ಧಾಮಿ೯ಕ ಕೇಂದ್ರಗಳಿಂದ ಸಮಾಜದಲ್ಲಿ ಸಾಮರಸ್ಯ: ಭಟ್ಟಾರಕ ಶ್ರೀ
ಮೂಡುಬಿದಿರೆ: ಜೈನ ಹಾಗೂ ಹಿಂದೂ ಧರ್ಮಗಳ ನಡುವೆ ಅನ್ಯೋನ್ಯವಾದ ಆಧ್ಯಾತ್ಮ ಸಂಬಂಧವು ಅನಾದಿಕಾಲದಿಂದಲೂ ಇದೆ. ನಾವು ಬಸದಿ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಧಾಮಿ೯ಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಸಾಮರಸ್ಯವು ಜಾಗೃತಗೊಳ್ಳುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಅವರು ಮೂಡುಬಿದಿರೆ ಲೆಪ್ಪದ ಬಸದಿಯ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮೀಜಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಬಸದಿಯ ವಾರ್ಷಿಕ ಅಟ್ಟಳಿಗೆ ಅಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವಾಲಯ, ಬಸದಿ ಹಾಗೂ ದೈವರಾಧನೆಯನ್ನು ಲೇವಡಿ ಮಾಡುವುದು ಸರಿಯಲ್ಲ. ಹಿಂದೂ ಮತ್ತು ಜೈನ – ಎರಡೂ ಧರ್ಮಗಳ ಸಂಸ್ಕೃತಿಯ ಅನನ್ಯತೆಯನ್ನು ಬೆಳೆಸುವಂತಹ ಪುಣ್ಯದ ಕೆಲಸ ಜೈನ ಮನೆತನಗಳಿಂದಾಗಿದೆ. ಈ ಆದರ್ಶ ಪರಂಪರೆಯನ್ನು ಮುಂದುವರಿಸುವಂತಹ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೆ.ಪಿ. ಜಗದೀಶ್ ಅಧಿಕಾರಿ ಅವರು ಅಟ್ಟಳಿಗೆಯ ಎದುರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹಿರಿಯರು ಅಪೂರ್ವ ರೀತಿಯಲ್ಲಿ ನಿರ್ಮಿಸಿದ ಬಸದಿಗಳನ್ನು ಉಳಿಸುವುದು ಪ್ರತಿಯೊಬ್ಬ ಜೈನರ ಕರ್ತವ್ಯವಾಗಿದೆ ಎಂದರು. ಜೈನಮಠದ ಅಭಿವೃದ್ಧಿ ಕೆಲಸಗಳು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ನಾವೆಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಜಯಸೇನ ಇಂದ್ರ, ಪಟ್ಟದ ಪುರೋಹಿತ ನಾಗೇಂದ್ರ, ಬಸದಿ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿರುವ ನಿವೃತ್ತ ಪ್ರಾಂಶುಪಾಲ ಡಾ. ಸುದರ್ಶನ್ ಕುಮಾರ್ ಪಾದೂರು ಹಾಗೂ ಸರ್ಜನ್ ವಿಭಾಗದಲ್ಲಿ ರ್‍ಯಾಂಕ್ ಪಡೆದ ಡಾ. ಉದತ್ತ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಮನೆತನದ ಹಿರಿಯರಾದ ವೀರೇಂದ್ರ, ಸಂಪತ್ ಸಾಮ್ರಾಜ್ಯ ಶಿಮುಂಜೆ ಗುತ್ತು ಶಿರ್ತಾಡಿ, ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುಧೇಶ್ ಕುಮಾರ್, ಎ. ಸುಧೀಶ್ ಕುಮಾರ್ ಆನಡ್ಕ, ಆದರ್ಶ್ ಮೂಡುಬಿದಿರೆ ಕೊಂಡೆ ಮನೆತನದವರು ಉಪಸ್ಥಿತರಿದ್ದರು.



0 Comments