ಮೂಡುಬಿದಿರೆಯಲ್ಲಿ ಮತ್ತೆ "ನೋ ಎಂಟ್ರಿ" ನಾಮಫಲಕ ಅಳವಡಿಕೆ
ಮೂಡುಬಿದಿರೆ: ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಯಲು ಮತ್ತು ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕೆನ್ನುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಮೂಡುಬಿದಿರೆ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶುಕ್ರವಾರ 6 ಕಡೆಗಳಲ್ಲಿ "ನೋ ಎಂಟ್ರಿ" ನಾಮಫಲಕಗಳನ್ನು ಅಳವಡಿಸಲಾಯಿತು.
ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಜತೆಗೆ ರಸ್ತೆ ಸಂಚಾರದ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಇದನ್ನು ಸರಿಪಡಿಸಲು ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರೂ ಕೂಡಾ ಕೈ ಜೋಡಿಸಿದರೆ ಮಾತ್ರ ಕಾರ್ಯಗಳು ಸಫಲವಾಗಲು ಸಾಧ್ಯವಿದೆ ಎಂಬುದನ್ನು ಅರಿತ ರೋಟರಿ ಕ್ಲಬ್ ಕಳೆದ ಸೋಮವಾರದಂದು ಸಮ್ಮಿಲನ್ ಹಾಲ್ ನಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ನಡೆದ ರಸ್ತೆ ಸುರಕ್ಷತಾ ಅರಿವು ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೊದಲಿಗೆ ಮೂಡುಬಿದಿರೆ ರೋಟರಿ ಕ್ಲಬ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಭೆ ನಡೆಸಿ "ಸಂಚಾರ ನಿಷೇಧ" ದ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ತೀರ್ಮಾನವನ್ನು ಕೈಗೊಂಡಿತ್ತು.
ಅದರಂತೆ ಆಳ್ವಾಸ್ ರಸ್ತೆಯಿಂದ ಪೇಟೆಗೆ ಬರುವ ರಸ್ತೆ, ಖಾಸಗಿ ಬಸ್ ನಿಲ್ದಾಣದಿಂದ ಕೆಳಗಿಳಿಯುವ ರಸ್ತೆ, ಬಸ್ ನಿಲ್ದಾಣ- ಮಸೀದಿ ರಸ್ತೆ, ಪಟ್ಟಾಡಿ- ಮಸೀದಿ ರಸ್ತೆ, ಅಮರಶ್ರೀ ಟಾಕೀಸ್ - ಹನುಮಾನ್ ದೇವಸ್ಥಾನದ ರಸ್ತೆ ಹಾಗೂ ಸತ್ಯನಾರಾಯಣ ಕಟ್ಟೆಯಿಂದ -ಅಮರಶ್ರೀ ಟಾಕೀಸ್ ರಸ್ತೆಯ ಬಳಿ " ನೋ ಎಂಟ್ರಿ" ನಾಮಫಲಕಗಳನ್ನು ಅಳವಡಿಸಲಾಗಿದೆ ಇದಕ್ಕೆ ಪುರಸಭೆ ಮತ್ತು ಪೊಲೀಸ್ ಇಲಾಖೆಯೂ ಸಹಕಾರ ನೀಡಿದೆ.
ಈಗ ಅಳವಡಿಸಿರುವ ನಾಮಫಲಕಗಳ ಜಾಗದಲ್ಲಿ 5 ವರ್ಷಗಳ ಹಿಂದೊಮ್ಮೆ ಇಂತದ್ದೇ ಸಂಚಾರ ನಿಷೇಧದ ನಾಮಫಲಕಗಳನ್ನು ಅಳವಡಿಸಲಾಗಿತ್ತು ಆಗ ವಾಹನ ಸವಾರರು ಈ ನಿಯಮವನ್ನು ಪಾಲಿಸುತ್ತಿದ್ದರು ಆದರೆ ಕಾಲಕ್ರಮೇಣ ನಿಯಮವನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಯಿತು. ಅಲ್ಲದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದವರು ಕೂಡಾ ಕೈಕಟ್ಟಿ ನಿಂತುಕೊಳ್ಳಲು ಆರಂಭಿಸಿದರು. ಇದೀಗ ಸಮಸ್ಯೆಯನ್ನು ಕಂಡಿರುವ ವಿವಿಧ ಸಂಘ ಸಂಸ್ಥೆಗಳು ಮತ್ತೆ ಸಂಚಾರ ನಿಯಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೊರಟಿರುವುದು ಶ್ಲಾಘನೀಯ.
ಇನ್ನು ಎಲ್ಲೆಂದರಲ್ಲಿ ಸಿಗುವ ಸಣ್ಣ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ವಾಹನಗಳನ್ನು ನುಗ್ಗಿಸಿಕೊಂಡು ಹೋಗುತ್ತಿರುವ ವಾಹನಗಳನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ಒಂದು ವಾರದಲ್ಲಿ "ಘನ ವಾಹನ ಸಂಚಾರ ನಿಷೇಧ" ಎಂಬ ನಾಮಫಲಕವನ್ನೂ ಅಳವಡಿಸಲಾಗುತ್ತದೆ ಎಂದು ರೋಟರಿ ಕ್ಲಬ್ ನ ಹಿರಿಯ ಸದಸ್ಯ ಪಿ.ಕೆ.ಥೋಮಸ್ ತಿಳಿಸಿದ್ದಾರೆ.
0 Comments