ಮೂಡುಬಿದಿರೆ: ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವದ ಅಂಗವಾಗಿ ‘ವಿವೇಕ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಸಂಜೆ ಅಳಿಯೂರಿನ ವಿಕಾಸನಗರದ ಶ್ರೀ ಶನೈಶ್ಚರ ದೇವಸ್ಥಾನದ ಮುಂಭಾಗದಲ್ಲಿ ನೆರವೇರಿತು.
ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಮಹಾನ್ ರಾಯಭಾರಿಯಾಗಿದ್ದರು. ಅವರು ಅಂದು ಮಾಡಿದ ಹತ್ತು ನಿಮಿಷದ ಭಾಷಣದಲ್ಲಿ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸಿತ್ತು. ತುಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಈ ಕಾರ್ಯಕ್ರಮದಲ್ಲಿ ಮಕ್ಕಳ ತಲೆಯ ಮೇಲೆ ಮಂಡಾಸು ಹಾಗೂ ಹೆಗಲ ಮೇಲೆ ಬೈರಾಸು ಧರಿಸಿರುವುದನ್ನು ನೋಡಿ ಸಂತಸವಾಗುತ್ತಿದೆ.ಇದು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಯಜಮಾನಿಕೆಯ ಪ್ರತೀಕ. ಇಂತಹ ಸಂಪ್ರದಾಯಗಳು ಉಳಿಯಬೇಕು.ಇಂದಿನ ಕಾಲಘಟ್ಟದಲ್ಲಿ ಇಂತಹ ಸಂಪ್ರದಾಯಗಳನ್ನು ನೋಡುವುದು ಅಪರೂಪವಾಗುತ್ತಿದ್ದು, ಭಜನೆಗಾಗಿ ಶಿಸ್ತಿನಿಂದ ಹಾಗೂ ಸುಂದರವಾಗಿ ಸಿದ್ಧರಾಗಿರುವ ಮಕ್ಕಳನ್ನು ಕಂಡು ಹೆಮ್ಮೆ ಅನಿಸುತ್ತಿದೆ ಎಂದು ನುಡಿದರು.
ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿ, ಸ್ವಾಮಿ ವಿವೇಕಾನಂದರ ಜೀವನವೇ ತಪಸ್ಸಾಗಿತ್ತು. ಮಾಡುವ ಪ್ರತಿಯೊಂದು ಕಾರ್ಯವನ್ನೂ ಶೇ.100ರಷ್ಟು ನಿಷ್ಠೆಯಿಂದ ನೆರವೇರಿಸುವುದೇ ನಿಜವಾದ ಸಾಧನೆ. ಶಿಕ್ಷಣ, ಕೃಷಿ, ಕಲೆ ಯಾವುದೇ ಕ್ಷೇತ್ರವಾಗಲಿ ಸಂಪೂರ್ಣ ಶ್ರದ್ಧೆಯೊಂದಿಗೆ ಮಾಡಿದ ಕೆಲಸವೇ ತಪಸ್ಸು. ಇಂದಿನ ಯುವಶಕ್ತಿ ದೇಶದ ಮಹತ್ತರ ಸಂಪತ್ತು. ಭಾರತದಲ್ಲಿ ಸುಮಾರು 54 ಕೋಟಿ ಯುವಜನರಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವಕರು ಊರು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸದ್ದಿಲ್ಲದೆ ಸಮಾಜ ಸೇವೆ ಮಾಡುವ ಸಾಧಕರನ್ನು ಗುರುತಿಸುವ ಈ ರೀತಿಯ ಕಾರ್ಯಕ್ರಮಗಳು ಸಮಾಜಕ್ಕೆ ದಿಕ್ಕು ತೋರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಡಾ. ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ನ್ಯಾಯವಾದಿ ಚಂದ್ರವರ್ಮ ಜೈನ್ ಅಳಿಯೂರು ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಲ್ಲಿ ಅಪಾರ ಶಕ್ತಿ ಇದೆ ಎಂದು ನಂಬಿದ್ದರು. ಯುವಶಕ್ತಿ ಪ್ರವಾಹದಂತಿದೆ; ಅದಕ್ಕೆ ಸರಿಯಾದ ದಿಕ್ಕು ನೀಡಿದರೆ ಮಹಾಕಾರ್ಯ ಸಾಧ್ಯ. ದೇಶಪ್ರೇಮ, ತ್ಯಾಗ ಮತ್ತು ಸೇವಾಭಾವ ಯುವಕರ ಜೀವನದ ಮೂಲಮಂತ್ರವಾಗಬೇಕು ಎಂದು ಹೇಳಿದರು.
ಸಾಧಕರಿಗೆ ಗೌರವ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸದಾನಂದ ಪೂಜಾರಿ (ಹೈನುಗಾರಿಕೆ),ಅಚ್ಯುತ ಆಚಾರ್ಯ (ರಂಗಭೂಮಿ),ರವೀಂದ್ರ ಅಮೀನ್ (ಚಿತ್ರಕಲೆ),ಆನಂದ ಸೀತಾರಾಮ ಶೆಟ್ಟಿ (ಕಂಬಳ),ಸಂತೋಷ್ ಆಚಾರ್ಯ (ಶಿಲ್ಪಕಲೆ), ಲೀಲಾ ಮಡಿವಾಳ್ತಿ (ಡೋಬಿ ವೃತ್ತಿ),ವಸಂತಿ ಶೆಟ್ಟಿ (ಅಂಗನವಾಡಿ ಸೇವೆ),ಚಂದ್ರಾವತಿ ಪೂಜಾರಿ (ನಾಟಿ ವೈದ್ಯೆ),ಸುಮನ ನೆಲ್ಲಿಕಾರು (ಹೋಟೆಲ್ ಉದ್ಯಮ),ನಾರಾಯಣ ಮಡಿವಾಳ (ಚಾಲಕ),ಮುರಳೀಧರ ಸುವರ್ಣ (ಕ್ಷೌರ ವೃತ್ತಿ) ಮತ್ತು ದಿನೇಶ್ ದೇವಾಡಿಗ (ನಾದಸ್ವರ) ಅವರಿಗೆ ವಿವೇಕ ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಪರಶುರಾಮ ಸೇವಾ ಟ್ರಸ್ಟ್ ಹಾಗೂ ಪ್ರತಿಭಾ ಮಹಿಳಾ ಸ್ವಸಹಾಯ ಸಂಘಕ್ಕೆ ಅತ್ಯುತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜ್ಞಾನರತ್ನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ದೇವಸ್ಯ, ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಅಖಿಲ ಕರ್ನಾಟಕ ಕರಾವಳಿ ಒಕ್ಕೂಟದ ಗೌರವಾಧ್ಯಕ್ಷ ಡಾ. ಎಸ್. ಶ್ರೀನಿವಾಸ ಶೆಟ್ಟಿ, ವಿಕಾಸನಗರ ಅಳಿಯೂರಿನ ಶ್ರೀ ಶನೈಶ್ಚರ ದೇವಸ್ಥಾನ ಅಧ್ಯಕ್ಷ ಅಶೋಕ್ ಶೆಟ್ಟಿ ಹಾಗೂ ಗರಡಿ ಫ್ರೆಂಡ್ಸ್ ಅಳಿಯೂರು ಅಧ್ಯಕ್ಷ ಗಣೇಶ್ ಕೋಟ್ಯಾನ್ ಕರ್ನಿರೆ ಸುಚೇತ ಜೆ. ಶೆಟ್ಟಿ ಹಾಗೂ ಸೋಮೇಶ್ವರದ ಡಾ. ಎಸ್. ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.
ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಮೂಲ್ಕಿಯ ನವ ವೈಭವ ಕಲಾವಿದರಿಂದ ‘ಸತ್ಯದ ತುಡರ್’ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು.


0 Comments