ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ, ನವೀಕರಣಗೊಂಡ ಈಜುಕೊಳ ಸಂಕೀರ್ಣದ ಉದ್ಘಾಟನೆ
ಮೂಡುಬಿದಿರೆ: ಯುವ ಜನಾಂಗವು ಭವಿಷ್ಯದ ಭಾರತವನ್ನು ಮುನ್ನಡೆಸುವವರು. ದೇಶ ಬಲಿಷ್ಠವಾಗಬೇಕಾದರೆ ವಿದ್ಯಾರ್ಥಿ ಸಮೂಹ ಸದೃಢವಾಗಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸ್ಕೌಟ್ಸ್ ಗೈಡ್ಸ್ ಪೂರಕವಾದ ಶಿಕ್ಷಣವನ್ನು ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಂಡಾಗ ಯಶಸ್ಸು ಸಾಧ್ಯ ಎಂದು ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ.ಖಾದರ್ ಅಭಿಪ್ರಾಯಿಸಿದರು.
ಅವರು ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಮತ್ತು ನವೀಕರಣಗೊಂಡ ಈಜುಕೊಳ ಸಂಕೀರ್ಣಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಾಗಿದೆ. ಸಾಮರಸ್ಯದೊಂದಿಗೆ ಎಲ್ಲರ ಜತೆಗೂಡಿ ಸಮಾಜಮುಖಿಯಾದಂತಹ ಕೆಲಸವನ್ನು ಮಾಡಲು ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಮೂಡುಬಿದಿರೆಯೊಂದಿಗೆ ನನ್ನ ಸಂಬಂಧ ಭಾವನಾತ್ಮಕವಾದದು ಎಂದ ಯು.ಟಿ. ಖಾದರ್ ಮೂಡುಬಿದಿರೆಯಲ್ಲಿ ಕಳೆದ ಶೈಕ್ಷಣಿಕ ಜೀವನ ಸ್ಮರಿಸಿಕೊಂಡರು. ಮೂಡುಬಿದಿರೆಯ ಅಭಿವೃದ್ಧಿಯೂ ಸೇರಿದಂತೆ , ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಸಮಗ್ರ ಅಭಿವೃದ್ದಿ, ಸ್ಕೌಟ್ಸ್ ಗೈಡ್ಸ್ ಯೋಜನೆಗಳಿಗೆ ವೈಯಕ್ತಿಕ ಹಾಗೂ ಸರಕಾರೀ ನೆಲೆಯಲ್ಲಿ ಸರ್ವರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು. ಬಾಲ್ಯದಲ್ಲಿ ಸ್ಕೌಟ್ಸ್ ಗೈಡ್ಸ್ ಮೂಲಕ ಪಡೆದ ಶಿಕ್ಷಣ ಇಂದು ನನ್ನನ್ನು ಈ ಎತ್ತರಕ್ಕೇರಿಸಿದೆ ಎಂದು ಸ್ಮರಿಸಿಕೊಂಡರು.
ವರ್ಷದೊಳಗೆ ಸುಸಜ್ಜಿತ ಭವನ: ಸ್ಕೌಟ್ಸ್ ಗೈಡ್ಸ್ ಆಂದೋಲನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡು ನೂರು ವರುಷಗಳಾಗುತ್ತಿರುವ ಸುಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಸವಿನೆನಪಿನೊಂದಿಗೆ ಪಿಲಿಕುಳದ ಹತ್ತು ಎಕರೆ ಜಾಗದಲ್ಲಿ ಸುಸಜ್ಜಿತ ಭವನವೊಂದನ್ನು ವರ್ಷಾಂತ್ಯದೊಳಗೆ ನಿರ್ಮಿಸುವ ಗುರಿಯಿರಿಸಲಾಗಿದೆ. ಇದಕ್ಕೆ ಶಾಸಕರಾಧಿಯಾಗಿ, ಜನಪ್ರತಿನಿಧಿಗಳು, ಸರಕಾರ ಸೂಕ್ತ ರೀತಿಯ ಸ್ಪಂದನೆ, ಬೆಂಬಲನೀಡಬೇಕೆಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಮೂಡುಬಿದಿರೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಆಗ್ರಹಿಸಿದರು.
ಸ್ಕೌಟ್ಸ್, ಗೈಡ್ಸ್, ರೋವರ್ಸ್ ರೇಂಜರ್ಸ್,ಪೊಲೀಸ್, ಎನ್ ಸಿ ಸಿ , ಎನ್.ಎಸ್.ಎಸ್ ಹೀಗೆ ಹಲವು ವಿಭಾಗಗಳ ತರಬೇತಿಗೆ ಅನುಕೂಲವಾಗುವಂತೆ, ಸರ್ವ ಸುಸಜ್ಜಿತವಾದ ಕೇಂದ್ರವೊಂದನ್ನು ಆಧುನಿಕ ರೀತಿಯಲ್ಲಿ ನಿರ್ಮಿಸುವ ಯೋಜನೆಯಿದೆ. ಸರಕಾರದ ಉದಾರ ಧನಸಹಾಯ ಅವಶ್ಯವಾಗಿ ದೊರಕಬೇಕೆಂದರು.
ಅವಕಾಶ ದೊರೆತರೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿಯನ್ನು ಮೂಡುಬಿದಿರೆಯಲ್ಲಿ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಎ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿ ಕೆ.ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಎಂ.ಸಿ.ಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ ವೈ, ಎರ್ಮಾಳ್ ಉದಯಕುಮಾರ್ ಶೆಟ್ಟಿ, ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರ್ ಸೇರಿದಂತೆ ಗಣ್ಯರಿದ್ದರು.
ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
0 Comments