ಮೂಡುಬಿದಿರೆ ಶ್ರೀಗಳ ಪಟ್ಟಾಭಿಷೇಕ ವರ್ಧಂತ್ಯುತ್ಸವ : ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಮೂಡುಬಿದಿರೆ : ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭಟ್ಟಾರಕ ಆಚಾರ್ಯ 108 ಗುಲಾಬ್ ಭೂಷಣ ಮುನಿ ಹಾಗೂ ಮೂಡುಬಿದಿರೆ ಶ್ರೀಗಳು ಚಾಲನೆ ನೀಡಿದರು.
ಧರ್ಮಸಂದೇಶ ನೀಡಿದ ಭಟ್ಟಾರಕ ಶ್ರೀಗಳು, ಜೈನಕಾಶಿಯಾಗಿರುವ ಮೂಡುಬಿದಿರೆಯು ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರವಾಸಿ ತಾಣವಾಗಿ ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾತ್ರಿಗಳನ್ನು ಸೆಳೆಯುತ್ತಿದೆ. ಇಂದಿನ ಅಗತ್ಯತೆಗೆ ಪೂರಕವಾಗಿ ಜೈನಮಠ ಹಾಗೂ ಬಸದಿಗಳ ಅಭಿವೃದ್ಧಿಗೆ ಹಲವಾರು ಯೋಜನೆಯನ್ನು ಹಮ್ಮಿಕೊಂಡಿದ್ದು, ಭಕ್ತರು ಈ ಪುಣ್ಯ ಕೆಲಸದಲ್ಲಿ ಕೈಜೋಡಿಸಬೇಕೆಂದರು.
ಸುಮಾರು 5 ಕೋಟಿ ವೆಚ್ಚದಲ್ಲಿ ಜೈನಮಠದ ಜೀರ್ಣೊದ್ಧಾರ ಹಾಗೂ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ 400ರಷ್ಟು ಪ್ರಾಚೀನ ತಾಡ ಓಲೆಗಳನ್ನು ಡಿಜಿಟಲೀಕರಣಗೊಳಿಸುವ ಅಭಿವೃದ್ಧಿ ಕಾರ್ಯಕ್ಕೆ ಆಚಾಯ೯ 108 ಗುಲಾಬ್ ಭೂಷಣ್ ಮಹಾರಾಜರು ಚಾಲನೆ ನೀಡಿದರು.
ಜೈನ ಧರ್ಮದ ಕುರಿತ ಮೂರು ಗ್ರಂಥಗಳನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆದರ್ಶ್ ಅರಮನೆ, ಪ್ರಮುಖರಾದ ಶೈಲೇಂದ್ರ ಕುಮಾರ್, ಬಾಹುಬಲಿ ಪ್ರಸಾದ್, ಸಂಪತ್ ಸಾಮ್ರಾಜ್ಯ, ಸುಧೀಶ್, ಗುಣಪಾಲ ಕಡಂಬ ಉಪಸ್ಥಿತರಿದ್ದರು.
---------------------
ಚಲನಚಿತ್ರ ನಟಿ ರವೀನಾ ಟಂಡನ್ ಪುತ್ರಿ ದಶಾ ತದಾನಿ ಪೇಟಾ ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಪೇಟಾ ಸಂಸ್ಥೆಯು ಜೈನಮಠಕ್ಕೆ ನೀಡಿದ್ದು, ಈ ಆನೆಯನ್ನು ಮುನಿಗಳು ಹಾಗೂ ಭಟ್ಟಾರಕಶ್ರೀಗಳು ಲೋಕಾರ್ಪಣೆಗೊಳಿಸಿದರು. ಪೇಟಾ ಸಂಸ್ಥೆಯ ಅಧಿಕಾರಿ ಅರುಣ್ ಕುಮಾರ್, ಸುಪ್ರಿಯಾ ಸಹಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
--------------====-------
0 Comments