ಕಳೆದ ವರ್ಷ ಗುಡ್ಡ ಕುಸಿತದಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಉಳ್ಳಾಲ ತಾಲೂಕಿನ ಮಂಜನಾಡಿಯ ಅಶ್ವಿನಿ ಎಂಬ ಮಹಿಳೆಗೆ ಸಂಘದ ಹಿರಿಯರ ಮಾರ್ಗದರ್ಶನದಂತೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲುರವರು ಮಹಾರಾಷ್ಟ್ರದ ಲೋಧಾ ಟ್ರಸ್ಟ್ ಮೂಲಕ ಕಾಲು ಜೋಡಣೆಯ ಧನಸಹಾಯ ಹಸ್ತಾಂತರಿಸಿದ್ದರು.
ಈ ಸಂದರ್ಭದಲ್ಲಿ ಅಶ್ವಿನಿ ಅವರ ಮಾವ ಕಾಂತಪ್ಪ ಪೂಜಾರಿಯವರು ಕೂಡಾ ಈ ದುರ್ಘಟನೆಯ ವೇಳೆ ಒಂದು ಕಾಲನ್ನು ಕಳೆದುಕೊಂಡಿರುವ ವಿಚಾರವನ್ನು ತಿಳಿದು ಅವರಿಗೂ ಕೃತಕ ಕಾಲು ಜೋಡಣೆ ಆಗಬೇಕೆನ್ನುವ ದೃಷ್ಟಿಯಿಂದ ಮತ್ತೊಂದು ಸುತ್ತು ದಾನಿಗಳನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಶಾಸಕರಾದ ಮಹೇಶ್ ಟೆಂಗಿನಕಾಯಿಯವರ ಜೊತೆ ಮಾತುಕತೆ ನಡೆಸಿದಾಗ ಕಾಂತಪ್ಪ ಪೂಜಾರಿಯವರ ಕೃತಕ ಕಾಲು ಜೋಡಣೆಗೆ ಸಂಬಂಧಿಸಿದ ಸಹಕಾರವನ್ನು ತಮ್ಮ ಟ್ರಸ್ಟ್‌ನಿಂದ ತಕ್ಷಣವೇ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಳಿನ್ ಕುಮಾರ್ ಕಟೀಲುರವರು "ಆದಷ್ಟು ಬೇಗ ಅವರಿಬ್ಬರೂ ಎಲ್ಲರ ಹಾಗೆ ನಡೆಯುವಂತಾಗಲಿ ಎಂದು ಕಟೀಲು ದುರ್ಗಾಪರಮೇಶ್ವರಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಸಂಬಂಧ ಸಹಕರಿಸಿದ ಶಾಸಕ ಮಿತ್ರ ಶ್ರೀ ಮಹೇಶ್ ಟೆಂಗಿನಕಾಯಿ ಹಾಗೂ ಸಂತ್ರಸ್ತ ಕುಟುಂಬದ ಜೊತೆಗೆ ನಿಂತಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ತಿಳಿಸಿದ್ದಾರೆ.


0 Comments