ಮೂಡುಬಿದಿರೆ: ಬಾಗಿಲು ಮುರಿದು ಒಂದೂವರೆ ಲಕ್ಷ ದೋಚಿದ ಕಳ್ಳರು
ಮೂಡುಬಿದಿರೆ : ಇಲ್ಲಿನ 60ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡ ಕಳ್ಳರು ಸಮಿತಿಯ ಪ್ರಧಾನ ಕಾರ್ಯದರ್ಶಿಯ ಮನೆಗೆ ನುಗ್ಗಿ ಒಂದೂವರೆ ಲಕ್ಷ ರೂವನ್ನು ದೋಚಿದ ಘಟನೆ ಶನಿವಾರ ರಾತ್ರಿ ಮಾಸ್ತಿಕಟ್ಟೆಯಲ್ಲಿ ನಡೆದಿದೆ.
ಸಮಿತಿಯ ಕಾರ್ಯದರ್ಶಿ, ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ.ಅವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಬಾಲ್ಕಾಣಿಯ ಬಾಗಿಲನ್ನು ಮುರಿದ ಯಾರೋ ಕಳ್ಳರು ಮನೆಯ ಕಪಾಟಿನಲ್ಲಿಟ್ಟದ್ದ ಹಣವನ್ನು ಕದ್ದಿದ್ದಾರೆ.
ನಾರಾಯಣ ಪಿ.ಎಂ.ಅವರು ಶನಿವಾರ ನಡೆದ ಗಣೇಶನ ವಿಸರ್ಜನಾ ಕಾರ್ಯಕ್ರಮದಲ್ಲಿ ಗಣೇಶನ ವಿಗ್ರಹವನ್ನು ಹೊತ್ತ ಟ್ರಕ್ಕನ್ನು ಚಾಲನೆ ಮಾಡುತ್ತಿದ್ದರು. ಇದನ್ನು ಗಮನಿಸಿರುವ ಕಳ್ಳರು ಅವರ ಮನೆಯಲ್ಲಿ ಯಾರೂ ಇಲ್ಲವೆಂದು ಕಳ್ಳತನ ನಡೆಸುವ ಪ್ಲ್ಯಾನನ್ನು ಹಾಕಿಕೊಂಡಿದ್ದರು. ಮನೆಯಲ್ಲಿ ಸಿಸಿ ಕೆಮರಾ ಅಳವಡಿಸಿದ್ದನ್ನು ಕಂಡ ಕಳ್ಳರು ತಮ್ಮ ಪರಿಚಯ ಸಿಗಬಾರದೆಂದು ಕೆಮರಾದ ಡಿವಿಆರ್ ನ್ನು ತೆಗೆದುಕೊಂಡು ಹೋಗಿದ್ದಾರೆ. ರಾತ್ರಿ ಹನ್ನೆರಡು ಗಂಟೆಯ ಮಧ್ಯೆ ಈ ಘಟನೆ ನಡೆದಿದೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಹೊಂಡಿದ್ದ ನಾರಾಯಣ ಪಿ.ಎಂ.ಅವರ ಪತ್ನಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವ ಗಮನಕ್ಕೆ ಬಂದಿದೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 Comments