೆದ್ರ ತಂಡದ ಕಾರ್ಯ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲಿ ಎಂಬುದು ನಮ್ಮ ಹಾರೈಕೆ

Post a Comment

0 Comments