ಕರಾವಳಿಗೆ ಬಂತು ರಾಜ್ಯ ಸರಕಾರ - ‘ನಮಸ್ಕಾರ ಮಂಗಳೂರು’
ಸಂಚಲನ ಮೂಡಿಸಿದ ಮುಖ್ಯಮಂತ್ರಿ ಡಿ.ಕೆ.ಶಿ.
. ಸಮಾಚಾರ, ಮಂಗಳೂರು: ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟದ ಪ್ರಥಮ ಸಭೆ ಕರಾವಳಿ ರಾಜಧಾನಿ ಮಂಗಳೂರಿನಲ್ಲಿ ಇಂದು ಯಶಸ್ವಿಯಾಗಿ ನಡೆಯಿತು. ಕರಾವಳಿ ಜನರ ಆಶೋತ್ತರಗಳಿಗೆ ಪೂರಕವಾಗಿ ನಡೆದ ಸಭೆ ತೀವ್ರ ಸಂಚಲನ ಮೂಡಿಸಿದರೆ ಕಾಂಗ್ರೆಸ್ಸಿಗರಿಗೆ ಹೊಸ ಹುಮ್ಮಸ್ಸು ತಂದಿದೆ.
ಪೂರ್ಣ ಕುಂಭ ಸ್ವಾಗತ..ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಕರಾವಳಿಯ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಸಚಿವ ಸಂಪುಟ ಸಭೆಗೆ ಮುನ್ನ ಮುಖ್ಯಮಂತ್ರಿ ಹಾಗೂ ಸಚಿವರು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರನ್ನು ಸಾಂಪ್ರದಾಯಿಕ ಯಕ್ಷಗಾನ ವೇಷಧಾರಿಗಳು, ಚೆಂಡೆ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.
ಬಳಿಕ ಐರಾವತ ಬಸ್‌ನಲ್ಲಿ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಅಲ್ಲಿಂದ ಪಂಪ್‌ವೆಲ್‌ಗೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಸಚಿವರನ್ನು ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಪಂಪ್‌ವೆಲ್‌ನಿಂದ ಪಡೀಲ್‌ನ ಪ್ರಜಾ ಸೌಧದವರೆಗೆ ಮೆರವಣಿಗೆಯ ಮೂಲಕ ಕರೆತರಲಾಯಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ಸ್ವಾಗತ ಕೋರಿದರು.
ಪ್ರಜಾ ಸೌಧದ ಪ್ರವೇಶ ದ್ವಾರದ ಬಳಿ ಕಲ್ಲಡ್ಕದ ಸಾಂಪ್ರದಾಯಿಕ ಗೊಂಬೆ ಪ್ರದರ್ಶನ ಹಾಗೂ ಪೂರ್ಣಕುಂಭದೊಂದಿಗೆ ಆತಿಥ್ಯ ನೀಡಿ ಮುಖ್ಯಮಂತ್ರಿ ಮತ್ತು ಸಚಿವರನ್ನು ಬರಮಾಡಿಕೊಳ್ಳಲಾಯಿತು.
ಪ್ರಜಾ ಸೌಧದ ಆವರಣ ಪ್ರವೇಶಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರೊಂದಿಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.
ಬಳಿಕ ಪ್ರಜಾ ಸೌಧದ ಎದುರಿನ ಧ್ವಜಸ್ತಂಭದ ಬಳಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರು ಗುಂಪು ಛಾಯಾಚಿತ್ರಕ್ಕೆ ಪೋಸ್ ನೀಡಿ ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸಿದರು.
ಐತಿಹಾಸಿಕ..ಮಂಗಳೂರಿನಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆ ಕರಾವಳಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಮಂಗಳೂರಿನ ಇತಿಹಾಸದಲ್ಲೇ ಐತಿಹಾಸಿಕ ಎಂಬಂತೆ ನಡೆದ ಸಚಿವ ಸಂಪುಟ ಸಭೆಯ ಕುರಿತು ಸಾಮಾನ್ಯ ಜನರಲ್ಲೂ ತೀವ್ರ ಕುತೂಹಲ ಮೂಡಿತ್ತು.. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿರುವುದು ಈ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿಯನ್ನು ನೀಡಿದೆ. ತುಳುವಿಗೆ ಸ್ಥಾನಮಾನದ ಕನಸು ಹತ್ತು ಹಲವು ವರ್ಷಗಳದ್ದು, ಇಂದು ಈಡೇರಿದ ಖುಷಿ ಎಲ್ಲರ ಮುಖದಲ್ಲಿ ಕಾಣುತಿತ್ತು.
’ಗಾಂಧಿ ಉಳಿದಿದ್ದ ಮನೆಯಲ್ಲಿ ಉಪಾಹಾರ..
ಮಹಾತ್ಮ ಗಾಂಧಿ ಉಳಿದಿದ್ದ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ‘ಯಾರೂ ಗಾಬರಿಯಾಗಬೇಕಿಲ್ಲ. ನಮಗೆ ರಾಜಕೀಯ ಮುಖ್ಯವಲ್ಲ, ಜನರ ಬದುಕು ಮುಖ್ಯ. ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುವವರು. ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಯಾರೂ ಗಾಬರಿ ಪಡಬೇಕಿಲ್ಲ, ಎಲ್ಲರ ಚಿಂತನೆಯನ್ನು ಒಳಗೊಂಡು ನಮ್ಮ ಸರಕಾರ ಕೆಲಸ ಮಾಡಲಿದೆ’. ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಹೋಗಿದ್ದೆ ಅಲ್ಲಿ ಉಪಾಹಾರ ಮಾಡಿದೆ. ’ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದೆ. ಇಲ್ಲಿಗೆ ಬಂದಿರುವುದು ಬಹಳ ಸಂತೋಷ ಆಗಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿ ಹೋಗುತ್ತೇನೆ” ಎಂದು ಈ ಸಂದರ್ಭ ಹೇಳಿದರು.
‘ನಮಸ್ಕಾರ ಮಂಗಳೂರು..
ಕರಾವಳಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ಸ್ಥಳೀಯ ಜನರ ಆಶೋತ್ತರಗಳನ್ನು ಈಡೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇರವಾಗಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ನಮಸ್ಕಾರ ಕುಡ್ಲ!” ಎಂದು ಕರಾವಳಿ ಜನತೆಗೆ ಶುಭಾಶಯ ಕೋರಿದ್ದಾರೆ.
ಕರಾವಳಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆ ಐತಿಹಾಸಿಕವಾಗಿದ್ದು, ಈ ಸಭೆ ಹೊಸ ಮುನ್ನುಡಿ ಬರೆಯಲಿದೆ ಎಂದು ಮುಖ್ಯಮಂತ್ರಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ತುಳುನಾಡಿನ ಜನತೆ ಬಯಸಿದ್ದು ಇವತ್ತು ಸಿಕ್ಕಿದೆ. ತುಳುನಾಡಿನ ಜನರ ಪ್ರಾರ್ಥನೆ, ಪ್ರಯತ್ನಕ್ಕೆ ಫಲಸಿಕ್ಕಿದೆ ಎಂದಿದ್ದಾರೆ.
ಪ್ರತಿಭಟನೆ...ಜೈಲು ಜಾಮರ್ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಚಿವ ಸಂಪುಟ ಸಭೆ ನಡೆಯುವ ಪ್ರಜಾ ಸೌಧಕ್ಕೆ ಮುತ್ತಿಗೆ ಹಾಕಲು ತೆರಳಲು ಮುಂದಾಗಿದ್ದ ವಕೀಲರನ್ನು ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದರು.
.ಕರಾವಳಿ ಕರ್ನಾಟಕದ ಅಭಿವೃದ್ದಿ ನೀತಿಯನ್ನು ಜನಪರವಾಗಿ ರೂಪಿಸಲು ಆಗ್ರಹಿಸಿ, ಕಾರ್ಪೊರೇಟ್ ಪರವಾದ ಪಿಪಿಪಿ ನೀತಿ ಬೇಡ ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ ಒದಗಿಸುವ ನೀತಿ ಬೇಕು ಎಂದು ಒತ್ತಾಯಿಸಿ ದ.ಕ. ಮತ್ತು ಉಡುಪಿ ಸಿಪಿಎಂ ಸಮಿತಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಗೆ ಆಗ್ರಹ ಪತ್ರ ಸಲ್ಲಿಸಲು ಹೊರಟ ಮೆರವಣಿಗೆಯನ್ನು ಶುಕ್ರವಾರ ಬೆಳಗ್ಗೆ ಬೆಂದೂರ್ ವೆಲ್ ವೃತ್ತದ ಬಳಿ ಪೊಲೀಸರು ತಡೆದು, ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇನ್ನೊಂದಡೆ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಹತ್ಯೆ ಆರೋಪಿಗಳಿಗೆ ಜಾಮೀನು ಮಂಜೂರುಗೊಂಡಿರುವುದನ್ನು ಖಂಡಿಸಿ ಎಸ್‌ಡಿಪಿಐ ವತಿಯಿಂದ ಶುಕ್ರವಾರ ಬೆಳಗ್ಗೆ ನಗರದ ಸ್ಟೇಟ್ ಬ್ಯಾಂಕ್ ಬಳಿ ಪ್ರತಿಭಟನೆ ನಡೆಯಿತು. ನಗರದ ಸ್ಟೇಟ್ ಬ್ಯಾಂಕ್ ನ ರಾವ್ ಆಂಡ್ ರಾವ್ ಸರ್ಕಲ್ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

0 Comments