ಭರತನಾಟ್ಯ ಕಲಾವಿದೆ ಮಹತಿ ಪಾವನಸ್ಕರ್ ಇವರ ಭರತನಾಟ್ಯ ರಂಗ ಪ್ರವೇಶ
ದಕ್ಷಿಣ ಕನ್ನಡ : ಭರತನಾಟ್ಯ ಕಲಾವಿದೆ ಮಹತಿ ಪಾವನಸ್ಕರ್ ಇವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ದಿನಾಂಕ 12 ರಂದು ಮಂಗಳೂರು ನಗರದ ಪುರಭವನದಲ್ಲಿ ಸಂಜೆ 5:30ಕ್ಕೆ ದೀಪ ಪ್ರಜ್ವಲನ, ಜನಸ್ಥೋಮ, ಕರತಾಡನ ದೊಂದಿಗೆ ವಿದ್ಯುಕ್ತವಾಗಿ ಆರಂಭವಾಗಿ, ಕರಾವಳಿ ಕರ್ನಾಟಕದ ಜನರ ಮನಸೂರೆಗೊಂಡು, ಯಶಸ್ವಿ ಕಾರ್ಯಕ್ರಮ ಎನಿಸಿತು.
ಪುರಭವನದಲ್ಲಿ ತುಂಬಿದ ಸಭೆಯಲ್ಲಿ, ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ, ಹಾಗೂ ಮಹತಿ ಪಾವನಸ್ಕರ್ ಇವರ ಗುರುಗಳೂ ಆದ ವಿದ್ಯಾಶ್ರೀ ರಾಧಾಕೃಷ್ಣ ಇವರನ್ನು ಮಹತಿ ಪಾವನಸ್ಕರ್ ಇವರ ಕುಟುಂಬ ಗುರುಕಾಣಿಕೆ ನೀಡಿ ಗೌರವಿಸಿ ಧನ್ಯತಾ ಭಾವ ಮೆರೆಯಿತು
ಸುಮಾರು 2 ಗಂಟೆಗಳ ಭರತನಾಟ್ಯ, ಅನುಭವಿ ಹಿಮ್ಮೇಳ, ಗಾಯನ, ಇವೆಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂತು
ನಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಶೆಕೋಡಿ ಸೂರ್ಯನಾರಾಯಣ ಭಟ್ಟರು, ಮಹತಿ ಮಹತ್ತರವಾದದ್ದನ್ನ ಸಾಧಿಸಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಪ್ರಾಯದಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾಳೆ, ಮಹತಿ ಪಾವನಸ್ಕರ್ ಇವರ ಕಲಾ ಸೇವೆ ಮತ್ತು ವಿದ್ಯಾಭ್ಯಾಸ ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು, ಈ ಸಾಧನೆಗೆ ಪ್ರೋತ್ಸಾಹ ನೀಡಿದ ಹೆತ್ತವರಾದ ಮಾಲಿನಿ ಮತ್ತು ಹರೀಶ್ ಭಟ್ಟರನ್ನು ಅಭಿನಂದಿಸಿದರು, ಸಮಾಜದಲ್ಲಿ ಹೆತ್ತವರ ಪಾತ್ರ ಮತ್ತು ಮಾದರಿ ಕರ್ತವ್ಯದ ಕುರಿತು ಮಹತಿ ಇವರ ಹೆತ್ತವರು ಮಾದರಿ ಎಂದರು.
ಮಹತಿ ಪಾವನಸ್ಕರ್ ಪ್ರಸ್ತುತ ಮಂಗಳೂರಿನ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಓದುತ್ತಿದ್ದು, ಹೆತ್ತವರ, ಪೋಷಕರ , ಹಾಗೂ ಶಾಲಾ ಶಿಕ್ಷಕರರಿಂದ ಸಿಕ್ಕ ಪ್ರೋತ್ಸಾಹ ಮತ್ತು ಭರತನಾಟ್ಯ ಗುರುಗಳಾದ ವಿದ್ಯಾಶ್ರೀ ರಾಧಾಕೃಷ್ಣ ಇವರ ಭರತನಾಟ್ಯ ಶಿಕ್ಷಣ ಹಾಗೂ ಮಾರ್ಗದರ್ಶನ ಮಹತಿ ಪಾವನಸ್ಕರ್ ಇವರ ಸಾಧನೆಗೆ ಸಹಕಾರಿಯಾಯಿತು.
ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಉಳ್ಳಾಲ ಮೋಹನ್ ಕುಮಾರ್, ಕಟೀಲು ಶ್ರೀಕರ ಅಸ್ರಣ್ಣ, ಕಶೆಕೋಡಿ ಸೂರ್ಯನಾರಾಯಣ ಭಟ್ ಮಹತಿ ಇವರ ಹೆತ್ತವರಾದ ಮಾಲಿನಿ ಹಾಗೂ ಹರೀಶ್ , ವಿದ್ಯಾಶ್ರೀ ರಾಧಾಕೃಷ್ಣ, ಮುಂತಾದವರು ಭಾಗವಹಿಸಿದರು.
ಭರತನಾಟ್ಯ ರಂಗಪ್ರವೇಶ ಸಾಂಸ್ಕೃತಿಕ ಕಾರ್ಯಕ್ರಮದ ಹಿಮ್ಮೇಳದಲ್ಲಿ ಮತ್ತು ಗಾಯನದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅದ್ಭುತ ಕಲಾವಿದರು ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಜನರ ಮನಸ್ಸಿನಲ್ಲಿ ಮಹತಿ ಇವರ ಭರತನಾಟ್ಯ ಕಾರ್ಯಕ್ರಮ ಅಚ್ಚಳಿಯದೆ ಉಳಿಯುವಂತೆ ಮಾಡಿದರು
ಕಾರ್ಯಕ್ರಮದ ಕೊನೆಯಲ್ಲಿ ಪುರಭವನದಲ್ಲಿನ ಪ್ರೇಕ್ಷಕರು ಎಲ್ಲರೂ ಎದ್ದು ನಿಂತು ಸುಮಾರು 5 ನಿಮಿಷಗಳ ಕಾಲ ಚಪ್ಪಾಳೆ, ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದು, ಭರತನಾಟ್ಯ ಜನಮನ್ನಣೆ ಗಳಿಸಿರುವುದಕ್ಕೆ ಸಾಕ್ಷಿಯಾಯಿತು.
ಮಂಗಳೂರಿನ ನೃತ್ಯ ಗಾನ ಸಂಸ್ಥೆ ಏರ್ಪಡಿಸುವ ಈ ಕಾರ್ಯಕ್ರಮದಲ್ಲಿ, ಶ್ರೀಮತಿ ಸುಮಂಗಲ ರತ್ನಾಕರ್ ಇವರು ಅಚ್ಚುಕಟ್ಟಾಗಿ ಸಭಾ ಕಾರ್ಯಕ್ರಮ ನಿರ್ವಹಿಸಿದರು.
0 Comments