ಮೂಡುಬಿದಿರೆ: ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಹಾಗೂ ತಂಡಭಾವನೆಯನ್ನು ಬೆಳೆಸುತ್ತದೆ ಎಂದು ಮಂಗಳೂರು ನಗರ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರುಖಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಸಹಯೋಗದಲ್ಲಿ 2026–27ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಕಲ್ಲಬೆಟ್ಟುವಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗೆ ಲಿಂಗ, ಜಾತಿ, ಪ್ರದೇಶ ಸೇರಿದಂತೆ ಯಾವುದೇ ಭೇದಭಾವವಿಲ್ಲ. ಹುಡುಗಿಯರಿಗೂ ಕ್ರಿಕೆಟ್‌ನಲ್ಲಿ ಸಮಾನ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶ್ರಮ, ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಶಿಕ್ಷಣದೊಂದಿಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಮಂಗಳೂರಿನ ಕೆ.ಎಂ.ಎಫ್. ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು. ಸೋಲಿನಿಂದ ಕುಗ್ಗದೆ, ಗೆಲುವಿನಿಂದ ಹಿಗ್ಗದೆ ಕ್ರೀಡಾ ಸ್ಫೂರ್ತಿಯಿಂದ ಮುನ್ನಡೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಮಾತನಾಡಿ, ಮೂಡುಬಿದಿರೆಯಲ್ಲಿ ವಿಭಾಗ ಮಟ್ಟದ ಪಂದ್ಯಾವಳಿ ನಡೆಯುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ. ಕ್ರಿಕೆಟ್ ಪುರುಷರ ಆಟ ಮಾತ್ರವಲ್ಲ; ಮಹಿಳೆಯರೂ ಸಮರ್ಥವಾಗಿ ಆಡಬಲ್ಲರು. ಕ್ರೀಡೆಯಿಂದ ಶಿಸ್ತು, ಸಾಮಾಜಿಕ ಸಾಮರಸ್ಯ ಹಾಗೂ ತಂಡಭಾವನೆ ಬೆಳೆಸಿಕೊಳ್ಳಬಹುದು ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡೆ, ಕಲೆ ಹಾಗೂ ಸಂಸ್ಕೃತಿಗೂ ಅವಕಾಶ ಕಲ್ಪಿಸುವುದು ಸಂಸ್ಥೆಯ ಉದ್ದೇಶ. ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಕ್ರಿಕೆಟ್ ತಂಡದ ಆಟವಾಗಿದ್ದು, ಗೆಲುವಿಗೆ ಒಗ್ಗಟ್ಟು ಅಗತ್ಯ. ಸೋಲು ಗೆಲುವಿನತ್ತ ಕೊಂಡೊಯ್ಯುವ ಮೆಟ್ಟಿಲು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರುಖಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್–1ರ ಅಧ್ಯಕ್ಷ ನವೀನ್ ಚಂದ್ರ ಅಂಬೂರಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ತ್ಯಾಗಂ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಸ್ವಾಗತಿಸಿದರು. ಉಡುಪಿ ಕ್ರಿಕೆಟ್ ತಂಡದ ಕೋಚ್ ಅಡ್ವಿನ್ ಮೆಂಡೋನ್ಸಾ ಮೊದಲ ದಿನದ ಪಂದ್ಯಾಟದ ಅನುಭವ ಹಂಚಿಕೊಂಡರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 20 ತಂಡಗಳು ಪಾಲ್ಗೊಂಡಿದ್ದು, 14ರಿಂದ 17 ವರ್ಷ ವಯೋಮಿತಿಯ ಬಾಲಕರ ಹಾಗೂ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

0 Comments