ಸಂಗೀತ ರಸಸಂಜೆಯೊಂದಿಗೆ 29 ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ -2023 ಸಮಾಪನ
* ಸಂಗೀತ ಲೋಕದ ಮೂವರು ದಿಗ್ಗಜರಿಗೆ "ಆಳ್ವಾಸ್ ವಿರಾಸತ್-2023" ಪಶಸ್ತಿ ಪ್ರದಾನ
ಮೂಡುಬಿದಿರೆ: 29 ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ -೨೦೨೩ರ ಪ್ರಶಸ್ತಿಯನ್ನು ಸಂಗೀತ ಲೋಕದ ದಿಗ್ಗಜರಾದ ಡಾ.ಮೈಸೂರು ಮಂಜುನಾಥ್, ಡಾ.ಪ್ರವೀಣ್ ಗೋಡ್ಕಿಂಡಿ ಹಾಗೂ ವಿಜಯ ಪ್ರಕಾಶ್ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ಮೈಸೂರು ಮಂಜುನಾಥ್ ಅವರಿಗೆ ವಯೋಲಿನ್ ಮೂಲಕ, ಡಾ.ಪ್ರವೀಣ್ ಗೋಡ್ಖಿಂಡಿ ಅವರಿಗೆ ಡ್ರಮ್ಸ್, ಕೊಳಲು ಸಂಗೀತದಿಂದ ಹಾಗೂ ವಿಜಯ ಪ್ರಕಾಶ್ ಅವರಿಗೆ " ಜೈ ಹೋ ಜೈ ಹೋ" ಹಾಡಿನ ಮೂಲಕ ಶಾಲು, ಸ್ಮರಣಿಕೆ, ಫಲಪುಷ್ಪ ಮತ್ತು 1 ಲಕ್ಷ ನಗದು ನೀಡಿ ಗೌರವ ಸಲ್ಲಿಸಲಾಯಿತು.
ಪ್ರಶಸ್ತಿಗೆ ಉತ್ತರಿಸಿದ ಡಾ.ಮೈಸೂರು ಮಂಜುನಾಥ್ ಅವರು ಬಲು ಉತ್ಕ್ರಷ್ಠವಾದ ಈ ಪುರಸ್ಕಾರ ಯಾವುದೇ ರಾಷ್ಟ್ರೀಯ ಪುರಸ್ಕಾರಗಳಿಗಿಂತ ಕಡಿಮೆಯಿಲ್ಲ. ಕಲೆ, ಸಂಸ್ಕೃತಿ, ಶಿಕ್ಷಣ, ಸಂಸ್ಕಾರ ಹಾಗೂ ಸಮಾಜಸೇವೆ ಎಂದು ಭಾವಿಸಿ ಸಮಸ್ತ ವಿಚಾರಗಳನ್ನು ಆದರಿಸಿ ಗೌರವವಿದ್ದರೆ ಅದು ಮೂಡುಬಿದಿರೆಯ ಆಳ್ವರದ್ದು. ಮೂಡುಬಿದಿರೆ ಎಂದರೆ ಊರು ಎಂದು ಕರೆಯಲೋ ಅಥವಾ ಕ್ಷೇತ್ರ ಎಂದು ಕರೆಯುವುದೇ ಎಂದು ತಿಳಿಯದಾಗಿದೆ. ಮೂಡುಬಿದಿರೆಯ ಸ್ಕೇಲನ್ನು ಮಾಪಕವಾಗಿ ಆಳ್ವರು ಬೆಳೆಸಿದ್ದಾರೆ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿ, ಸಂಗೀತ ಕಲೆಗಳು ಮನಸುಗಳನ್ನು ಅರಳಿಸುತ್ತವೆ. ಸಂಗೀತ ಕಲೆಗಳ ಮೂಲಕ ಜಗತ್ತಿಗೆ ಕಲೆಯನ್ನು ಪರಿಚಯಿಸಿದವರು ಈ ಮೂವರು ದಿಗ್ಗಜರು. ಈ ಕಲೆ, ಕಲಾವಿದರನ್ನು ಮೂಡುಬಿದಿರೆಯ ಆಳ್ವಾಸ್ ಗೆ ಕರೆಸಿ ಸಂಗೀತದ "ಸ್ವರ್ಗಲೋಕ" ವನ್ನು ಸೃಷ್ಠಿಸಿದವರು ಆಳ್ವರು ಎಂದರು.
ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸೌಂದರ್ಯ ಪ್ರಜ್ಞೆ ಇಲ್ಲದ ಕಲಾವಿದರು ಮತ್ತು ಪ್ರೇಕ್ಷಕರು ಬಹಳ ಅಪಾಯಕಾರಿ ಮನಸ್ಥಿತಿಯವರಾಗಿರುತ್ತಾರೆ. ಹುಚ್ಚು ಮನಸಿನ ಪ್ರೇಕ್ಷಕ ವರ್ಗ ಸೃಷ್ಟಿಯಾಗಬಾರದು. ಪ್ರೇಕ್ಷಕ ವರ್ಗ ಭ್ರಷ್ಟರಾದರೆ ಕಲಾವಿದರೂ ಭ್ರಷ್ಟರಾಗುತ್ತಾರೆಂದು ಎಚ್ಚರಿಸಿದರು. ಈ ಬಾರಿಯ ವಿರಾಸತ್ ನಲ್ಲಿ ಕೃಷಿ ಮೇಳ,ಆಹಾರ ಮೇಳ, ಪುಷ್ಪಮೇಳ, ಚಿತ್ರಕಲಾ ಮೇಳ, ಕರಕುಶಲ ಪ್ರದರ್ಶನ ಮೇಳ, ಕಲಾಕೃತಿಗಳ ಪ್ರದರ್ಶನ ಮೇಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಹೀಗೆ ಏಳು ಮೇಳಗಳನ್ನು ಆಯೋಜಿಸುವ ಮೂಲಕ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ನ ರಾಜ್ಯ ಆಯುಕ್ತ ಪಿ.ಆರ್.ಸಿಂಧ್ಯಾ,ಮಣಿಪುರದ ಮಾಜಿ ಸಂಸದ ನಾ.ರಾ.ಸಿಂಗ್, ಉದ್ಯಮಿ ಶ್ರೀಪತಿ ಭಟ್,ಶಾರದಾ ವಿದ್ಯಾಲಯದ ಎಂ.ಬಿ.ಪುರಾಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಂತರ ಪುರಸ್ಕಾರ ಪಡೆದುಕೊಂಡಿರುವ ಸಂಗೀತ ಲೋಕದ ಮೂವರು ದಿಗ್ಗಜರಿಂದ ತಾಳ-ವಾದ್ಯ- ಸಂಗೀತ ಕಾರ್ಯಕ್ರಮ, ಖ್ಯಾತ ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಅವರಿಂದ "ಸಂಗೀತ ರಸಸಂಜೆ" ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವದೊಂದಿಗೆ ಕಳೆದ ನಾಲ್ಕು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ಕೆ.ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರಲ್ಲಿ ನಡೆದ 29ನೇ ವರ್ಷದ ಆಳ್ವಾಸ್ ವಿರಾಸತ್ ಸಮಾಪನಗೊಂಡಿತು.
0 Comments