ಮೂಡುಬಿದಿರೆ ಗುರುಮಠ ಕಾಳಿಕಾಂಬ ದೇವಸ್ಥಾನದ ವರ್ಷಾವಧಿ ಮಹೋತ್ಸವ
ಮೂಡುಬಿದಿರೆ: ವಿಶ್ವಕರ್ಮರು ಜಗತ್ತಿನ ಮೂಲವಿಜ್ಞಾನಿಗಳು.ಸಾವಿರಾರು ವರ್ಷಗಳಿಂದ ಜಗತ್ತಿನಲ್ಲಿ ಅತ್ಯದ್ಭುತ ಶಿಲ್ಪಗಳನ್ನು ರಚಿಸಿದವರು ವಿಶ್ವಕರ್ಮರು. ಪ್ರತಿಯೊಂದು ಶಿಲ್ಪ ಸೃಷ್ಟಿಯ ಹಿಂದೆಯೂ ವೈಜ್ಞಾನಿಕ ಚಿಂತನೆ ಅಡಗಿದೆ ಎಂದು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಾಚನ ನೀಡಿದರು.
ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮದ ಶ್ರೇಷ್ಠತೆಯಾದ ಶಿಲ್ಪ ಮತ್ತು ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಏಕೈಕ ಸಮುದಾಯವಾಗಿದೆ. ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಅನುದಾನವನ್ನು ಒದಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ಆನಡ್ಕ ಎಸ್ ಸದಾನಂದ ಆಚಾರ್ಯ ಹಾಗೂ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಆರ್ ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹಾಗೂ ನಿಡ್ಲೆ ಗ್ರಾಮ ಮೊಕ್ತೇಸರ ನಿಡ್ಲೆ ಗೋಪಾಲ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕçತ ರಂಗಭೂಮಿ ಕಲಾವಿದ ಅಚ್ಯುತ ಆಚಾರ್ಯ ಮಾರ್ನಾಡ್, ಯುವ ಭಾಗವತರಾದ ಶ್ರೇಯಾ ಆಚಾರ್ಯ ಅಲಂಕಾರು ಅವರನ್ನು ಗೌರವಿಸಲಾಯಿತು.
ಸುನಂದ ಭಾಸ್ಕರ ಆಚಾರ್ಯ ಸ್ಮರಣಾರ್ಥ ವಿದ್ಯಾರ್ಥಿ ವೇತನ ಪುರಸ್ಕರವನ್ನು ಮೂಡುಮಾರ್ನಾಡಿನ ಸೌಮ್ಯ ಆಚಾರ್ಯ ಹಾಗೂ ದರೆಗುಡ್ಡೆಯ ಪ್ಲಾವಿಯಾ ಮಿನೇಜಸ್ ಅವರಿಗೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಶ್ವಥಪುರ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಎಲ್.ವಿ ಮಾತನಾಡಿ ವಿಶ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲಿ ವಿಶ್ವಕರ್ಮರ ಕೊಡುಗೆಯಿದೆ. ವಿಶ್ವಕರ್ಮರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯ ಎಂದರು.
ಮಧೂರು ಕಾಳಿಕಾಂಬಾ ಮಠದ ಅಧ್ಯಕ್ಷ ಕೆ ಪ್ರಭಾಕರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಎನ್ ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಯೋಜನೆಗಳ ಮಾಹಿತಿ ನೀಡಿದರು.
ಕ್ಷೇತ್ರದ ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಸೇವಾಸಮಿತಿಯ ಅಧ್ಯಕ್ಷ ಹರೀಶ್ಚಂದ್ರ ಆಚಾರ್ಯ ತಾಕೊಡೆ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶೇ.೧೦೦ ಕಾಲಾವಧಿ ಶಿಸ್ತು ಕಾಣಿಕೆ ಸಲ್ಲಿಸಿದ ಕೂಡುವಳಿಕೆ ಮೊಕ್ತೇಸರರನ್ನು ಹಾಗೂ ಕಾಣಿಕೆ ಡಬ್ಬಿಯಲ್ಲಿ ಅತೀ ಹೆಚ್ಚು ಮೊತ್ತ ಸಂಗ್ರಹಿಸಿದವರನ್ನು ಗೌರವಿಸಲಾಯಿತು.
ಶಾಂತಲಾ ಸೀತಾರಾಮ ಆಚಾರ್ಯ, ಶ್ರೀನಾಥ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಗೀತಾ ಯೋಗಿಶ್ ಆಚಾರ್ಯ, ವೈಶಾಲಿ ರಘುರಾಮ ಆಚಾರ್ಯ ಸನ್ಮಾನಪತ್ರ ವಾಚಿಸಿದರು.
ಶಿವರಾಮ ಆಚಾರ್ಯ ಸ್ವಾಗತಿಸಿದರು, ಪತ್ರಕರ್ತ ಧನಂಜಯ ಮೂಡುಬಿದಿರೆ ವಂದಿಸಿದರು. ಭಾಸ್ಕರ ಆಚಾರ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.
0 Comments