ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಹೋಗಿರುವುದರಿಂದ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರು ನಾಡೋಜ ಡಾ.ಕೈಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರ ತಿಳಿಸಿರುತ್ತಾರೆ. 2026 ಜುಲೈ 26 ರಂದು ನಡೆಯುವ ಕಾಸರಗೋಡು ಕನ್ನಡ ಭವನ ರಜತೋತ್ಸವ ಸಂಭ್ರಮದ ಸಂದರ್ಭದಲ್ಲಿ ನಡೆಯುವ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಕಳೆದ ಮೂರು ದಶಕಗಳಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢ ಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯ ಸೌರಭ ಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಮೂಡುಬಿದಿರೆ ಪರಿಸರದ ವಿದ್ಯಾಸಂಸ್ಥೆಗಳಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನೂರಾರು ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ನೃತ್ಯ ಸೌರಭ ಯಕ್ಷ ಸೌರಭ ಗಾನ ಸೌರಭ ತರಬೇತಿ ಮತ್ತು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುತ್ತಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕಕ ಸಂಘದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಘಟಕದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಪದಾಧಿಕಾರಿಗಳಾಗಿ ಕಳೆದ 30 ವರ್ಷಗಳಿಂದ ಶಿಕ್ಷಕ ಸಂಘಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಶಿಕ್ಷಣ ಶಿಕ್ಷಕ ಸಂಘಟನೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಡಾ. ರಾಮಕೃಷ್ಣ ಶಿರೂರು ಅವರಿಗೆ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಲಭಿಸಲಿ ಎಂದು ಹಾರೈಸಿ ಕರ್ನಾಟಕ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಪಿ.ಎಂ. ವೆಂಕಟರಮಣ ಹೊಳ್ಳ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.


0 Comments