ಮೂಡುಬಿದಿರೆಗೆ ಸರ್ಕಾರಿ ಬಸ್-ಜವನೆರ್ ಬೆದ್ರ ಆಗ್ರಹ
ಮೂಡುಬಿದಿರೆ: ಮೂಡುಬಿದಿರೆ ಹಾಗೂ ಆಸುಪಾಸಿನ ಪ್ರದೇಶಗಳಿಗೆ ಸುಗಮ ಸಂಚಾರಕ್ಕಾಗಿ ಸರ್ಕಾ ಬಸ್ಸುಗಳನ್ನು ನಿಯೋಜಿಸುವಂತೆ ಜವನೆರ್ ಬೆದ್ರ ಯುವ ಸಂಘಟನೆ ಆಗ್ರಹಿಸಿದೆ.
ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್‌ಕೋಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡುಬಿದಿರೆ ಕೇಂದ್ರಿತವಾಗಿ ಸುತ್ತಮುತ್ತಲ ಪ್ರದೇಶಗಳಿಗೆ ಖಾಸಗಿ ವಾಹನಗಳನ್ನೇ ಅವಲಂಬಿಸಿ ಸಂಚಾರ ನಡೆಸಬೇಕಾಗಿದೆ.ಮೂಡುಬಿದಿರೆಯಿಂದ ಮಂಗಳೂರು, ಮೂಡುಬಿದಿರೆ-ಕಾರ್ಕಳ, ಮೂಡುಬಿದಿರೆ-ಬೆಳ್ತಂಗಡಿ, ಕಿನ್ನಿಗೋಳಿ, ಕಟೀಲು, ಶಿರ್ತಾಡಿ, ನಾರಾವಿ, ಬೆಳ್ಮಣ್ ಇರುವೈಲು, ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಪ್ರವಾಸೋದ್ಯಮ ನಿಮಿತ್ತ ಹಲವಾರು ಮಂದಿ ಸಂಚಾರ ನಡೆಸುತ್ತಿದ್ದು, ಸರ್ಕಾರಿ ಬಸ್ಸುಗಳನ್ನು ಬಂದರೆ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ದೊರಕಬೇಕಾದರೆ ಮೂಡುಬಿದಿರೆಯಲ್ಲಿ ಸರ್ಕಾರಿ ಬಸ್ಸುಗಳು ಅತೀ ಅವಶ್ಯಕ. ಹಾಗೇಯೇ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ಸಂಚಾರದ ಪ್ರಯೋಜನ ದೊರಕುವಂತಾಗಲು ಸರ್ಕಾರ ಗಮನ ಹರಿಸಬೇಕು ಎಂದರು.
ಈ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವರು, ವಿಧಾನಸಭಾ ಸ್ವೀಕರ್, ಕ್ಷೇತ್ರದ ಶಾಸಕರು, ಸಂಸದರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿಯೂ ತಿಳಿಸಿದರು. ಖಾಸಗಿ ಬಸ್ಸುಗಳ ವೇಗದ ಆಟಾಟೋಪಕ್ಕೂ ಪೂರ್ಣವಿರಾಮ ನೀಡಲು ಸಾಧ್ಯವಿರುವುದಾಗಿ ತಿಳಿಸಿದರು.
ಸರ್ಕಾರ 3 ತಿಂಗಳೊಳಗೆ ಈ ಬೇಡಿಕೆಯನ್ನು ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜವನೆರ್ ಬೆದ್ರ ಗೌರವ ಸಲಹೆಗಾರ ರಾಜೇಂದ್ರ ಜಿ., ಕ್ರೀಡಾ ಸಂಚಾಲಕ ನಾರಾಯಣ ಪಡುಮಲೆ, ರಕ್ತನಿಧಿ ಪ್ರಮುಖ್ ಮನೋಹರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
0 Comments