ಪ್ರೇರಣಾ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ
ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಜರುಗಿದ " ಶಿಕ್ಷಕ ದಿನಾಚರಣೆ " ಯನ್ನು ಉದ್ಘಾಟಿಸುತ್ತಾ , ನಿವೃತ್ತ ಶಿಕ್ಷಕ ಶ್ರೀ ಕೆ . ಶ್ಯಾಮ ಹೆಗ್ಡೆ " ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ . ಶಿಕ್ಷಕರು ನಿವೃತ್ತರಾದ ನಂತರವೂ ಅವರ ವಿದ್ಯಾರ್ಥಿಗಳಿಗೆ ಅವರು ಸದಾ ಗುರುಗಳಾಗಿಯೇ ಗುರುತಿಸುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಗುರಿಯಿದ್ದರೆ ಸಾಲದು , ಆ ಗುರಿಯನ್ನು ಸಾಧಿಸಲು ಗುರುವೂ ಬೇಕು " ಎಂದು ನುಡಿದರು . ಸಭೆಯ ಅಧ್ಯಕ್ಷತೆ ವಹಿಸಿದ ಪ್ರೇರಣಾ ಶಾಲೆಯ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು " ಹೆಚ್ಚಿನ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುವುದು ಶಿಕ್ಷಕರ ನೇತೃತ್ವದಲ್ಲಿ . ಆದರೆ , ಪ್ರೇರಣಾ ಶಾಲೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಆಯೋಜನೆಯಲ್ಲೇ ಜರುಗುತ್ತಿರುವುದು ನಿಜಾರ್ಥದಲ್ಲೇ ಶಿಕ್ಷಕರಿಗೆ ನೀಡುವ ಗೌರವ " ಎಂದು ನುಡಿದರು .
ಪ್ರೇರಣಾ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ " ಶಿಕ್ಷಕರ ದಿನಾಚರಣೆ " ಯನ್ನು ವಿಶಿಷ್ಠವಾಗಿ ಆಚರಿಸಿದರು . ಪ್ರೇರಣಾ ಶಾಲಾ ನಾಯಕ ಶ್ರೀ ಸಾಕೇತ್ ಆಚಾರ್ಯರ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದೊಂದಿಗೆ ಪಾಲ್ಗೊಂಡರು . ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ , ಶಿಕ್ಷಕಿಯರಿಗೆ ಓಟದ ಸ್ಪರ್ಧೆ , ಹಗ್ಗ ಜಗ್ಗಾಟ , ತ್ರೋಬಾಲ್ , ಅದೃಷ್ಟ ಕುರ್ಚಿ ಸಹಿತ ಸುಮಾರು 12 ಸ್ಪರ್ಧೆಗಳನ್ನು ಹಮ್ಮಿಕೊಂಡರು . ನಂತರದಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಭಾರತೀಯ ಸಂಸ್ಕೃತಿಯಂತೆ , ಅವರ ಪಾದ ತೊಳೆದು , ಒರಸಿ " ಪಾದ ಪೂಜೆ " ಮಾಡಿ , ಶಿಕ್ಷಕರಿಂದ ಆಶೀರ್ವಾದ ಪಡೆದರು . ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ವಿದ್ಯಾರ್ಥಿಗಳೇ ಭೋಜನ ಬಡಿಸಿ ಗೌರವ ಸಲ್ಲಿಸಿದರು . ನಂತರದ ಸಭಾ ಕಾರ್ಯಕ್ರಮವೂ ವಿಧ್ಯಾರ್ಥಿಗಳ ನೇತೃತ್ವದಲ್ಲೇ ಜರುಗಿತು . ವಿದ್ಯಾರ್ಥಿಗಳೇ ಸ್ವರ್ಧಾವಿಜೇತ ಶಿಕ್ಷಕರಿಗೆ ಬಹುಮಾನ ನೀಡಿದರು . ಪ್ರೇರಣಾ ಶಾಲೆಯ ಉಪ ನಾಯಕಿ ಕು. ಮನಸ್ವೀ ಶರ್ಮರು ಶಿಕ್ಷಕರನ್ನು ಸ್ವಾಗತಿಸಿದರು . ಕುಮಾರಿ ತನಿಷ್ಕ ಬಿ ಕುಂದರ್ ಕಾರ್ಯಕ್ರಮ ನಿರೂಪಣೆ ಮಾಡಿದರು . ಶ್ರೀನಿಧಿ ಬಹುಮಾನ ವಾಚನ ಮಾಡಿ , ಪ್ರಧಾನ್ ಆರ್ ಭಂಡಾರಿ ಧನ್ಯವಾದ ಸಲ್ಲಿಸಿದರು . ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರಿಗೆ ಉಡುಗೊರೆ ನೀಡಿ ಆಶೀರ್ವಾದ ಪಡೆದರು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವತ್ಸಲಾ ರಾಜೇಶ್ ಹಾಗೂ ಸೇವಾಂಜಲಿ ಟ್ರಸ್ಟ್ ( ರಿ ) ನ ಟ್ರಸ್ಟೀ ಡಾ.ಆನಂದ ಕಾರ್ಲರು ಉಪಸ್ಥಿತರಿದ್ದರು . ಶಾಲಾ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು ಆಡಳಿತ ಮಂಡಳಿಯ ಪರವಾಗಿ ಎಲ್ಲಾ ಶಿಕ್ಷಕರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದರು .

0 Comments