ದಿ. ಡಾ.ಪಾದೂರು ಗುರುರಾಜ್ ಭಟ್ ತುಳುನಾಡಿನ ಇತಿಹಾಸದ ವಿಶ್ವಕೋಶ : ಪುಂಡಿಕಾಯ್ ಗಣಪಯ್ಯ ಭಟ್

ಜಾಹೀರಾತು/Advertisment
ಜಾಹೀರಾತು/Advertisment

 ದಿ. ಡಾ.ಪಾದೂರು ಗುರುರಾಜ್  ಭಟ್  ತುಳುನಾಡಿನ ಇತಿಹಾಸದ ವಿಶ್ವಕೋಶ : ಪುಂಡಿಕಾಯ್ ಗಣಪಯ್ಯ ಭಟ್

ಮೂಡುಬಿದಿರೆ: ಇತಿಹಾಸವನ್ನೇ ಜನ ಸಾಮಾನ್ಯರತ್ತ ಕೊಂಡೊಯ್ದ ಮಹಾನ್ ಸಾಧಕರಾಗಿದ್ದ  ದಿ.ಡಾ.ಗುರುರಾಜ್ ಭಟ್ ಅವರು ತುಳುನಾಡಿನ ಇತಿಹಾಸದ ವಿಶ್ವಕೋಶವಾಗಿದ್ದರು ಎಂದು ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.



 ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ, ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ವತಿಯಿಂದ ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕ ದಿ. ಡಾ. ಪಾದೂರು ಗುರುರಾಜ ಭಟ್ ನೂರರ ನೆನಪು ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ನೀಡಿದರು.


  ಪಾದೂರು ಗುರುರಾಜ ಭಟ್ಟರು ತುಳುನಾಡಿನ ಇತಿಹಾಸ ರೂಪಿಸುವಲ್ಲಿ ತನ್ನ ಬದುಕನ್ನೇ ಸಮರ್ಪಿಸಿಕೊಂಡವರು  ಅವರು  ಇತಿಹಾಸಕಾರರಾಗಿ ಕ್ಷೇತ್ರಕಾರ್ಯಕ್ಕೆ ಮಹತ್ವ ನೀಡಿದ ಪರಿಶ್ರಮಿ. ತುಳುನಾಡಿನ ದೇವಾಲಯಗಳು, ಮೂರ್ತಿ ಶಿಲ್ಪಗಳ ಕುರಿತ ಅಧ್ಯಯನಕ್ಕೆ ನಾಂದಿಹಾಡಿದ ಭಟ್ಟರು ಸಂಶೋಧನೆಯನ್ನೇ ಬದುಕಾಗಿಸಿಕೊಂಡ ಮಹಾನುಭಾವ ಎಂದು ಅವರು ವಿವರಿಸಿದರು. 


ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ  ಇತಿಹಾಸವೇ ನಮ್ಮ ಶಕ್ತಿ.ಇತಿಹಾಸದ ಕಾಳಜಿಯೊಂದಿಗೆ ಯುವ ಜನತೆ ಗುರುರಾಜ ಭಟ್ಟರ ಸಾಧನೆ ಸಂಶೋಧನೆಗಳಿಂದ ಸ್ಫೂರ್ತಿ ಪಡೆದು ಶೈಕ್ಷಣಿಕವಾಗಿ ಸಾಧನೆ, ಸಂಶೋಧನೆಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದರು.


ಅತಿಥಿಯಾಗಿದ್ದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ, ಡಾ. ಪಾದೂರು ಗುರುರಾಜ ಭಟ್ ಅವರ ಪುತ್ರರಾದ ಪಿ.ವಿಶ್ವನಾಥ ಭಟ್, ಪಿ.ಪರಶುರಾಮ ಭಟ್, ಪಿ. ಮಹೇಶ್ ಭಟ್ , ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕಾರಾಮ ಪೂಜಾರಿ, ಮತ್ತಿತರ ಗಣ್ಯರು ಉಪ ಸ್ಥಿತರಿದ್ದರು.

ಮೂಡುಬಿದಿರೆ ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು. ಮಹಾದೇವ ಮೂಡುಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments