ಜಗತ್ತಿಗೆ ಗುರು ಸ್ಥಾನದಲ್ಲಿರುವ ದೇಶವಾದ ಈ ನಮ್ಮ ಪರಮ ಪವಿತ್ರ ಪುಣ್ಯಭೂಮಿ ಭಾರತದಲ್ಲಿ ಅನೇಕ ವರ್ಷಗಳಿಂದಲೂ ಮೇಲುಕೀಳು, ಬಡವ ಬಲ್ಲಿದ ಎಂಬ ಸಂಘರ್ಷ ಅಥವಾ ಅಹಿತಕರ ಘಟನೆಗಳನ್ನು ಕಾಣುತ್ತಲೇ ಇದ್ದೇವೆ. ಇಂತಹಾ ಘಟನೆಗಳಿಗೆ ನಮ್ಮ ಕರ್ನಾಟಕವೂ ಹೊರತಾಗಿಲ್ಲ. ಸ್ವಾಮಿ ವಿವೇಕಾನಂದರು, ಬ್ರಹ್ಮಶ್ರೀ ನಾರಾಯಣ ಗುರುಗಳು ಆದಿಯಾಗಿ ಅನೇಕ ದಾರ್ಶನಿಕರೂ, ಸಂವಿಧಾನದಂತಹ ಪ್ರಜಾಪ್ರಭುತ್ವದ ಭಗವದ್ಗೀತೆಯನ್ನು ದೇಶಕ್ಕೆ ನೀಡಿದಂತಹ ಡಾ.ಬಿಆರ್.ಅಂಬೇಡ್ಕರ್ ರಂತವರೂ ಸಹಿತ ಅನೇಕರು ಈ ಬಗ್ಗೆ ಹೋರಾಟ ನಡೆಸಿದ್ದರೂ ಇಂದಿಗೂ ಹಲವಾರು ಕಡೆಗಳಲ್ಲಿ ಅದು ಜೀವಂತ. ಇಂತಹ ಅಸ್ಪ್ರಶ್ಯತೆಯನ್ನು ಅನುಭವಿಸಿ, ಅದರೊಂದಿಗೆ ಸೈದ್ಧಾಂತಿಕವಾಗಿ ಹೋರಾಡಿ, ಸಂಘದ ಗರಡಿಯಲ್ಲಿ ಪಳಗಿ, ಕೃಷಿ, ಉದ್ಯೋಗದ ನಂತರ ರಾಜಕೀಯ ಪ್ರವೇಶ ಪಡೆದು, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ನಲ್ಲಿ ಆಡಳಿತ ನಡೆಸಿ, ಶಾಸಕರಾಗಿ, ರಾಜ್ಯದ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ, ಸರಳ ಸಜ್ಜನ, ಅಭಿವೃದ್ಧಿಯ ಹರಿಕಾರನಾಗಿ ದೇಶವೇ ಮೆಚ್ಚುವಂತಹ ದೈತ್ಯ ವ್ಯಕ್ತಿಯಾಗಿ ಬೆಳೆದು ನಿಂತ ಕಡಲ ತಡಿಯ ಹೆಮ್ಮೆಯ ರಾಜಕಾರಣಿ, ಕೋಟಿ ಹೃದಯಿಗಳ ಕಣ್ಮಣಿ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ.
ಆಡು ಮುಟ್ಟದ ಸೊಪ್ಪಿಲ್ಲ ಪೂಜಾರಿ ಮುಟ್ಟದ ಕ್ಷೇತ್ರವಿಲ್ಲ. ಪ್ರಸ್ತುತ ರಾಜಕಾರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಂತಹ ರಾಜಕಾರಣಿ ಅತ್ಯಂತ ವಿರಳ. ಇವರು ಶಿಕ್ಷಣದಿಂದ ವಂಚಿತರಾಗಿರಬಹುದು, ಆದರೆ ಇವರ ಅಪರಿಮಿತ ಜ್ನಾನ,ಆಡಳಿತ ವೈಖರಿ, ಮಾತಿನ ಮೇಲಿರುವ ಹಿಡಿತ, ಅದ್ಭುತ ಬರವಣಿಗೆ ಶಿಕ್ಷಣಕ್ಕೂ ಮೀರಿದ ವಿಶ್ವ ವಿದ್ಯಾಲಯವೇ ಇವರಲ್ಲಿ ಅಡಕವಾಗಿರುವಂತೆ ಭಾಸವಾಗುತ್ತದೆ.
ಬಾಲ್ಯದಲ್ಲಿ ಯಾವ ದೇವಸ್ಥಾನವು ಇವರ ಜಾತಿಯ ಕಾರಣಕ್ಕಾಗಿ ಪ್ರವೇಶ ನಿರಾಕರಿಸಿತ್ತೋ ಅದೇ ದೇವಾಲಯವು ಇವರನ್ನು ಸಚಿವರಾದ ನಂತರ ಬ್ಯಾಂಡ್ ವಾದ್ಯಗಳೊಂದಿಗೆ ಬರಮಾಡಿಕೊಂಡಿತ್ತು. ಅಂದು ಅಸ್ಪ್ರಶ್ಯತೆಯನ್ನು ಅನುಭವಿಸಿದ ಕಾರಣಕ್ಕಾಗಿಯೇ ಇಂದು ಅದರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ತಾನು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾದ ನಂತರ ದಲಿತ ಬಾಲಕನೊಬ್ಬ ದೇಗುಲ ಪ್ರವೇಶಿಸಿದ ಕಾರಣಕ್ಕೆ ಆತನ ಕುಟುಂಬವನ್ನು ಕೆಲವರು ಬಹಿಷ್ಕರಿಸಿದ್ದರು. ಇದರಿಂದ ಕೆರಳಿದ ಸಚಿವರು ಅದೇ ಬಾಲಕನ ಹೆಸರಿನಲ್ಲಿ ವಿನಯ ಸಾಮರಸ್ಯ ಯೋಜನೆ ಜಾರಿಗೆ ತಂದರು. ಈ ದಲಿತ ಬಾಲಕ ಸೇರಿದಂತೆ ಕೋಲಾರದಲ್ಲಿ ನಿಂದನೆಗೊಳಪಟ್ಟ ದಲಿತ ಬಾಲಕನಿಗೂ ಅವರ ಉನ್ನತ ಶಿಕ್ಷಣದವರೆಗೂ ಸರ್ಕಾರವೇ ಖರ್ಚು ಭರಿಸಲಿದೆ ಎಂದು ಆದೇಶ ನೀಡಿದರು. ಮತ್ತು ಅವರ ಕುಟುಂಬಕ್ಕೆ ಮನೆ ನಿರ್ಮಿಸಲು 5 ಲಕ್ಷ ರೂಪಾಯಿ ವಿಶೇಷ ಅನುದಾನ ನೀಡಿದರು. ಅಸ್ಪ್ರಶ್ಯತೆ ಅಪರಾಧ ಅಲ್ಲ ಎಂದಾದರೆ ಜಗತ್ತಿನಲ್ಲಿರುವ ಯಾವುದೇ ಅಪರಾಧಗಳೂ ಅಪರಾಧಗಳಲ್ಲ ಎಂದು ಕಠೋರವಾಗಿ ನುಡಿಯುವ ಹಿಂದುಳಿದ ವರ್ಗಗಳ ಪಾಲಿನ ಆದರ್ಶಪ್ರಾಯರು ಕೋಟ ಶ್ರೀನಿವಾಸ ಪೂಜಾರಿ.
ಗ್ರಾಮ ಪಂಚಾಯತ್ ಸದಸ್ಯರಾಗಿ ಅಗಾಧ ಅನುಭವವುಳ್ಳ ಇವರು ವಿಧಾನ ಪರಿಷತ್ ಶಾಸಕರಾಗಿ ಶಕ್ತಿಸೌಧದಕ್ಕೆ ಕಾಲಿಟ್ಟ ತಕ್ಷಣವೇ ಗ್ರಾಮ ಪಂಚಾಯತ್ ಸದಸ್ಯರ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳ ಅಂದರೆ ಗ್ರಾಮ ಪಂಚಾಯತಿ ಜನ ಪ್ರತಿನಿಧಿಗಳ ಮತದಾನದ ಮೂಲಕ ಮೇಲ್ಮನೆಗೆ ಆಯ್ಕೆಯಾಗಿರುವ ಇವರು ಗ್ರಾಮ ಪಂಚಾಯತಿ ಮತ್ತು ಅಲ್ಲಿನ ಜನ ಜನಪ್ರತಿನಿಧಿಗಳ ಬಗ್ಗೆ ಕೈಗೊಂಡ ನಿರ್ಧಾರಗಳು, ನಡೆಸಿದ ಹೋರಾಟಗಳು ಅಷ್ಟಿಷ್ಟಲ್ಲ. ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನ ಎಂಬ ವಿಷಯ ಮುನ್ನಲೆಗೆ ಬಂದಿದ್ದೇ ಇವರ ಹೋರಾಟದಿಂದ. ಜಿಲ್ಲಾ ಪಂಚಾಯತ್ ಸದಸ್ಯರು, ಶಾಸಕರು, ಸಚಿವರು, ಸಂಸದರು ಹೀಗೆ ಎಲ್ಲಾ ಜನ ಪ್ರತಿನಿಧಿಗಳು ಸಂಬಳ, ಭತ್ಯೆ ಸವಲತ್ತಗಳನ್ನು ಪಡೆಯುತ್ತಿರುವಾಗ ಜನರ ನಡುವೆ ನಿಂತು ಕೆಲಸ ಮಾಡುವ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನ ಯಾಕೆ ಕೊಡಬಾರದು ಎಂದು ಸರ್ಕಾರಕ್ಕೆ ತಮ್ಮದೇ ಶೈಲಿಯಲ್ಲಿ ಹೋರಾಟ ನಡೆಸಿಕೊಂಡು ಬಂದಂತಹ ಕೋಟಿಗೊಬ್ಬರಿವರು. ಆರಂಭದಲ್ಲಿ 250 ರೂಪಾಯಿ, ನಂತರ 1000, ನಂತರ 2000,3000ಹಾಗೂ ಈಗ ಬರೋಬ್ಬರಿ 6000 ರೂಪಾಯಿವರೆಗೂ ಗ್ರಾಮ ಪಂಚಾಯತಿ ಅಧ್ಯಕ್ಷನೋರ್ವ ಗೌರವಧನ ಪಡೆಯಲು ಅದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಎಂಬ ಏಕೈಕ ರಾಜಕಾರಣಿ ಕಾರಣರಾಗಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷನೆಂದರೆ ಆ ಗ್ರಾಮಕ್ಕೆ ಮುಖ್ಯಮಂತ್ರಿ ಇದ್ದಂತೆ ಎಂದು ಘೋಷಿಸಿ ಅದರಂತೆ ಸಹಕಾರವನ್ನೂ ನೀಡುತ್ತಾ ಬಂದಿರುವ ಏಕಮಾತ್ರ ಶಾಸಕರಿವರು. ಪಂಚಾಯತ್ ರಾಜ್ ಸಬಲೀಕರಣಕ್ಕಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನ ಪ್ರತಿನಿಧಿಗಳಿಗೆ ಇವರು ನಡೆಸುತ್ತಿರುವ ಹೊಳಪು ಎಂಬ ಕ್ರೀಡಾಕೂಟವು ಇಡಿಯ ರಾಜ್ಯದಲ್ಲಿ ಹೊಳಪು ಬೀರುತ್ತಿದೆ ಎಂದರೆ ಅಚ್ಚರಿ ಪಡಬೇಕಿಲ್ಲ. ಉಳಿದೆಲ್ಲಾ ದಿನಗಳಲ್ಲಿ ರಾಜಕೀಯಕ್ಕಾಗಿ ಕೆಸರೆರೆಚಾಟದಲ್ಲಿ ನಿರತರಾಗಿರುವ ಗ್ರಾಮ ಪಂಚಾಯತಿಯ ವಿವಿಧ ಪಕ್ಷಗಳ ಸದಸ್ಯರು ಹೊಳಪು ಕ್ರೀಡಾಕೂಟದಲ್ಲಿ ತಮ್ಮ ಪಂಚಾಯತಿ ಗೆಲ್ಲಬೇಕೆಂದು ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತವೆ. ಈ ಮೂಲಕ ಜನರ ಸೇವೆಗಾಗಿ ನಾವು ಎಂದಿಗೂ ಪಕ್ಷಾತೀತ ಎಂಬ ಸಂದೇಶವನ್ನು ಸಾರಿದ್ದಾರೆ. ಪೂಜಾರಿಯವರ ಇಂತಹ ಚಿಂತನೆಯೇ ಅದ್ಭುತವಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವ ಧನ ಹೆಚ್ಚಳದಿಂದ ಗ್ರಂಥಾಲಯ ಸಿಬ್ಬಂಧಿಗಳ ವೇತನ ಹೆಚ್ಚಳದವರೆಗೂ ಇವರು ಮಾಡಿದ ಹೋರಾಟ ಹಾಗೂ ಪ್ರಯತ್ನ ಅವಿಸ್ಮರಣೀಯ.
ಸಚಿವರಾಗಿ ಆಯ್ಕೆಯಾದ ಇವರಿಗೆ ದೊರೆತ ಖಾತೆ ಮುಜರಾಯಿ ಇಲಾಖೆ. ಅಂದರೆ ಹಿಂದೂ ಧಾರ್ಮಿಕ ಸಂಸ್ಥೆಗಳ ದತ್ತಿ ಇಲಾಖೆ. ಈ ಇಲಾಖೆಯ ಸಚಿವರಾದವರು ಮತ್ತೊಂದು ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ ಎಂಬ ಭಯ ರಾಜ್ಯಕ್ಕೆ ಇತ್ತು ಮತ್ತು ಅನೇಕ ಉದಾಹರಣೆಗಳೂ ಇದೆ. ಆದರೆ ಯಾರಿಗೂ ಬೇಡವಾದ ಈ ಇಲಾಖೆಯಲ್ಲಿ ಅತಿದೊಡ್ಡ ಕ್ರಾಂತಿಯನ್ನು ಮಾಡಿದವರು ಕೋಟ ಶ್ರೀನಿವಾಸ ಪೂಜಾರಿ. ಅರ್ಚಕ ವರ್ಗಕ್ಕೆ ವೇತನ ಪರಿಷ್ಕರಣೆ, ಚಾಕಿರಿದಾರರಿಗೆ ವೇತನ ಹೆಚ್ಚಳ, ಕೊರೊನಾ ಸಂದರ್ಭದಲ್ಲಿ ದೇಗುಲಗಳ ಸಮರ್ಥ ನಿರ್ವಹಣೆ ಮತ್ತು ಅಲ್ಲಿನ ಚಾಕಿರಿದಾರರಿಗೆ ನೀಡಿದ ಸವಲತ್ತುಗಳು ಮರೆಯಾಗದಂತವು. ಸಮಾಜದ ಬಡ ವ್ಯಕ್ತಿಗಳ ಮದುವೆಗಾಗಿ ಸಪ್ತಪದಿ ಎಂಬ ಯೋಜನೆ ಜಾರಿಗೊಳಿಸಿ ನೂರಾರು ಜೋಡಿಗಳಿಗೆ ಉಚಿತ ವಿವಾಹವನ್ನು ಮಾಡಿಸಿ ಅವರ ಬಾಳಿಗೆ ಹೊಸ ಅರ್ಥ ನೀಡಿದ ಕರುಣಾಮಯಿ ಇವರು.
ಯಾವುದೇ ಇಲಾಖೆಯನ್ನೂ ನೀಡಿದರೂ ಸಮರ್ಥವಾಗಿ ಮುನ್ನಡೆಸುವ ಅಪರಿಮಿತ ಶಕ್ತಿಯನ್ನು ಸಂಪಾದಿಸಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ರಾಜ್ಯ ಹೊಸ ಸರ್ಕಾರ ಎರಡು ಪ್ರಬಲ ಖಾತೆಗಳನ್ನು ನೀಡಿತ್ತು. ಅದುವೇ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.ಸಾವಿರಾರು ಕೋಟಿ ಮೌಲ್ಯದ ಬಜೆಟ್ ಹೊಂದಿರುವ ಈ ಎರಡು ಇಲಾಖೆಗಳು ಹಿಂದಿನಿಂದಲೂ ಭ್ರಷ್ಟಾಚಾರಕ್ಕೆ ಹೆಸರುವಾಸಿ. ಆದರೆ ಯಾವಾಗ ಈ ಪ್ರಬಲ ಖಾತೆಗಳು ಕೋಟಿಗೊಬ್ಬನ ಕೈ ಸೇರಿದವೋ ಅಂದಿಗೆ ಭ್ರಷ್ಟಾಚಾರ ಶೂನ್ಯಕ್ಕಿಳಿದಿತ್ತು. ಇಂತಹಾ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿದ ಇವರ ಖಾರವಾದ ಕಾರ್ಯವೈಖರಿ ಕಂಡು ಆಡಳಿತ ಪಕ್ಷ ಮಾತ್ರವಲ್ಲದೆ ವಿರೋಧ ಪಕ್ಷಗಳೂ ದಂಗಾಗಿದ್ದವು. ರಾಜ್ಯದಲ್ಲಿನ ಪ್ರಾಮಾಣಿಕ ಸಚಿವರೆಂದರೆ ಅದು ಕೋಟ ಶ್ರೀನಿವಾಸ ಪೂಜಾರಿ ಎಂದು ಸಾವಿರಾರು ಜನರ ಮುಂದೆ ಉದ್ಘೋಷಿಸಿದ್ದು ವಿರೋಧ ಪಕ್ಷ ಜನತಾ ದಳದ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಮುಂದೊಂದು ದಿನ ಇವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹಾಡಿ ಹೊಗಳಿದ್ದು ಅದೇ ಜನತಾದಳ ಪಕ್ಷದ ಶಾಸಕ ಶರವಣ. ನಿಮ್ಮ ನಿಷ್ಠೆ ಪ್ರಾಮಾಣಿಕತೆ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಆಶಿರ್ವಾದ ಮಾಡಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಒಂದೇ ಒಂದು ಪೈಸೆಯೂ ಖರ್ಚು ಮಾಡದೆ ಚುನಾವಣೆ ಜಯಿಸಿದ ನಿಮ್ಮ ನಡೆ ಕೇವಲ ನಿಮ್ಮ ಜಿಲ್ಲೆಗೆ ಮಾತ್ರವಲ್ಲದೆ ನಮ್ಮ ಉಭಯ ಸದನಗಳಿಗೂ ಮಾದರಿ ಎಂದು ಸದನದಲ್ಲೇ ಕೊಂಡಾಡಿದವರು ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲರು. ಯಾವುದೇ ಇಲಾಖೆಯ ಪ್ರಶ್ನೆ ಕೇಳಿದರೂ ಸಮರ್ಥ ಉತ್ತರ ನೀಡಬಲ್ಲ ಬುದ್ಧಿವಂತಿಕೆ ಇರುವ ನಾನು ಕಂಡ ಏಕೈಕ ಸಚಿವ ಎಂದು ಹುರಿದುಂಬಿಸಿದ್ದೂ ವಿಪಕ್ಷ ಶಾಸಕ ಶ್ರೀ ಲಿಂಗಪ್ಪ. ಹೀಗೆ ತನ್ನ ಸ್ವಪಕ್ಷೀಯ ಬಿಜೆಪಿ ನಾಯಕರು ಮಾತ್ರವಲ್ಲದೆ ವಿರೋಧ ಪಕ್ಷದ ನಾಯಕರಿಂದ ಬಹಿರಂಗವಾಗಿ ಹೊಗಳಿಸಿಕೊಳ್ಳುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು.
ಭ್ರಷ್ಟಾಚಾರದ ಕೂಪವಾಗಿದ್ದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊಸ ಭಾಷ್ಯವನ್ನು ಬರೆದು ಈ ಇಲಾಖೆಯನ್ನು ಹೀಗೂ ಕೊಂಡೊಯ್ಯಬಹುದು ಎಂದು ರಾಜ್ಯಕ್ಕೆ ತೋರಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಎಲ್ಲಾ ವಸತಿ ಶಾಲೆಗಳ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಮ್ಮ ರಾಜ್ಯದ ಬಡ ಹೆಣ್ಣು ಮಕ್ಕಳು ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲದೆ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನೂ ಹೊಂದಿರಬೇಕೆಂಬ ಉದ್ಧೇಶ ಇಟ್ಟುಕೊಂಡು ಓಬವ್ವ ಆತ್ಮರಕ್ಷಣೆ ಕಲೆ ಎಂಬ ಕರಾಟೆ ತರಬೇತಿ ಯೋಜನೆಯನ್ನು ಜಾರಿಗೊಳಿಸಿದರು. ಯಾವ ವಿದ್ಯಾರ್ಥಿಯೂ ಹಾಸ್ಟೆಲ್ ವಂಚಿತನಾಗಬಾರದೆಂಬ ಕಾರಣಕ್ಕೆ ಸರ್ಕಾರಿ ಹಾಸ್ಟೆಲ್ ಅಲ್ಲದೆಯೂ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೇಲ್ ಸೌಲಭ್ಯ ನೆರವೇರಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸದಾ ಆದರ್ಶವಾಗಿರಿಸಿಕೊಂಡಿರುವ ಇವರು ರಾಜ್ಯದಲ್ಲಿ 4 ವಸತಿ ಶಾಲೆಗಳನ್ನು ಗುರುಗಳ ಹೆಸರಿನಲ್ಲಿ ತೆರೆದಿದ್ದಾರೆ. ಮತ್ತೆ ಹತ್ತು ಶಾಲೆಗಳನ್ನೂ ಗುರುಗಳ ಹೆಸರಿನಲ್ಲಿ ತೆರೆಯುವ ಯೋಚನೆಯನ್ನೂ ಇವರು ಹೊಂದಿದ್ದಾರೆ. ಈ ಶಾಲೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರವಿರಲಿದ್ದು ಅಲ್ಲಿ ಧ್ಯಾನ, ಯೋಗ ಹಾಗೂ ಭಜನೆಯಂತಹ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ 2 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಹಿಂದುಳಿದ ಸಮಾಜದ ಯುವಕ ಯುವತಿಯರ ಉದ್ಯೋಗಕ್ಕಾಗಿ ಬೈಕ್ ಯೋಜನೆ ಜಾರಿಗೆ ತಂದರು. ದೇಶದ ಸೈನ್ಯಕ್ಕೆ ಸೇರಲಿಚ್ಚಿಸುವ ಯುವಕರಿಗೆ ತರಬೇತಿ ನೀಡಲು ತಮ್ಮ ಇಲಾಖೆಯ ಮೂಲಕ ಕೋಟಿ ಚೆನ್ನಯ, ರಾಣಿ ಅಬ್ಬಕ್ಕ ಹಾಗೂ ಹೆಂಜಾ ನಾಯ್ಕ ಎಂಬ ವೀರರ ಹೆಸರಿನಲ್ಲಿ ಅಗ್ನಿಪಥ ಯೋಜನೆಗೆ ಪೂರಕವಾಗಿ ಸೈನಿಕ ತರಬೇತಿ ಸಂಸ್ಥೆಯನ್ನು ಆರಂಭಿಸಿದರು. ಮಾತ್ರವಲ್ಲದೆ ಅಗ್ನಿಪಥ ಯೋಜನೆಯಲ್ಲಿ ಪಳಗಿದ ಅಗ್ನಿವೀರರಿಗೆ ತಮ್ಮ ಇಲಾಖೆಯಲ್ಲಿ ಬಹುಭಾಗ ಮೀಸಲಾತಿ ನೀಡಿ ಉದ್ಯೋಗದ ಭರವಸೆ ನೀಡಿದ್ದಾರೆ.ಇಂತಹಾ ಯೋಚನೆ ಉನ್ನತ ಶಿಕ್ಷಣ ಪಡೆಯದ ಒಬ್ಬ ಸಾಮಾನ್ಯ ಸರಳ ನಾಯಕನಿಗೆ ಬರುತ್ತದೆ ಎಂದರೆ ಈ ವ್ಯಕ್ತಿ ಅದೆಷ್ಟು ಜ್ನಾನಸಂಪನ್ನನಾಗಿರಬೇಕು ಅಲ್ಲವೇ. ಅದಕ್ಕೇ ಹೇಳಿದ್ದು ಕೋಟ ಶ್ರೀನಿವಾಸ ಪೂಜಾರಿ ಎಂದರೆ ಅದೊಂದು ವಿಶ್ವವಿದ್ಯಾನಿಲಯವೆಂದು.
ಕೋಟ ಉಸ್ತುವಾರಿ ವಹಿಸಿಕೊಂಡ ಯಾವುದೇ ಜಿಲ್ಲೆಗೆ ಅನ್ಯಾಯ ಮಾಡಿದವರಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಕೊರೊನಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 95ಕ್ಕೂ ಅಧಿಕ ಕೊರೊನಾ ಬಾಧಿತ ರೋಗಿಗಳಿಗೆ ಆಯುಷ್ಮಾನ್ ಯೋಜನೆ ಮೂಲಕ ಉಚಿತ ಚಿಕಿತ್ಸೆ ಒದಗಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕುಚ್ಚಲಕ್ಕಿಯನ್ನೇ ಸವಿಯುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಳಿ ವಿಶೇಷ ಮನವಿ ಸಲ್ಲಿಸಿ ಅದಕ್ಕಾಗಿ ನಿರಂತರ ಅಧ್ಯಯನ ನಡೆಸಿ, 130 ಕೋಟಿಗೂ ಅಧಿಕ ಹಣವನ್ನು ಸರ್ಕಾರದಿಂದ ಮೀಸಲಿರಿಸಿ ತುಳುನಾಡಿನ ಪಡಿತರದಾರರಿಗೆ ಕುಚ್ಚಲಕ್ಕಿ ಯೋಜನೆ ಜಾರಿಗೆ ಬರುವಂತೆ ಮಾಡಿದ ಶ್ರಮದ ಹಿಂದೆ ಅವರ ಮಾತೃ ಜಿಲ್ಲೆಯ ಪ್ರೀತಿ ಅಡಕವಾಗಿದೆ.
ಮೀನುಗಾರಿಕಾ ಮಂತ್ರಿ ಆಗಿರುವಾಗ ಮೀನುಗಾರರಿಗೆ ಸಾಲ ಸೌಲಭ್ಯ, ನದಿಗಳಲ್ಲಿ ಮೀನಿನ ಜಟ್ಟಿ ನಿರ್ಮಾಣ ಯೋಜನೆ, ಮತ್ಸ ಸಂಪದ ಯೋಜನೆ ಸಹಿತ ಅನೇಕ ಯೊಜನೆಗಳನ್ನು ಜಾರಿಗೊಳಿಸಿದ ಇವರು ಎಲ್ಲಾ ಇಲಾಖೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿವರಿಗೂ ಇವರು ಅತ್ಯಂತ ಪ್ರೀತಿಪಾತ್ರರು. ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಒಡನಾಟ, ಸ್ನೇಹ ಕೋಟಿ ಚೆನ್ನಯರಂತಿದೆ ಎಂದು ಅನೇಕ ಬಾರಿ ಹೇಳಿಕೆ ನೀಡಿದ್ದನ್ನು ಕಾಣಬಹುದು. ರಾಜ್ಯದ ಎಲ್ಲಾ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಎಲ್ಲಾ ವರ್ಗದ ಜನರೂ ಪ್ರೀತಿಸಿ ಬೆಂಬಲಿಸಿ ಆಶೀರ್ವಾದಿಸುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ನಿಜವಾದ ಅಜಾತ ಶತ್ರು ಕೋಟ ಶ್ರೀನಿವಾಸ ಪೂಜಾರಿ ಆಗಿದ್ದಾರೆ. ಇಂತಹ ಅಪರೂಪದ ನಾಯಕನಿಗೆ ದೇವರು ಮತ್ತಷ್ಟು ಶಕ್ತಿ ಸಾಮಥ್ರ್ಯಗಳನ್ನು ನೀಡಲಿ. ಶುದ್ಧ ಹಾಗೂ ಪ್ರಾಮಾಣಿಕ ಸೇವೆಗಾಗಿ ಮತ್ತಷ್ಟು ಕಾಲ ಇವರು ರಾಜಕೀಯದಲ್ಲಿ ಸಕ್ರಿಯವಾಗಿರಲಿ ಎಂದು ಹಾರೈಸುತ್ತಾ ಶ್ರೀಯುತರಿಗೆ ಜನ್ಮ ದಿನದ ಶುಭಾಶಯಗಳನ್ನು ಸಲ್ಲಿಸೋಣ.
:ಸುನಿಲ್ ಪಣಪಿಲ
0 Comments