ಜ 6-10 ವರೆಗೆ ಆಳ್ವಾಸ್ ನುಡಿಸಿರಿ, ವಿರಾಸತ್-2027

ಜ 6-10 ವರೆಗೆ ಆಳ್ವಾಸ್ ನುಡಿಸಿರಿ, ವಿರಾಸತ್-2027

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ವಿರಾಸತ್’ ಹಾಗೂ ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಈ ಬಾರಿ ಒಟ್ಟಿಗೆ ನಡೆಯಲಿದ್ದು, ಜ.6ರಿಂದ 10ರವರೆಗೆ ಐದು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಕನ್ನಡ ಮನಸ್ಸು : ಭವಿಷ್ಯದ ಕನಸು’ ಎಂಬುದು ಆಳ್ವಾಸ್ ನುಡಿಸಿರಿ 2027ರ ಮುಖ್ಯ ಪರಿಕಲ್ಪನೆಯಾಗಿದ್ದು, ಯುವಜನತೆಯನ್ನು ಕೇಂದ್ರವಾಗಿಸಿಕೊಂಡು ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿಯ ಅಸ್ಮಿತೆಯಿಂದ ಕರ್ನಾಟಕದ ಭವಿಷ್ಯ ಕಟ್ಟುವ ಉದ್ದೇಶ ಹೊಂದಿದೆ ಎಂದು ಕಾಯ೯ಕ್ರಮಗಳ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ನುಡಿಸಿರಿ–2027ರ ಸರ್ವಾಧ್ಯಕ್ಷರಾಗಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡದ ಪ್ರಮುಖ ವಿಮರ್ಶಕರಾದ ಅವರು ಮಂಡ್ಯ ಜಿಲ್ಲೆಯ ನರಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿಗಳನ್ನು ಪ್ರಥಮ ರ‍್ಯಾಂಕ್‌ಗಳೊಂದಿಗೆ ಪಡೆದ ಅವರು ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ‘ಕೆ.ಎಸ್.ನ ನುಡಿಮಲ್ಲಿಗೆ’, ‘ಅನುಸಂಧಾನ’, ‘ನವ್ಯತೆ’, ‘ಇಹದ ಪರಿಮಳದ ಹಾದಿ’, ‘ಸಾಹಿತ್ಯ ಸಂಸ್ಕೃತಿ’, ‘ಹಣತೆಯ ಹಾಡು’, ‘ನೆಲ ಸಂಸ್ಕೃತಿ’, ‘ಸಂಸ್ಕೃತಿ ಪಥ’, ‘ಅ.ನ.ಕೃ ಮತ್ತು ಕನ್ನಡ ಸಂಸ್ಕೃತಿ’ ಹಾಗೂ ‘ಕುವೆಂಪು ಅವರ ನಾಟಕಗಳ ಅಧ್ಯಯನ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ವಿ.ಎಂ.ಇನಾಂದಾರ್ ಪ್ರಶಸ್ತಿ, ಆದರ್ಶ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಗೋರಖನಾಥ ಪುರಸ್ಕಾರ, ಶಿವರಾಮ ಕಾರಂತ ಪ್ರಶಸ್ತಿ ಮತ್ತು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಅವರಿಗೆ ಸಂದಿವೆ.

ಆಳ್ವಾಸ್ ನುಡಿಸಿರಿ 2027ರ ಉದ್ಘಾಟಕರಾಗಿ ವಿಶ್ವೇಶ್ವರ ಭಟ್ ಭಾಗವಹಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಮೂಲದ ಅವರು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ನಾಲ್ಕು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ವಿಜಯಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಹಾಗೂ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಕೇಂದ್ರ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಅವರು 2016ರಲ್ಲಿ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೊಸ ರೂಪದಲ್ಲಿ ಪತ್ರಿಕೆಯನ್ನು ಮುನ್ನಡೆಸಿದ್ದಾರೆ. ‘ಜನಗಳ ಮನ’, ‘ನೂರೆಂಟು ನೋಟ’, ‘ನೂರು ಮಾತು’, ‘ದಾರಿದೀಪೋಕ್ತಿ’, ‘ವಕ್ರತುಂಡೋಕ್ತಿ’, ‘ನೂರೆಂಟು ವಿಶ್ವ’, ‘ಸಂಪಾದಕರ ಸತ್ಯಶೋಧನೆ’, ‘ಇದೇ ಅಂತರಂಗ ಶುದ್ಧಿ’ ಸೇರಿದಂತೆ ಹಲವು ಅಂಕಣಗಳನ್ನು ಬರೆಯುತ್ತಿದ್ದಾರೆ. ‘ಭಟ್ಟರ ಸ್ಕಾಚ್’ ಅವರ ಜನಪ್ರಿಯ ಪ್ರಶ್ನೋತ್ತರ ಅಂಕಣವಾಗಿದ್ದು, ಈವರೆಗೆ 97 ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

ಆಳ್ವಾಸ್ ವಿರಾಸತ್ 2027ರ ಉದ್ಘಾಟನಾ ಸಮಾರಂಭ ಜ.6ರಂದು ಸಂಜೆ ನಡೆಯಲಿದೆ. ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಮತ್ತು ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆ ನಡೆಯಲಿದೆ. ಹರಿದ್ವಾರದಿಂದ ಆಗಮಿಸುವ ಗಂಗಾರತಿ ತಂಡ ರಥಾರತಿಯನ್ನು ನೆರವೇರಿಸಲಿದೆ. 

ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರಗಳ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜ.6ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಸಂಗೀತ, ನೃತ್ಯ, ಶಾಸ್ತ್ರೀಯ ಮತ್ತು ಜಾನಪದ ಕಲಾ ಕಾರ್ಯಕ್ರಮಗಳು ನಡೆಯಲಿವೆ.

ಜ.6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, 800ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಮತ್ತು ಮರುಬಳಕೆಯ ವ್ಯವಸ್ಥೆ ರೂಪಿಸಲಾಗುತ್ತಿದೆ. ‘ಚೋಟಾ ಕಾಪ್’ ಯೋಜನೆ, ಐಡಿಯಾಥಾನ್, ‘ಸ್ವಚ್ಛ ಗ್ರಾಮ’ ಸ್ಪರ್ಧೆ, ಪರಿಸರ ಜಾಗೃತಿ ರೀಲ್ಸ್ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ. ಸಮಾರೋಪದಲ್ಲಿ ‘ಸ್ವಚ್ಛ ಗ್ರಾಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯಮಟ್ಟದ ಸಾಂಸ್ಕೃತಿಕ ಜಂಬೂರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಭಾಗವಹಿಸಲಿದ್ದಾರೆ. ಯೋಗ, ಸ್ವಚ್ಛತೆ, ದೇಶಪ್ರೇಮ, ಸೇವಾ ಮನೋಭಾವ, ಕ್ರೀಡಾಸ್ಫೂರ್ತಿ, ಪರಿಸರ ಸಂರಕ್ಷಣೆ ಹಾಗೂ ಶಿಸ್ತಿಗೆ ಸಂಬಂಧಿಸಿದ ತರಬೇತಿ ನಡೆಯಲಿದೆ.

800 ವಿದ್ಯಾರ್ಥಿ ಕಲಾವಿದರಿಗೆ ಶಾಸ್ತ್ರೀಯ ನೃತ್ಯ, ಸಂಗೀತ, ಪಕ್ಕವಾದ್ಯ ಮತ್ತು ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಉಚಿತ ತರಬೇತಿ ಕಾರ್ಯಾಗಾರ ನಡೆಯಲಿದೆ. 30 ವರ್ಷದೊಳಗಿನ ವಿದ್ಯಾರ್ಥಿ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರಿಗೆ ಅವಕಾಶವಿದೆ.

ಜ.8ರಂದು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಆಳ್ವಾಸ್ ವಿದ್ಯಾರ್ಥಿಸಿರಿ’ ಸಮ್ಮೇಳನ ನಡೆಯಲಿದೆ. ಜ.9ರಂದು ಮೊದಲ ಬಾರಿಗೆ ‘ಆಳ್ವಾಸ್ ಯುವಸಿರಿ’ ಆಯೋಜಿಸಲಾಗಿದ್ದು, ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಕ್ಷೇತ್ರಗಳ ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಗುವುದು.

ನುಡಿಸಿರಿ–ವಿರಾಸತ್‌ನ ಅಂಗವಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳ ನಡೆಯಲಿವೆ. ಕೃಷಿ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಆವಿಷ್ಕಾರಗಳು, ಕರ್ನಾಟಕದ ಸಾಂಪ್ರದಾಯಿಕ ಆಹಾರ, ವಿವಿಧ ವಿಷಯಗಳ ಪುಸ್ತಕಗಳು ಹಾಗೂ ಚಿತ್ರಕಲೆ, ಕರಕುಶಲ ಮತ್ತು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಇರಲಿದೆ.

ಐದು ದಿನಗಳ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ರೂ.500 ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

 ನುಡಿಸಿರಿ ವಿರಾಸತ್-2027ರ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಹಾಗೂ ನುಡಿಸಿರಿ ವಿರಾಸತ್ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Post a Comment

0 Comments

Advertisement