ಮೂಡುಬಿದಿರೆ: ಕೇರಳದ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯಮಯ ಜೀವನಶೈಲಿಯನ್ನು ಕರ್ನಾಟಕದ ನೆಲದಲ್ಲಿ ಅನಾವರಣಗೊಳಿಸುವ ‘ಆಳ್ವಾಸ್ ಕೇರಳೀಯಂ–೨೦೨೬’ ಕಾರ್ಯಕ್ರಮ ಆಳ್ವಾಸ್ ವಿದ್ಯಾಸಂಸ್ಥೆಯ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಗುರುವಾರ ವೈಭವದಿಂದ ನಡೆಯಿತು.
ಮಲಯಾಳಂ ಚಿತ್ರರಂಗದ ನಟ ಹಾಗೂ ನಿರ್ದೇಶಕ ಬಿನು ಪಪ್ಪು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಸುರಕ್ಷಿತ ಮತ್ತು ಜವಾಬ್ದಾರಿಯುತ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಹಾಗೂ ಆಟೋಮೋಟಿವ್ ಕಂಟೆಂಟ್ ಕ್ರಿಯೇಟರ್, ಆಳ್ವಾಸ್‌ನ ಹಳೆ ವಿದ್ಯಾರ್ಥಿ ಮೊಹಮ್ಮದ್ ಫಹಾದ್, ಆಳ್ವಾಸ್ ಸಂಸ್ಥೆಯ ಬೆಳವಣಿಗೆ ಹಾಗೂ ಇಂತಹ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕೇರಳದ ಸಂಸ್ಕೃತಿಯನ್ನು ಒಟ್ಟಾಗಿ ಪ್ರಸ್ತುತಪಡಿಸಿರುವುದು ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಪ್ರತಿಬಿಂಬವಾಗಿದೆ. ಕೇರಳದ ವೈಶಿಷ್ಟ್ಯವೇ ಅದರ ವೈವಿಧ್ಯತೆ. ವಿಭಿನ್ನ ಧರ್ಮ, ಸಮುದಾಯ ಮತ್ತು ಚಿಂತನೆಗಳ ಜನರು ಪರಸ್ಪರ ಗೌರವದೊಂದಿಗೆ ಬದುಕುತ್ತಿರುವ ಕೇರಳದ ಸಾಮಾಜಿಕ ಸಾಮರಸ್ಯ ದೇಶಕ್ಕೆ ಮಾದರಿ. ಎಲ್ಲರನ್ನು ಒಗ್ಗೂಡಿಸುವ ಓಣಂ ಈ ವೈವಿಧ್ಯತೆಯ ಪ್ರತೀಕವಾಗಿದೆ.
ಕೇರಳವು ಕ್ರೀಡೆ, ಶಿಕ್ಷಣ, ವಿಜ್ಞಾನ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪಿ.ಟಿ. ಉಷಾ, ಡಾ. ವರ್ಗೀಸ್ ಕುರಿಯನ್ ಮತ್ತು ಅರುಂಧತಿ ರಾಯ್ ಅವರಂತಹ ಗಣ್ಯರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನರ ಮೇಲಿದೆೆ ಎಂದರು.
ಉದ್ಯಮಿ ಮುಸ್ತಾಫ, ಪ್ರಮುಖರಾದ ಅಕ್ಷಯ ಜೈನ್, ನೌಷಧ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಫಾವಜ್ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಕೆಝಿಯಾ ಮೇರಿ ಜಾರ್ಜ ಸ್ವಾಗತಿಸಿದರು. ಫೆನಿಲ್ಡಾ ನಿರೂಪಿಸಿದರು. ಆರಂಟಾ ವಂದಿಸಿದರು.
ಕೇರಳದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟ ಭವ್ಯ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಕೇರಳದ ಸಾಂಪ್ರದಾಯಿಕ ವೇಷಭೂಷಣ, ಜನಪದ ಕಲೆ, ಶಾಸ್ತ್ರೀಯ ನೃತ್ಯ, ವಾದ್ಯ ಸಂಗೀತ ಹಾಗೂ ಆಚರಣೆಗಳ ಸೊಬಗನ್ನು ಮೆರವಣಿಗೆಯಲ್ಲಿ ಪ್ರಸ್ತುತಪಡಿಸಲಾಯಿತು.
ಮೆರವಣಿಗೆಯಲ್ಲಿ ಕಥಕಳಿ, ಮೋಹಿನಿಯಾಟ್ಟಂ ಮತ್ತು ಮಾವೇಲಿ ಪಾತ್ರಗಳ ಸಂಯೋಜಿತ ಪ್ರದರ್ಶನ ಗಮನ ಸೆಳೆಯಿತು. ಕೇರಳದ ಸಾಂಪ್ರದಾಯಿಕ ವಾದ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಪಂಚವಾದ್ಯ ಮೆರವಣಿಗೆಗೆ ವಿಶಿಷ್ಟ ಮೆರುಗು ನೀಡಿತು. ಅದರೊಂದಿಗೆ ತಾಲಪೊಲಿ, ಪುಲಿಕಳಿ, ಚೆಂಡೆ, ಬಾಲಕ–ಬಾಲಕಿಯರ ಸಾಂಸ್ಕೃತಿಕ ಸಂಯೋಜಿತ ಪ್ರದರ್ಶನ, ಕಾವಡಿ, ಒಪ್ಪನ, ಕೋಲ್ಕಳಿ, ಕಲರಿ ಮೊದಲಾದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಮೂಡಿಬಂದವು.
ಕೇರಳದ ಉತ್ತರ ಭಾಗದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ತೆಯ್ಯಂ ವಿವಿಧ ರೂಪಗಳಲ್ಲಿ ಪ್ರಸ್ತುತವಾಯಿತು. ಥಾಬೋಲಂ, ಗರುಡನ್ ಹಾಗೂ ಪೂರ್ಣ ತಿರುವಾತಿರ ಪ್ರದರ್ಶನಗಳು ಮೆರವಣಿಗೆಯ ಮತ್ತಷ್ಟು ಪ್ರಮುಖ ಆಕರ್ಷಣೆಗಳಾಗಿದ್ದವು. ಹೀಗೆ ಕೇರಳದ ಶಾಸ್ತಿçÃಯ, ಜನಪದ ಹಾಗೂ ಆಚರಣಾಧಾರಿತ ಕಲೆಗಳ ವೈವಿಧ್ಯವನ್ನು ವಿದ್ಯಾರ್ಥಿಗಳು ಕಲಾತ್ಮಕವಾಗಿ ಕಟ್ಟಿಕೊಟ್ಟರು.
ಕೇರಳದ ಸಾಂಪ್ರದಾಯಿಕ ಜನಪದ ನೃತ್ಯವಾದ ಮೆಗಾ ತಿರುವಾತ್ತಿರ ಕಾರ್ಯಕ್ರಮದ ಆರಂಭದಲ್ಲೇ ವಿಶೇಷ ಮೆರುಗು ನೀಡಿತು. ಇದಾದ ಬಳಿಕ ಕೇರಳದ ವಿವಿಧ ಪ್ರದೇಶಗಳ ವಿಶಿಷ್ಟ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಕಾಯ್ಕೊಟ್ಟಿಕಲಿ, ಒಪ್ಪಣ, ಕೊಲ್ಕಳಿ, ಕಲರಿ ಮತ್ತು ತೆಯ್ಯಂ ಸೇರಿದಂತೆ ಹಲವು ಕಲಾ ಪ್ರಕಾರಗಳು ವೇದಿಕೆಯಲ್ಲಿ ಮೂಡಿಬಂದವು.

0 Comments