ಹೆತ್ತವರ ಆಂಗ್ಲಮಾಧ್ಯಮದ ವ್ಯಾಮೋಹಕ್ಕೆ ಬಲಿಯಾದ ಆದರ್ಶ ಮತ್ತು ಮುಕ್ತಿ ಪ್ರಕಾಶ್ ಪ್ರೌಢಶಾಲೆಗಳು
ಮೂಡುಬಿದಿರೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ದಶಕಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡಿ, ಸತ್ಪ್ರಜೆಗಳಾಗಿ ರೂಪಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಮಾಡಿರುವ ಮೂಡುಬಿದಿರೆ ಕ್ಷೇತ್ರದ ಎರಡು ಅನುದಾನಿತ ಪ್ರೌಢಶಾಲೆಗಳು ಹೆತ್ತವರ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಬಲಿಯಾಗಿ ಬಾಗಿಲು ಹಾಕಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ.
ತಾಕೊಡೆಯ ಆದರ್ಶ ಪ್ರೌಢಶಾಲೆಗೆ ಈ ಹಿಂದೆ ಮೂಡುಬಿದಿರೆಯ ಆಸುಪಾಸಿನ ಸಹಿತ ಊರಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಕ್ಷಣವನ್ನು ಪಡೆಯುತ್ತಿದ್ದರು ಆದರೆ ವರ್ಷಗಳು ಉರುಳಿದಂತೆ ಹಳದಿ ಬಸ್ಸುಗಳು ಇಲ್ಲಿ ಓಡಾಡಲು ಪ್ರಾರಂಭಿಸಿದ್ದರಿಂದ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಹಳದಿ ಬಸ್ಸಿನಲ್ಲಿ ಕಳುಹಿಸಲು ಆರಂಭಿಸಿದರು ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗಲು ಆರಂಭಿಸಿತು. ಇದೀಗ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಲ್ಲದೆ, ಸರ್ಕಾರದ ಆದೇಶದಂತೆ ಪ್ರಸಕ್ತ ವರ್ಷದಲ್ಲಿ ಮುಚ್ಚಿದೆ.
ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಆಧೀನದಲ್ಲಿ ೧೯೮೧ರಲ್ಲಿ ಸ್ಥಾಪನೆಗೊಂಡ ಆದರ್ಶ ಕನ್ನಡ ಮಾಧ್ಯಮ ಅನುದಾನಿತ ಶಾಲೆ ಪ್ರಾರಂಭದಿಂದ ೨೦೨೩ನೇ ಇಸವಿಯವರೆಗೆ ೧೦ನೇ ತರಗತಿಯ ೪೦ ಬ್ಯಾಚ್‌ಗಳಲ್ಲಿ ೨,೦೬೫ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ೧೯೮೧ರಿಂದ ೨೦೨೩ರವರ ಅವಧಿಯಲ್ಲಿ ೧೦ ಮುಖ್ಯ ಶಿಕ್ಷಕರು, ೨೨ ಸಹಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. ಮೂಡುಬಿದಿರೆ ವಲಯದಲ್ಲಿ ಸತತ ೬ ಬಾರಿ ಸೇರಿದಂತೆ ಒಟ್ಟು ೯ನೇ ಬಾರಿಗೆ ಶೇ.೧೦೦ ಫಲಿತಾಂಶವನ್ನು ಪಡೆದ ಏಕೈಕ ಕನ್ನಡ ಮಾಧ್ಯಮದ ಶಾಲೆ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.
ಆದರೆ ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಕಂಡ ಶಾಲಾ ಆಡಳಿತ ಮಂಡಳಿಯು ಸಿದ್ಧಕಟ್ಟೆ, ವಾಮದಪದವು ಸಹಿತ ಇತರ ಕಡೆಗಳಿಂದ ವಿದ್ಯಾರ್ಥಿಗಳನ್ನು ಬರುವಂತೆ ಪ್ರೋತ್ಸಾಹಿಸಿತು. ಅಲ್ಲದೆ ಶಿಕ್ಷಕ ವೃಂದದವರೇ ತಮ್ಮ ವೇತನದ ಸ್ವಲ್ಪ ಭಾಗವನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಮಾಡಿದರು. ಆದರೆ ಕೆಲವು ಶಿಕ್ಷಕರು ನಿವೃತ್ತಿ ಹೊಂದಿದ ನಂತರ ವರ್ಷಕ್ಕೆ ಬಸ್ಸಿನ ವ್ಯವಸ್ಥೆಗಾಗಿ ರೂ 5 ಲಕ್ಷವನ್ನು ಹೊಂದಿಸಲು ಕಷ್ಟ ಸಾಧ್ಯವಾಗಿತ್ತು. ಇದರಿಂದಾಗಿ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದ್ದರಿಂದ ಶಾಲೆಯನ್ನು ಮುಚ್ಚಲಾಯಿತು.
50ರ ಸಂಭ್ರಮದಲ್ಲಿರುವಾಗಲೇ ಬೀಗಕ್ಕೆ ಶರಣಾದ
ನೀರುಡೆಯ ಮುಕ್ತಿ ಪ್ರಕಾಶ್ ಪ್ರೌಢಶಾಲೆ :
೧೯೮೩ರಲ್ಲಿ ಸ್ಥಾಪನೆಗೊಂಡ ಮುಕ್ತಿ ಪ್ರಕಾಶ್ ಅನುದಾನಿತ ಪ್ರೌಢಶಾಲೆಯು ಮುಚ್ಚೂರು, ನೀರ್ಕೆರೆ, ಕೊಂಪದವು, ಎಡಪದವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಪಡೆಯುವ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿತ್ತು. ಒಂದು ಕಾಲದಲ್ಲಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿದ್ದ ಶಾಲೆ ಎಂಬ ಹೆಗ್ಗಳಿಕೆ ಪಡೆದಿದ್ದ ಈ ಶಾಲೆಯು ಪ್ರಸಕ್ತ ವರ್ಷ ಕನಿಷ್ಠ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೧೦೦ ಫಲಿತಾಂಶವನ್ನು ಪಡೆದಿದ್ದರೂ, ಈ ವರ್ಷ ಅನುದಾನಿತ ಶಾಲೆಗಳಿಗಿರುವ ಸರ್ಕಾರದ ಆದೇಶದಂತೆ ಕನಿಷ್ಠ ೨೫ ವಿದ್ಯಾರ್ಥಿಗಳು ದಾಖಲಾಗದೆ ಶಾಲೆ ಮುಚ್ಚಲ್ಪಟ್ಟಿದೆ. ಕಳೆದ ವರ್ಷ ೬೧ ವಿದ್ಯಾರ್ಥಿಗಳು ೮ರಿಂದ ೧೦ ತರಗತಿಯವರೆಗೆ ಇದ್ದು, ಅವರಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರು ಹೊರತುಪಡಿಸಿ ಉಳಿದ ಎರಡೂ ಪ್ರೌಶಾಲೆಗಳ ವಿದ್ಯಾರ್ಥಿಗಳನ್ನು ಹತ್ತಿರದ ಪ್ರೌಢಶಾಲೆಗಳಿಗೆ ಸೇರಿಸಲಾಗಿದೆ. ಜತೆಗೆ ಶಿಕ್ಷಕರೂ ಕೂಡಾ ಇತರ ಶಾಲೆಗಳಿಗೆ ಸೇರಿಕೊಂಡಿದ್ದಾರೆ.
ಭಾವನಾತ್ಮಕ ಪತ್ರ:
ತಾಕೋಡೆಯ ಆದರ್ಶ ಪೌಢಶಾಲೆಯು ಮುಚ್ಚುವುದನ್ನು ಶಾಲೆಯ ಆಡಳಿತ ಮಂಡಳಿ ಭಾವನಾತ್ಮಕ ಪತ್ರದ ಮೂಲಕ ಹಳೇ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದೆ. ಶಾಲೆಯ ಸಂಚಾಲಕ ಹಳೇ ವಿದ್ಯಾರ್ಥಿಗಳಿಗೆ ಪತ್ರ ಬರೆದಿದ್ದು, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ದಾನಿಗಳ ಪ್ರೋತ್ಸಾಹವನ್ನು ಸ್ಮರಿಸಿದ್ದಾರೆ.
---
ಗ್ರಾಮೀಣ ಮಠದ ವಿದ್ಯಾರ್ಥಿಗಳನ್ನು ಆದರ್ಶವಾಗಿಸಿದ ಆದರ್ಶ ಶಾಲೆಯು ಮುಚ್ಚುತ್ತಿರುವುದು ದುಃಖದ ವಿಚಾರ. ೧೯೮೧ರಿಂದ ೨೦೨೩ ಶಾಲೆಯ ಏಳಿಗೆಗಾಗಿ ದುಡಿದ ಸರ್ವರಿಗೂ ಕೃತಜ್ಞತೆಯನ್ನಯ ಸಲ್ಲಿಸುತ್ತೇನೆ.
ರೆ.ಫಾ. ರೋಹನ್ ಲೋಬೋ
---
ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಗೆ ಬರುವ ತಾಕೋಡೆಯ ಆದರ್ಶ ಪ್ರೌಢಶಾಲೆ ಮತ್ತು ನೀರುಡೆ ಮುಕ್ತಿ ಪ್ರಕಾಶ್ ಪ್ರೌಢಶಾಲೆಗಳಿಗೆ ಈ ಬಾರಿ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವುದರಿಂದ ಸರಕಾರದ ಆದೇಶದಂತೆ ಮುಚ್ಚಲಾಗಿದೆ. 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಹೆತ್ತವರ ಸಹಕಾರದೊಂದಿಗೆ ಸಮೀಪದ ಶಾಲೆಗಳಿಗೆ ಸೇರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಿದೆ ಅಲ್ಲದೆ ಹೆತ್ತವರು ಕೂಡಾ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮಕ್ಕೆ ಸೇರಿಸುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲು ಕಾರಣವಾಗಿದೆ : ಗಣೇಶ್ ವೈ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡುಬಿದಿರೆ ವಲಯ
0 Comments