ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಬಂಗಾಲಪದವಿನಲ್ಲಿರುವ ಪರಿಶಿಷ್ಟ ಕಾಲೋನಿ ಬಳಿ ನೂತನ ಸ್ಮಶಾನ ನಿರ್ಮಾಣ ಹಾಗೂ ಕಲ್ಲಬೆಟ್ಟು ಶಿಕ್ಷಣ ಸಂಸ್ಥೆಗಳಿರುವ ಪ್ರದೇಶದಲ್ಲಿ ಮದ್ಯದಂಗಡಿ ತೆರಯುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯದ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್, ಪುರಸಭೆ ಆಡಳಿತ ವರ್ಗಕ್ಕೆ ಸ್ಮಶಾನ ನಿರ್ಮಾಣ ಮಾಡಲು ದಲಿತರ ಕಾಲೋನಿ ಜಾಗವೇ ಕಾಣುವುದು ಯಾಕೆ?. ವಾರ್ಡ್ ಸದಸ್ಯರೆ ವಿರೋಧಿಸಿದರೂ, ಉಪಾಧ್ಯಕ್ಷರು ಮುತುವರ್ಜಿವಹಿಸಿ ಸ್ಮಶಾನ ಮಾಡಲು ಹೊರಟಿರುವುದು ಖೇಧಕರ. ದಲಿತರನ್ನು ಬಲಿಪಶು ಮಾಡುವ ಹುನ್ನಾರ ಬೇಡ. ಈ ವಿಚಾರಗಳ ಕುರಿತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳಿ ಮಾಡುತ್ತೇವೆ. ರಾಜ್ಯ ಸಮಿತಿಯ ಗಮನಕ್ಕೂ ತರುತ್ತೇವೆ. ಶಿಕ್ಷಣ ಸಂಸ್ಥೆಗಳು, ದೈವಸ್ಥಾನ, ದೇವಸ್ಥಾನಗಳಿರುವ ಕಲ್ಲಬೆಟ್ಟು ಪ್ರದೇಶದಲ್ಲಿ ಮದ್ಯದಂಗಡಿ ನಿರ್ಮಾಣಕ್ಕೆ ಅವಕಾಶ ನೀಡಿರುವುದು ನೀಚ ಕೆಲಸ. ದಲಿತರ, ಶೋಷಿತರ ವಿರುದ್ಧ ಇಂತಹ ದೌರ್ಜನ್ಯಗಳು ನಡೆದರೆ ಆಡಳಿತ ವರ್ಗದ ವಿರುದ್ಧ ನಿರಂತರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯ ಕೊರಗಪ್ಪ ಮಾತನಾಡಿ, ನಮ್ಮ ಹೋರಾಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಮುಗ್ಧ ಜನಗಳನ್ನು ಬೆದರಿಸಿ ದಲಿತ ಕಾಲೋನಿ ಬಳಿ ಸ್ಮಶಾನ ನಿರ್ಮಿಸಲು ಮುಂದಾದರೆ, ನಮ್ಮ ಪ್ರಾಣದ ಹಂಗು ತೊರೆದು ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ್ ಮುಲ್ಲಕಾಡು, ಸಂಘಟನೆಯ ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ ಕಡಂದಲೆ, ಸಂಘಟನಾ ಸಂಚಾಲಕ ರಾಜು ಗಂಟಾಲ್ಕಟ್ಟೆ, ದಲಿತ ಮುಖಂಡರಾದ ಶಿವಾನಂದ ಪಾಂಡ್ರು, ವಿವೇಕ್ ಶಿರ್ತಾಡಿ, ದೇವದಾಸ ಮುಲ್ಲಕಾಡು, ಬಾಬು ಅಳಿಯೂರು, ಶಿವಕುಮಾರ್, ಹರೀಶ್, ದಿನೇಶ್, ಶೀನ, ರೇವತಿ ಪೂಜರ‍್ತಿ, ಶಶಿಕಾಂತ್, ಸವಿತಾ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
0 Comments