ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ- ಕಾರ್ಕಳ ಮಾರ್ಗವಾಗಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 159ವ್ಯಾಪ್ತಿಗೊಳಪಡುವ ಪುತ್ತಿಗೆ, ಪಡುಮಾರ್ನಡು ಮತ್ತು ಸಾಣೂರು ಗ್ರಾಮದ ಸಂತ್ರಸ್ತರ ಪರವಾಗಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ನವೆಂಬರ್ ೫ಕ್ಕೆ ಹೆದ್ದಾರಿ ಸಂತ್ರಸ್ತರು ಮಂಗಳೂರಿನಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ಭೇಟಿ ಮಾಡಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ತೋಮಸ್ ಹೆದ್ದಾರಿ ಮಾತನಾಡಿ, ವಿಸ್ತರಣೆ ವೇಳೆ ಕೃಷಿ ಭೂಮಿ ಕಳಕೊಂಡವರಿಗೆ ಸರ್ಕಾರ ಈ ಹಿಂದೆ ಅತ್ಯಲ್ಪ ಮೌಲ್ಯದ ಪರಿಹಾರವನ್ನು ನಿಗದಿಪಡಿಸಿತ್ತು. ಇದರ ವಿರುದ್ಧ ಮೂರು ಗ್ರಾಮದ ಸಂತ್ರಸ್ಥರು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಪರವಾಗಿ ಕೋರ್ಟ್ ತೀರ್ಪು ಬಂದಿರುವುದು ನಮ್ಮ ಹೋರಾಟಕ್ಕೆ ಸಂದ ಮೊದಲ ಯಶಸ್ಸು ಆಗಿದೆ.ಕೋರ್ಟ್ ಆದೇಶದಿಂದ ಇನ್ನುಳಿದ ಸುಮಾರು 20 ಗ್ರಾಮದ ಸಂತ್ರಸ್ಥರ ಪರವಾಗಿ ಕಾನೂನು ಹೋರಾಟ ನಡೆಸಲು ನಮಗೆ ಹೆಚ್ಚಿನ ಬಲ ಸಿಕ್ಕಂತ್ತಾಗಿದೆ ಎಂದರು.
ಸಮಿತಿ ಮುಖಂಡ ಬೃಜೇಶ್ ಶೆಟ್ಟಿ ಮಾತನಾಡಿ ಸಂಸದರು, ಶಾಸಕರ ನಿರ್ಲಕ್ಷ್ಯದಿಂದ ನಾವು ಕೋರ್ಟ್, ಕಚೇರಿ ಅಲೆದು ತೊಂದರೆ ಅನುಭವಿಸುವಂತಾಗಿದೆ. ಕಮಿಷನ್ ಆಸೆಗಾಗಿ ಯೋಜನೆ ವಿಳಂಬವಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಕಾಮಗಾರಿ ಆರಂಭಿಸಿ ಗೊಂದಲ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಹೈಕೋರ್ಟ್ ಆದೇಶ ಪಾಲನೆಗೆ ಅಧಿಕಾರಿಗಳಿಗೆ ಸೂಚಿಸುವಂತೆ ಸಾಣೂರು ಗ್ರಾಮಸ್ಥರ ನಿಯೋಗ ಶೀಘ್ರದಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರನ್ನು ಕಾರ್ಕಳದಲ್ಲಿ ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ಪಂಚಾಯಿತಿ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಹೇಳಿದರು.
ಪಿ.ಕೆ ಥೋಮಸ್, ಸದಾಶಿವ ಶೆಟ್ಟಿ, ನಾಝಿಮ್ ಸಂತ್ರಸ್ಥರ ಪರವಾಗಿ ಮಾತನಾಡಿದರು. ಹೋರಾಟ ಸಮಿತಿ ಪ್ರಮುಖರಾದ ರತ್ನಾಕರ ಶೆಟ್ಟಿ, ಪ್ರಕಾಶ್ಚಂದ್ರ, ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.
0 Comments