ಈ ಬಜೆಟ್ ದೇಶದ ಭವಿಷ್ಯದ ದೃಷ್ಟಿಕೋನ ಹೊಂದಿದೆ: ವಿಕಸಿತ ಭಾರತದ ಮುನ್ನುಡಿಯಾಗಿದೆ-ಕೋಟ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ನ್ನು ಇಂದು ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು ಮಂಡಿಸಿದ್ದು ಈ ಬಜೆಟ್ ಭಾರತದ ಸರ್ವಾಂಗೀಣ ಅಭಿವೃದ್ಧಿ ಹಾಗೂ ವಿಕಸಿತ ಭಾರತ ಸಂಕಲ್ಪದ ಅಡಿಪಾಯವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಬಡ ಸಮುದಾಯದ ಕುಟುಂಬಗಳಿಗೆ 4 ಕೋಟಿ ಮನೆಗಳ ನಿರ್ಮಾಣ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ ಯೋಜನೆ ವಿಸ್ತರಣೆ, 41000 ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಯೋಜನೆಯಡಿ ವಿಸ್ತರಣೆ, ಮತ್ಸ್ಯ ಸಂಪದ ಯೋಜನೆಯ ಮೂಲಕ ಕರಾವಳಿಯಲ್ಲಿ ಕರಾವಳಿಯಲ್ಲಿ ಹೊಸ ಬಂದರುಗಳ ನಿರ್ಮಾಣ, ಪ್ರವಾಸೋದ್ಯಮಕ್ಕೆ 75000 ಕೋಟಿ ರೂಪಾಯಿ, ಲಕ್ಷದ್ವೀಪವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತನೆ, ಯಾವುದೇ ಹೆಚ್ಚುವರಿ ತೆರಿಗೆ ಅಥವಾ ಬಡ್ಡಿಯಿಲ್ಲದೆ ರಾಜ್ಯಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ಹಾಗೂ ಇತರೆ ಅದ್ಭುತ ಯೋಜನೆಗಳನ್ನು ಘೋಷಿಸಲಾಗಿದೆ. ವಿಶೇಷವಾಗಿ ಒಂದು ಕೋಟಿ ಮನೆಗೆ ಸಬ್ಸಿಡಿ ಸಹಿತ ಸೋಲಾರ್ ಬಳಕೆ ಮಾಡಿ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಯೋಜನೆಯು ಬಡ ಜನರು ಹಾಗೂ ಮಹಿಳೆಯರ ಸ್ವಾವಲಂಬಿ ಹಾಗೂ ಆರೋಗ್ಯಪೂರ್ಣ ಬದುಕಿಗೆ ಮಾರ್ಗವಾಗಿದೆ. ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದಕ್ಕೆ ಮುನ್ನುಡಿಯಾಗಿ ಈ ಬಜೆಟ್ ಮಂಡನೆಯಾಗಿದೆ. ಇದೊಂದು ದೂರದೃಷ್ಟಿಯುಳ್ಳ ಬಜೆಟ್ ಆಗಿದ್ದು ಇದು ಭವಿಷ್ಯದ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ" ಎಂದು ಹೇಳಿದರು.
0 Comments