ಮೂಡುಬಿದಿರೆ: ಸುಳ್ಯ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ 'ಭಾವಪೂರ್ಣ ಶ್ರದ್ಧಾಂಜಲಿ' ಎಂದು ಬರೆಯುವ ಮೂಲಕ ನಡೆಸಿದ ಅವಹೇಳನಕಾರಿ ಕೃತ್ಯವನ್ನು ಆದಿದ್ರಾವಿಡ ಸಮಾಜ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ತೀವ್ರವಾಗಿ ಖಂಡಿಸಿದೆ.
ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಶೀನಾ ಮಾಸ್ತಿಕಟ್ಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಯಾರೊಬ್ಬರೂ ಇಂತಹ ನೀಚ ಕೃತ್ಯ ಎಸಗಲು ಸಾಧ್ಯವಿಲ್ಲ. ಇಂದು ಒಂದು ಜೀವ ಉಳಿಸಲು ಜಾತಿ-ಮತ ಭೇದ ಮರೆತು ಜೀರೋ ಟ್ರಾಫಿಕ್ ಮೂಲಕ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ಮಾನವೀಯ ಸಂಸ್ಕೃತಿ ನಮ್ಮದು. ಹಾಗಿರುವಾಗ, ಸುಳ್ಳು ಸುದ್ದಿ ಹರಡಿ ಶಾಸಕಿಯ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರುವುದು ಅತ್ಯಂತ ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ಕುಕೃತ್ಯವು ಕೇವಲ ವ್ಯಕ್ತಿಯೊಬ್ಬರ ತೇಜೋವಧೆಯಲ್ಲದೆ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಪೊಲೀಸರು ತಕ್ಷಣವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಆರೋಪಿಯನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದ ಅಥವಾ ಸಮಾಜದ ವ್ಯಕ್ತಿಗಳ ವಿರುದ್ಧ ಇಂತಹ ಅಮಾನವೀಯ ಕೃತ್ಯ ನಡೆಯದಂತೆ ಘನ ನ್ಯಾಯಾಲಯವು ಈ ಪ್ರಕರಣದಲ್ಲಿ ಸಹಾನುಭೂತಿ ತೋರಿಸದೆ ಮಾದರಿ ಶಿಕ್ಷೆ ನೀಡಬೇಕು" ಎಂದು ಆಗ್ರಹಿಸಲಾಯಿತು.
ಮೋರ್ಚಾದ ಮೂಡುಬಿದಿರೆ ಮಂಡಲದ ಕಾರ್ಯದರ್ಶಿ ರಾಜು ದರೆಗುಡ್ಡೆ, ಮುಖಂಡರಾದ ಜಯಕುಮಾರ್ ಬೆಳುವಾಯಿ, ಸತೀಶ್ ನಲ್ಕೆಮಾರ್, ತಿಮ್ಮಪ್ಪ ಮಾಸ್ತಿಕಟ್ಟೆ ಸುದ್ದಿಗೋಷ್ಠಿಯಲ್ಲಿದ್ದರು.



0 Comments