ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಮೂಡುಬಿದಿರೆ ಇದರ ಉದ್ಘಾಟನೆಯು ಡಿ. 17ರಂದು ಅಪರಾಹ್ನ 2.00 ಗಂಟೆಗೆ ನಡೆಯಲಿರುವುದಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಉದ್ಘಾಟನೆಯನ್ನು ನೆರವೇರಿಸಲಿರುವುದಾಗಿ ತಿಳಿಸಿದರು.
ಬನ್ನಡ್ಕದ ಪ್ರಾಥಮಿಕ ಶಾಲಾ ಕಟ್ಟಡವನ್ನು ನವೀಕರಿಸಿ ಖಾಸಗಿ ಕಾಲೇಜಿಗೆ ಕಡಿಮೆಯಿಲ್ಲದ ರೀತಿಯಲ್ಲಿ ಪ್ರಾರಂಭಗೊಂಡ ವಿವಿ ಕಾಲೇಜು ಪ್ರಸ್ತುತ ಬಿ.ಕಾಂ, ಬಿ.ಎ., ಬಿ.ಸಿ.ಎ, ವಿಭಾಗಗಳನ್ನು ತೆರೆದುಕೊಂಡಿದ್ದು, 100ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವುದಾಗಿ ಕಾಲೇಜಿನ ಸಂಯೋಜಕ ಡಾ. ಗಣಪತಿ ಗೌಡ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ದೀಪ ಪ್ರಜ್ವಲನೆಗೈದು, ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಎ. ಕೋಟ್ಯಾನ್, ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ಸಿ.ಎಸ್. ಕಲ್ಯಾಣಿ, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂಡುಬಿದಿರೆಯಲ್ಲಿ ಪದವಿ ಕಾಲೇಜು ನಿರ್ಮಿಸುವ ಕನಸು ಕಂಡ ಶಾಸಕರು ವಿಶ್ವವಿದ್ಯಾನಿಲಯ ಘಟಕ ಕಾಲೇಜಿಗೆ ಕೇವಲ 15 ದಿನಗಳಲ್ಲಿ ಮಂಜೂರಾತಿ ಒದಗಿಸಿರುವುದಾಗಿ ವಿವಿಯ ಡೆಪ್ಯುಟಿ ಡೈರಕ್ಟರ್ ಹುಕ್ರಪ್ಪ ನಾಯ್ಕ್ ತಿಳಿಸಿದ್ದಾರೆ. ವಿವಿಯ 6 ನೇ ಘಟಕ ಇದಾಗಿದ್ದು ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿರುವುದರಿಂದ ಹೆಚ್ಚುವರಿ ಕಟ್ಟಡಗಳನ್ನು ಪಡೆದುಕೊಳ್ಳುವುದಾಗಿ ಶಾಸಕ ಕೋಟ್ಯಾನ್ ತಿಳಿಸಿದರು. ವಿದ್ಯಾರ್ಥಿಗಳ ಬೇಡಿಕೆಗಳಿಗನುಗುಣವಾಗಿ ವಿಜ್ಞಾನ ತರಗತಿ ಹಾಗೂ ಹೆಚ್ಚುವರಿ ತಂತ್ರಜ್ಞಾನಗಳನ್ನು ಒದಗಿಸುವುದಾಗಿಯೂ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಪಡುಮಾರ್ನಾಡು ದಯಾನಂದ ಪೈ ಉಪಸ್ಥಿತರಿದ್ದರು.
0 Comments