ಮೂಡುಬಿದಿರೆ: ವೇಣೂರು ಭಗವಾನ್ ಬಾಹುಬಲಿ ಸ್ವಾಮಿಗೆ ಇದೇ ೨೬ರಂದು ಒಂದು ದಿನದ ಮಹಾ ಮಸ್ತಕಾಭಿಷೇಕವು ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ದಂಪತಿ ಹಾಗೂ ಅವರ ಕುಟುಂಬಸ್ಥರ ಸೇವಾರೂಪದಲ್ಲಿ ನಡೆಯಲಿದೆ ಎಂದು
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ ೧೧ಕ್ಕೆ ಜೈನ್ ಮಿಲನ್ ಸದಸ್ಯರಿಂದ ಜಿನಭಜನೆ, ಅಪರಾಹ್ನ ೩ ಗಂಟೆಗೆ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮದ ಪಾವನ ಸಾನಿದ್ಯವನ್ನು ಮುನಿಶ್ರೀಗಳಾದ ೧೦೮ ಅಮೋಘ ಕೀರ್ತಿ ಮಹಾರಾಜರು, ೧೦೮ ಅಮರಕೀರ್ತಿ ಮಹಾರಾಜರು ಹಾಗೂ ಕನಕಗಿರಿ ಜೈನ ಮಠದ ಸ್ವಸ್ತಿ ಭುವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ವಹಿಸಲಿರುವರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಪದ್ಮಪ್ರಸಾದ್ ಅಜಿಲ ಉಪಸ್ಥಿತರಿರಲಿದ್ದು ಮೈಸೂರು ಅರಮನೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಚತೆ ವಹಿಸಲಿದ್ದಾರೆ ಎಂದರು.
ಇದೇ ಸಂದರ್ಭ ಅಂಚೆ ಇಲಾಖೆಯು ವೇಣೂರು ಬಾಹುಬಲಿಯ ಸಚಿತ್ರ ಅಂಚೆ ಕಾರ್ಡ್ನ್ನು ಲೋಕಾರ್ಪಣೆಗೊಳಿಸಲಿದೆ.
ಒಟ್ಟು ೨೧೬ ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದ್ದು ಒಂದು ಕಲಶವನ್ನು ಸಂಜೆ ಅಗ್ರೋದಕ ಮೆರವಣಿಗೆಯಲ್ಲಿ ಬಾಹುಬಲಿ ಬೆಟ್ಟಕ್ಕೆ ತರಲಾಗುವುದು. ಸಂಜೆ ೬.೩೦ಕ್ಕೆ ದಿನದ ಮೊದಲ ಅಭಿಷೇಕ ನಡೆಯಲಿದ್ದು ಬಳಿಕ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಜ್ಞಾನ ಐತಾಳ ನೇತ್ರತ್ವದ ಹೆಜ್ಜೆನಾದ ಮಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಆಡಿತಾಧಿಕಾರಿ ಹರೀಶ್ ಶೆಟ್ಟಿ, ಉಪನ್ಯಾಸಕ ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು.
0 Comments