ಡಿ.12 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಿಸಾನ್ ಸಂಘದಿಂದ ಹಕ್ಕೋತ್ತಾಯ ಪ್ರತಿಭಟನಾ ಜಾಥಾ
ಮೂಡುಬಿದಿರೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಮೂಡುಬಿದಿರೆ ತಾಲೂಕು ವತಿಯಿಂದ ಡಿ. ೧೨ರಂದು ಮೂಡುಬಿದಿರೆಯಲ್ಲಿ `ರೈತರ ಹಕ್ಕೊತ್ತಾಯ ಪ್ರತಿಭಟನಾ ಜಾಥಾ' ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ತಿಳಿಸಿದರು.
ಅವರು ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಪುರಸಭಾ ವ್ಯಾಪ್ತಿಯ ೩ ಕಿಮೀ ಟವರ್ ಲೊಕೇಶನ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಕಾನೂನಿನಲ್ಲಿದ್ದ ಭೂಮಂಜೂರಾತಿ ಕಾಯ್ದೆಯನ್ನು ಸರಕಾರ ರದ್ದುಪಡಿಸಿರುವುದನ್ನು ವಾಪಾಸ್ ಪಡಕೊಂಡು ಈ ಹಿಂದಿನ ನಿಯಮವನ್ನೆ ಮುಂದುವರಿಸಬೇಕು, ಕುಮ್ಕಿ ಭೂಮಿಯ ಹಕ್ಕನ್ನು ರೈತರಿಗೆ ನೀಡಬೇಕು ಹಾಗೂ ಸರಕಾರಿ ಪಹಣಿ ಪತ್ರಿಕೆ ೧೧ನೇ ಕಾಲಂನಲ್ಲಿ ಕುಮ್ಕಿದಾರನ ಹೆಸರನ್ನು ಸರಕಾರ ನಮೂದಿಸಲು ಆದೇಶ ನೀಡಬೇಕು. ನೀರಾವರಿ ಪಂಪ್‌ಸೆಟ್‌ಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅದರ ಖರ್ಚು ವೆಚ್ಚಗಳನ್ನು ರೈತರೆ ಭರಿಸದಬೇಕೆಂಬ ಸರಕಾರ ವಿಧಿಸಿರುವ ಹೊಸ ಷರತ್ತುಗಳನ್ನು ರದ್ದುಪಡಿಸಿಬೇಕು, ಕೊಳವೆ ಬಾವಿಗೆ ಮಳೆನೀರು ಮರುಪೂರಣ ಕಡ್ಡಾಯಗೊಳಿಸುವ ಬಗ್ಗೆ ಸರಕಾರ ನಿಯಮ ಜಾರಿಗೆ ತರಬೇಕು. ರೈತರ ಅನುಮತಿ ಪಡೆಯದೆ ಸರಕಾರ ಕೃಷಿಭೂಮಿಯಲ್ಲಿ ವಿದ್ಯುತ್ ತಂತಿ ಎಳೆಯುವುದು ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಾರದು. ರೈತರ ಒಪ್ಪಿಗೆ ಪಡಕೊಂಡರೆ ಸದ್ರಿ ಜಾಗಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದರು.
ರೈತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರಕಾರ ವಿಫಲವಾಗಿರುವುದರಿಂದ ರೈತರ ಬದುಕು ದುಸ್ತರವಾಗಿದೆ. ರೈತರ ಹಕ್ಕುಗಳಿಗಾಗಿ ಭಾರತೀಯ ಕಿಸಾನ್ ಸಂಘ ದ.ಕ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಮೂಡಿಸುತ್ತಾ ಬಂದರೂ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಇದಕ್ಕಾಗಿ ಎಚ್ಚರಿಕೆ ನೀಡಲು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ೧೨ರಂದು ಬೆಳಿಗ್ಗೆ ೧೦:೩೦ಕ್ಕೆ ಸಮಾಜ ಮಂದಿರದ ಬಳಿಯಿಂದ ಜಾಥಾ ಆರಂಭಿಸಿ ಬಸ್‌ನಿಲ್ದಾಣದ ಮೂಲಕ ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಇದರ ಮುಂದಿನ ಭಾಗವಾಗಿ ಜನವರಿ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕಿಸಾನ್ ಸಂಘದ ಪ್ರಮುಖರಾದ ವಸಂತ ಭಟ್, ಜಾಯ್ಲಸ್ ಡಿಸೋಜಾ, ನಾರಾಯಣ ಭಟ್, ರಾಧಾಕೃಷ್ಣ ಶೆಟ್ಟಿ, ವಸಂತ ಶೆಟ್ಟಿ, ಪ್ರವೀಣ್ ಕುಮಾರ್ ಮತ್ತಿತರರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments