ವಾಲ್ಪಾಡಿ ಗ್ರಾಮಸಭೆ
ಚಿರತೆ ಹಾವಳಿ, ಶುಚಿತ್ವಕ್ಕೆ ಆಧ್ಯತೆ ನೀಡುವಂತೆ ಮನವಿ
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗ್ರಾಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸಭೆಗಳಿರುವುದು ಗ್ರಾಮಸ್ಥರಿಗಾಗಿ. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಮಕ್ತವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿಡಬಹುದು. ಗ್ರಾಮಸಭೆಯ ಕುರಿತು ಪಂಚಾಯತ್ ಕಡೆಯಿಂದ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿದ್ದೇವೆ. ವಾರ್ಡ್ ಪ್ರಮುಖ ರಸ್ತೆಗಳಲ್ಲಿ ಅನೌನ್ಸ್ ಕೂಡ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಉಡ್ರೆಜಾಲು, ಪಾಪ್ಲಾಡಿ, ಹಲೆಂಜಾರಿನಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಅಲ್ಲಲ್ಲಿ ಬೋನುಗಳನ್ನು ಇಡಲಾಗಿದೆ ಎಂದು ಅರಣ್ಯಾಧಿಕಾರಿ ಸೌಮ್ಯ ಉತ್ತರಿಸಿದರು.
ಅಳಿಯೂರು ಪ್ರೌಡಶಾಲೆಗೆ ಹೋಗುವ ರಸ್ತೆ ನಾದುರಸ್ತಿಯಲ್ಲಿದೆ ಎಂದು ಗ್ರಾಮಸ್ಥೆ ಚಂಪಾ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಈ ಕುರಿತು ಅನುದಾನಕ್ಕಾಗಿ ಶಾಸಕರಲ್ಲಿ ಬೇಡಿಕೆ ಇಟ್ಟಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಆಧ್ಯತೆ ನೀಡಲಾಗಿದ್ದು, ಅಲ್ಲಲ್ಲಿ ಕಸ ಬಿಸಾಡುತ್ತಿರುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಪಿಡಿಒ ರಮೇಶ್ ರಾಥೋಡ್ ತಿಳಿಸಿದರು. ಅಳಿಯೂರು ಹೈಸ್ಕೂಲ್ ಹಿಂಬದಿಯಲ್ಲಿ ಕಸ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಪಶುಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿದ್ದು, ಅದಕ್ಕೆ ಸೂಕ್ತ ರೀತಿಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದೇವೆ. ಅದು ಕೊರೊನಾ ಮಾದರಿಯ ವೈರಸ್ ಆಗಿರುವುದರಿಂದ ಅದಕ್ಕಂತಲೇ ಔಷಧಿಯಿಲ್ಲ ಪಕ್ಕದ ಬೆಳ್ತಂಗಡಿ ತಾಲೂಕುಗಿಂತ ಮೂಡುಬಿದಿರೆ ತಾಲೂಕು ಚರ್ಮ ಗಂಟು ರೋಗ ನಿಯಂತ್ರಣದಲ್ಲಿ ಮುಂದಿದೆ ಎಂದು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುಪ್ರಸಾದ್ ತಿಳಿಸಿದರು.
ಉಪಾಧ್ಯಕ್ಷೆ ಸುಶೀಲಾ, ಕಾರ್ಯದರ್ಶಿ ಶೇಖರ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.
0 Comments