ಇರುವೈಲು ಗ್ರಾ. ಪಂ ಕಚೇರಿಗೆ ತಡೆಬೇಲಿ !
*ಪಂಚಾಯತ್ ಕಛೇರಿಗೆ ಹೋಗಲು ಉಪಯೋಗಿಸುತ್ತಿದ್ದ ದಾರಿ ಕಾಣದಯ್ಯಾ..
ಮೂಡುಬಿದಿರೆ : ಇರುವೈಲು ಗ್ರಾ.ಪಂ. ಕಛೇರಿ ಅಂಚಿನವರೆಗೆ ಖಾಸಗಿ ಜಮೀನಿನವರು ತಮ್ಮ ಪಟ್ಟಾ ಜಾಗವೆಂದು ತಡೆಬೇಲಿ ನಿಮಿ೯ಸಿದ ಪರಿಣಾಮವಾಗಿ ಸಾವ೯ಜನಿಕರು ಪಂಚಾಯತ್ ಗೆ ಹೋಗಲು ದಾರಿ ಹುಡುಕುವ ಪರಿಸ್ಥಿತಿ ಎದುರಾಗಿದೆ.
ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ. ಪಂಚಾಯತ್ 2015 ರಲ್ಲಿ ಹೊಸಬೆಟ್ಟು ಗ್ರಾಮ ಪಂಚಾಯತ್ ದಿಂದ ಬೆರ್ಪಟ್ಟು ಹೊಸತಾಗಿ ಸೃಜನೆ ಗೊಂಡ ನಂತರ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಿರ್ವಹಿಸುತ್ತಿದ್ದು, ನಂತರ ಮೂಡುಬಿದಿರೆ ತಹಸೀಲ್ದಾರ್ ರವರು ಖುದ್ದಾಗಿ ಬಂದು ತೋರಿಸಿ ಕೊಟ್ಟ ಜಾಗದಲ್ಲಿಯೇ ಸುಸಜ್ಜಿತವಾದ ಕಛೇರಿಯನ್ನು ಕಟ್ಟಲಾಗಿದೆ. ಅಲ್ಲಿಯೇ ಅನಾದಿ ಕಾಲದಿಂದ ಸಾರ್ವಜನಿಕರು ಹೋಗಿಬರಲು ಉಪಯೋಗಿಸುತ್ತಿದ್ದ ರಸ್ತೆ ಸಂಪರ್ಕ ಇತ್ತು. ಕೊನ್ನೆಪದವಿನಲ್ಲಿ ಕಳೆದ ಮೂರು ವಷ೯ಗಳ ಹಿಂದೆ ಸ್ವಂತ ಕಟ್ಟಡದಲ್ಲಿ ಆರಂಭಗೊಂಡಿತ್ತು. ಪಂಚಾಯತ್ ನೂತನ ಕಟ್ಟಡದಲ್ಲಿ ನೆಲೆಯೂರುವ ಸಂದಭ೯ದಲ್ಲಿಯೇ ಹಲವಾರು ಸಂಕಷ್ಟಗಳನ್ನು ಎದುರಿಸಿತ್ತು ಈ ಪಂಚಾಯತ್.
ನಾವು ಬಿಡಲ್ಲ... ನಾವು ಬಿಡಲ್ಲ.. ಏನ್ಮಾಡ್ತಾರೆ ನೋಡೋಣ ಎಂಬ ರಾಜಕೀಯ ಮೇಲಾಟದೊಂದಿಗೆ ಪ್ರಾರಂಭಗೊಂಡಿರುವ ಈ ಕಿರಿ ಕಿರಿ ಇನ್ನೂ ಮುಂದುವರೆಯುತ್ತಲೇ ಇದೆ.
ಪಂಚಾಯತ್ ಕಟ್ಟಡದ ಮುಂಭಾಗದ ಜಮೀನು ಖಾಸಗಿ ವ್ಯಕ್ತಿಗಳಿಗೆ ಸೇರಿರುವುದರಿಂದ ಅವರು ಪಂಚಾಯತ್ ಗೆ ಹೋಗಿ ಬರುವವರಿಗೆ ನಡೆದುಕೊಂಡು ಹೋಗುವಷ್ಟು ಮಾತ್ರ ಜಾಗಕ್ಕೆ ಅವಕಾಶ ಕಲ್ಪಿಸಿದ್ದರು ಹೊರತು ವಾಹನಗಳಿಗೆ ಹೋಗಲು ಅನುಮತಿ ಇರಲಿಲ್ಲ ಆದರೂ ಸಾವ೯ಜನಿಕರು ಅದೇ ದಾರಿಯನ್ನು ಬಳಸಿಕೊಳ್ಳುತ್ತಿದ್ದರು ಆದರೆ ಇದ್ದಕ್ಕಿದ್ದಂತೆ ಆ ದಾರಿಗೆ ಅಡ್ಡವಾಗಿ ಕಲ್ಲುಗಳನ್ನು ಕಟ್ಟಿ ಸಾವ೯ಜನಿಕರು ಹೋಗದಂತೆ ಮಾಡಿ ವಿಜಯದ ನಗೆ ನಕ್ಕರು ಜಮೀನಿನವರು.
ಜಮೀನಿನ ಸಮಸ್ಯೆಯಿದ್ದುದರಿಂದ ಈ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಜಮೀನಿಗೆ ಸಂಬಂಧ ಪಟ್ಟವರ ಜತೆ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.
ದಾರಿಗೆ ಅಡ್ಡವಾಗಿ ಕಲ್ಲು ಕಟ್ಟಿರುವ ಜಾಗವನ್ನು ಬಿಟ್ಟು ಅಲ್ಲೇ ಪಕ್ಕದಲ್ಲಿರುವ ಇನ್ನೊಂದು ದಾರಿಯ ಮೂಲಕ ಸಾವ೯ಜನಿಕರು ಪಂಚಾಯತ್ ಗೆ ಹೋಗುವುದನ್ನು ಗಮನಿಸಿರುವ ಜಮೀನಿನ ಧಣಿಗಳು ಇದೀಗ 15 ದಿನಗಳ ಹಿಂದೆ ಪಂಚಾಯತ್ ಕಟ್ಟಡದ ಮುಂಭಾಗಕ್ಕೆ ಅಂದರೆ ಕಟ್ಟಡದ ಅಂಚಿನಲ್ಲಿಯೇ ತಂತಿಯ ಮೂಲಕ ತಡೆಬೇಲಿಯನ್ನು ನಿಮಿ೯ಸಿದ್ದರು ಅದರ ಮೂಲಕವೂ ಕೆಲವು ಜನರು ನುಸುಳಿಕೊಂಡು ಹೋಗುವುದನ್ನು ಕಂಡು ಮತ್ತೆ ಇನ್ನೊಂದು ಹಂತದಲ್ಲಿ ತಡೆಬೇಲಿಗೆ ತಂತಿಯನ್ನು ಎಳೆಯುವ ಮೂಲಕ ಯಾರೂ ನುಸುಳಿಕೊಂಡು ಹೋಗದಂತೆ ಮಾಡಿದ್ದಾರೆ.
ಬೇಲಿ ಹಾಕಿರುವ ಖಾಸಗಿ ಜಮೀನುದಾರರು ಇನ್ನೊಂದು ಕಡೆಯಲ್ಲಿ ಸುಮಾರು 30 ಎಕ್ರೆಯಷ್ಟು ಸರಕಾರಿ ಜಮೀನನ್ನು ಅತಿಕ್ರಮಿಸಿಕೊಂಡಿದ್ದರೂ ತಹಸೀಲ್ದಾರ್ ಅವರು ಈ ಬಗ್ಗೆ ಯಾಕೆ ಕ್ರಮಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪವೂ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಇಲ್ಲಿ ಯಾರದೋ ಒಂದಿಬ್ಬರ "ರಾಜಕೀಯ" ಮೇಲಾಟಕ್ಕೆ ಸಾವ೯ಜನಿಕರು ಹಾಗೂ ಪಂಚಾಯತ್ ಅಧಿಕಾರಿಗಳು ತೊಂದರೆಯನ್ನು ಅನುಭವಿಸುವಂತ್ತಾಗಿದೆ. ಈ ಜಮೀನಿನ ಧಣಿಗಳಿಂದ ಅಥವಾ ಇನ್ಯಾರೋ ದಾನಿಗಳಿಂದಾದರೂ ದಾರಿಯ ಈ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತುಕತೆಯ ಮೂಲಕ ಮನ ಒಲಿಸಿಕೊಳ್ಳುವುದು ಅನಿವಾರ್ಯವಾಗಿದೆ.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು
---------------------------------
ಇಲ್ಲಿ ಬೇಲಿ ನಿರ್ಮಿಸಿದವರು ಹಿಂದಿನ ಕಾಲದಲ್ಲಿ ಪಟೇಲರು ಆಳ್ವಿಕೆಯಲ್ಲಿದ್ದ ಮನೆತನದವರಾಗಿದ್ದು, ಅದೇ ಮನೆತನದ ಸುಂದರ ಹೆಗ್ಡೆ ಎಂಬವರು ಪಂಚಾಯತ್ ಅಸ್ತಿತ್ವಕ್ಕೆ ಬಂದ ನಂತರ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕಟ್ಟಿಸಿದ ಎಎನ್ ಎಂ ಕಟ್ಟಡ ನಿರ್ಮಾಣ ಮಾಡಿದ್ದರು. ಅದರ ಪಕ್ಕದಲ್ಲಿಯೇ ಪಂಚಾಯತ್ ಕಟ್ಟಡವನ್ನು ನಿಮಿ೯ಸಿದ್ದು ಹಾಗಾದರೆ ಎಎನ್ ಎಂ ಕಟ್ಟಡಕ್ಕೆ ದಾರಿ ಇಲ್ಲದೆಯೇ ನಿಮಿ೯ಸಿರುವುದೇ..?
ಅಲ್ಲದೆ ಪಕ್ಕದಲ್ಲಿಯೇ ರಾಜೀವ್ ಗಾಂಧಿ ಕುಡಿಯುವ ನೀರಿನ ಸಿಸ್ಟೆರ್ನ್ ಕೂಡಾ ರಚಿಸಲಾಗಿತ್ತು ಆದರೆ ದಾರಿ ಎಲ್ಲಿ ಮಾಯಾವಾಯಿತು ಎಂಬ ಪ್ರಶ್ನೆ ಉಂಟಾಗುತ್ತಿದೆ.
--------------------
0 Comments