ಅಳಿಯೂರಿನಲ್ಲಿ "ಜನಸ್ಪಂದನ" ಕಾರ್ಯಕ್ರಮ
338 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಕೋಟ್ಯಾನ್
ಮೂಡುಬಿದಿರೆ: ಎಲ್ಲಾ ಸರಕಾರಿ ಸೇವೆಗಳು ಮತ್ತು ಸವಲತ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಉದ್ದೇಶದಿಂದ ಶಿರ್ತಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜನರಿಗಾಗಿ ಶಾಸಕ ಉಮಾನಾಥ ಎ.ಕೋಟ್ಯಾನ್ ನೇತೃತ್ವದಲ್ಲಿ ಮಂಗಳವಾರ ಅಳಿಯೂರಿನ ಹೇಮಾ ಸಭಾಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಕೋಟ್ಯಾನ್ ಅವರು 338 ಜನರಿಗೆ ಹಕ್ಕುಪತ್ರ ಮತ್ತು 67 ಮಂದಿಗೆ ಪಿಂಚಣಿ ಆದೇಶಪತ್ರವನ್ನು ವಿತರಿಸಿದರು.
ನಂತರ ಮಾತನಾಡಿದ ಶಾಸಕ ಕೋಟ್ಯಾನ್ ಕಳೆದ 40,50 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಸೂರನ್ನು ನಿರ್ಮಿಸಿ ಕುಳಿತುಕೊಂಡವರಿಗೆ ತಾವು ಸ್ವಂತವಾಗಿ ಸೂರನ್ನು ನಿರ್ಮಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ಹಲವಾರು ತಾಂತ್ರಿಕ ದೋಷಗಳಿಂದಾಗಿ ಅದು ಸಾಧ್ಯವಾಗುತ್ತಿರಲಿಲ್ಲ. ಆದರೆ ತಾನು ಶಾಸಕನಾಗಿ ಆಯ್ಕೆಯಾಗಿ ಬಂದ ಮೇಲೆ ಬಡವರ ಕಣ್ಣೀರನ್ನು ಒರೆಸಬೇಕೆಂಬ ಛಲವನ್ನು ತೊಟ್ಟಿದ್ದೆ.ಡೀಮ್ಡ್ ಫಾರೆಸ್ಟ್ ನಲ್ಲಿ ಮನೆ ಕಟ್ಟಿ ಕುಳಿತುಕೊಂಡವರ ಬಗ್ಗೆ ಕಂದಾಯ ಇಲಾಖೆಯ ಮೂಲಕ ಸರಿಯಾಗಿ ತನಿಖೆ ನಡೆಸಿ ಡೀಮ್ಡ್ ಫಾರೆಸ್ಟನ್ನು ತೆಗೆದು ಹಾಕುವ ಮೂಲಕ ಹಲವಾರು ಜನರಿಗೆ ಹಕ್ಕುಪತ್ರವನ್ನು ನೀಡುವಂತಹ ಕೆಲಸಗಳು ನಡೆಯುತ್ತಿದ್ದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲೇ ಅತೀ ಹೆಚ್ಚು ಹಕ್ಕುಪತ್ರ ವಿತರಿಸಿದ ಕ್ಷೇತ್ರ ಎಂಬ ಹೆಮ್ಮೆಯಿದೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮೂಡುಬಿದಿರೆ ತಾಲೂಕಿಗೆ 145 ಕೋ.ರೂ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಸಿದ್ಧಗೊಂಡಿದ್ದು ಪೈಪ್ ಲೈನ್ ನ ಕಾಮಗಾರಿಗಳು ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಮಾತುಕೊಟ್ಟಂತೆ ಮೂಡುಬಿದಿರೆಗೆ ಸರಕಾರಿ ಪದವಿ ಕಾಲೇಜು ಮತ್ತು ಅಳಿಯೂರಿಗೆ ಪಿಯು ಕಾಲೇಜನ್ನು ತರಲಾಗಿದೆ. ಕಲಾ ವಿಭಾಗ ಮಾತ್ರವಿದ್ದ ಅಳಿಯೂರಿನ ಪಿಯು ಕಾಲೇಜಿಗೆ ಬರುವ ವರ್ಷದಿಂದ ಕಾಮರ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಸೇರ್ಪಡೆಗೊಳ್ಳಲಿದೆಗೊಳ್ಳಲಿದೆ ಎಂದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾವತಿ, ಬೆಳುವಾಯಿ ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಧರೆಗುಡ್ಡೆ ಗ್ರಾ.ಪಂ.ಅಧ್ಯಕ್ಷೆ ತುಳಸಿ ಮೂಲ್ಯ, ಶಿರ್ತಾಡಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕೋಟ್ಯಾನ್, ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ಕುಮಾರ್, ನೆಲ್ಲಿಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲಾ, ಮೂಡಾ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ ಈ ಸಂದರ್ಭದಲ್ಲಿದ್ದರು.
ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಸ್ವಾಗತಿಸಿದರು. ಉಪತಹಶೀಲ್ದಾರ್ ರಾಮ್ ಮತ್ತು ತಿಲಕ್ ಕಾರ್ಯಕ್ರಮ ನಿರೂಪಿಸಿದರು.
0 Comments