ಮೂಡುಬಿದಿರೆ: ಇಒ,ಪಿಡಿಒ ಅಮಾನತು
ಜಿಲ್ಲಾಡಳಿತದ ಎದುರು ಪ್ರತಿಭಟನೆ -ಶಾಸಕ ಕೋಟ್ಯಾನ್ ಎಚ್ಚರಿಕೆ
ಮೂಡುಬಿದಿರೆ: ಯಾವುದೇ ತಪ್ಪನ್ನು ಮಾಡದೆ ಇರುವ ಮೂಡುಬಿದಿರೆ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ಇರುವೈಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದ್ದು ಅಮಾಯಕರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಆದೇಶವನ್ನು ರದ್ದು ಗೊಳಿಸಿ ತಕ್ಷಣ ಕರ್ತವ್ಯಕ್ಕೆ ಹಾಜರು ಪಡಿಸದಿದ್ದರೆ ಜಿಲ್ಲೆಯ ಶಾಸಕರನ್ನು ಮತ್ತು ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳನ್ನು ಸೇರಿಸಿ ಜಿಲ್ಲಾಡಳಿತದ ಎದುರು ಪ್ರತಿಭಟನೆಯನ್ನು ನಡೆಯಲಾಗುವುದು ಎಂದು ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಶಾಸಕರ ಕಛೇರಿಯಲ್ಲಿ ಸೋಮವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ಇರುವೈಲು ಗ್ರಾಮ ಪಂಚಾಯತ್‌ಗಾಗಿ ನಿರ್ಮಿಸಲಾದ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಪಂಚಾಯತ್ ಕಚೇರಿಯ ಕಟ್ಟಡದ ಉದ್ಘಾಟನಾ ಸಮಾರಂಬವು ಇಂದು (ಸೋಮವಾರ ) ನಡೆಯಬೇಕಾಗಿತ್ತು. ಆದರೆ ಸಮಾರಂಭದಲ್ಲಿ ಅತಿಥಿಗಳನ್ನು ಆಹ್ವಾನಿಸುವಾಗ ಪ್ರೊಟೊಕಾಲ್ ಪಾಲಿಸಿಲ್ಲ ಎಂಬ ಕಾರಣವೊಡ್ಡಿ ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ ತಮ್ಮನ್ನು ಅಮಾನತು ಮಾಡಲಾಗುವುದು ಎಂಬ ಒತ್ತಡವು ಮೇಲಾಧಿಕಾರಿಗಳಿಂದ ಇ.ಒ ಮತ್ತು ಪಿಡಿಇ ಗೆ ಇದ್ದುದರಿಂದ ಅವರು ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿದ್ದರು. ಆದರೆ ರದ್ದು ಗೊಳಿಸಿದ್ದರೂ ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಖಂಡನೀಯ.
ನಮ್ಮ ಜಿಲ್ಲೆಯವರಾಗಿರುವ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಘನ ಉಪಸ್ಥಿತಿಯನ್ನು ತೋರಿಸಿ ಆಮಂತ್ರಣ ಪತ್ರದಲ್ಲಿ ಮುದ್ರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸಹಿತ ಊರ ಪ್ರಮುಖರು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿದ್ದರೂ ಪ್ರೊಟೊಕಾಲ್ ನೆಪ ಒಡ್ಡಲು ನಿಜವಾದ ಕಾರಣಗಳೇನು ಎಂದು ಕೋಟ್ಯಾನ್ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವಿಷಯದಲ್ಲಿ ಉತ್ತರ ಕೊಡಲು ನುಣುಚಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇರುವೈಲು ಪಂಚಾಯತು ಅಧ್ಯಕ್ಷ ವಲೇರಿಯನ್ ಕುಟಿನ್ಹ, ಸದಸ್ಯರಾದ ರಝಾಕ್, ಪ್ರವೀಣ್ ಶೆಟ್ಟಿ, ಜಯಶಂಕರ್, ನಾಗೇಶ್ ಅಮೀನ್, ನವೀನ್, ಉಷಾ, ಮೋಹಿನಿ, ಲಲಿತಾ, ರುಕ್ಮಿಣಿ, ಕುಸುಮಾ, ನವ್ಯ ಉಪಸ್ಥಿತರಿದ್ದರು.
0 Comments