ಮೂಡುಬಿದಿರೆ: ಸರ್ಕಾರಿ ಶಾಲೆಗಳಲ್ಲಿರುವ ತನಕ ಬಿಸಿಯೂಟ ಮಕ್ಕಳ ಮೂಲಭೂತ ಹಕ್ಕಾಗಿರುತ್ತದೆ. ಬಿಸಿಯೂಟ ನೌಕರರ ಮೂಲ ಕೆಲಸ ಅಡುಗೆ ಮಾಡಿ ಬಡಿಸುವುದಾಗಿದೆ. ಆದ್ದರಿಂದ ಬಿಸಿಯೂಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಡುಗೆಯವರಿಗೆ ವಹಿಸಬೇಕು. ಅದನ್ನು ಬಿಟ್ಟು ಅಕ್ಷರ ದಾಸೋಹ ಯೋಜನೆಯನ್ನು ಬುಡಮೇಲು ಮಾಡಿ ಕ್ಲಸ್ಟರ್ ಕಿಚನ್ (ಕೇಂದ್ರೀಕೃತ ಅಡುಗೆಮನೆ) ಮಾಡಲು ಸಿ.ಐ.ಟಿ.ಯು (CITU) ಎಂದಿಗೂ ಬಿಡುವುದಿಲ್ಲ ಎಂದು ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಕೆ. ಯಾದವ ಶೆಟ್ಟಿ ಎಚ್ಚರಿಸಿದರು.
ಅವರು ಬಿಸಿಯೂಟ ನೌಕರರ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ಮೂಡುಬಿದಿರೆಯ ಆಡಳಿತ ಸೌಧದ ಮುಂಭಾಗ ಬುಧವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಸಿಯೂಟ ನೌಕರರಲ್ಲಿ ಎಸ್ಎಸ್ಎಲ್ಸಿ (SSLC), ಪಿಯುಸಿ (PUC) ಹಾಗೂ ಕೆಲವು ಕಡೆ ಪದವೀಧರರೂ ಇದ್ದಾರೆ. ಆದ್ದರಿಂದ ಅವರ ಸಾಮರ್ಥ್ಯವನ್ನು ಇಲಾಖೆಯು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಿ.ಐ.ಟಿ.ಯು ಮುಖಂಡೆ ರಮಣಿ, ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಾಧಾ, ಬಿಸಿಯೂಟ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ಸಿ.ಐ.ಟಿ.ಯು ಮುಖಂಡ ಶಂಕರ ವಾಲ್ಪಾಡಿ ಹಾಗೂ ಬಿಸಿಯೂಟ ನೌಕರರಾದ ಯಶೋಧ, ರಮ್ಯಾ, ವಸಂತಿ ಸಹಿತ ಬಿಸಿಯೂಟ ನೌಕರರು ಭಾಗವಹಿಸಿದ್ದರು.

0 Comments