ಶಿವಮೊಗ್ಗ : ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಈ ಪ್ರಕರಣದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಬದಲಾಗಿ ಕೋಮು ಗಲಭೆಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿದೆ ಎನ್ನುವ ಅಂಶ ಇದೀಗ ಬಯಲಾಗಿದೆ. ಈ ಕುರಿತು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ವಿವರ ಅಡಕವಾಗಿದೆ ಎಂದು ರಾಜ್ಯದ ಪ್ರತಿಷ್ಠಿತ ಸುದ್ದಿವಾಹಿನಿ ಟಿವಿ 9 ವರದಿ ಮಾಡಿದೆ.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಮಂದಿ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು, ಜೈಲಿನಲ್ಲಿ ಇರಿಸಲಾಗಿದೆ. ಹರ್ಷ ಕೊಲೆಯ ಮೂಲಕ ಮಾರಕಾಸ್ತ್ರಗಳನ್ನು ಜಳಪಿಸಿ ಸಮಾಜದಲ್ಲಿ ಭಯ ಹುಟ್ಟಿಸುವುದು ಆರೋಪಿಗಳ ಉದ್ದೇಶವಾಗಿತ್ತು. ಅಲ್ಲದೇ ಆರೋಪಿಗಳಿಗೆ ಹಾಗೂ ಹರ್ಷ ನಡುವೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಬದಲಾಗಿ ಯಾವುದೇ ಹಳೆಯ ಗಲಾಟೆಯ ವಿಚಾರಕ್ಕೆ ಕೂಡ ಈ ಕೊಲೆ ನಡೆದಿಲ್ಲ ಅನ್ನೋದು ಬಯಲಾಗಿದೆ.
ಎನ್‌ಐಎಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮೂಲಕ ಹಸ್ತಾಂತರ ಮಾಡಲು ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ ಎಂದು ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
0 Comments