ರತ್ನ ಸಂಜೀವ ಕಲಾಮಂಡಲದ ಉಚಿತ ಕಲಾಸೇವೆಯನ್ನು ಸಮಾಜ ಬಳಸಿಕೊಳ್ಳಲಿ:ಗುರುವಂದನಾ ಕಾರ್ಯಕ್ರಮದಲ್ಲಿ ವಾಗ್ಮಿ ದಾಮೋದರ ಶರ್ಮಾ ಕರೆ
ಸಮಾಜ ಸೇವೆ, ಕಲಾ ಸೇವೆ, ರಾಜಕಾರಣದ ಜೊತೆ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸೂರು ನಿರ್ಮಿಸುವ ಕಾರ್ಯ ಸಾಧಿಸಿರುವುದು ಸಾಕ್ಷಾತ್ ಶಿವನ ಪ್ರೇರಣೆಯಿಂದಲೇ ಆಗಿದೆ. ಹೀಗಾಗಿ ಈ ತಂಡಕ್ಕೆ ಶಿವ ಪ್ರೇರಣ ಚಾರಿಟೇಬಲ್ ಟ್ರಸ್ಟ್ ಎಂಬ ಹೆಸರು ಅರ್ಥಗರ್ಭಿತವಾಗಿದೆ. ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ರತ್ನ ಸಂಜೀವ ಕಲಾಮಂಡಲವು ಅನೇಕ ಕಲಾಪ್ರಕಾರಗಳನ್ನು ಉಚಿತವಾಗಿ ಕಲಿಸಿಕೊಡುತ್ತಿದ್ದು ಇದರ ಉಪಯೋಗವನ್ನು ಸಮಾಜ ಬಳಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ದಾಮೋದರ್ ಶರ್ಮಾ ಹೇಳಿದರು.
ಉಡುಪಿ ಮಣಿಪಾಲದ ಸರಳೇಬೆಟ್ಟಿನಲ್ಲಿರುವ ರತ್ನ ಸಂಜೀವ ಕಲಾಮಂಡಲದಲ್ಲಿ ನಡೆದ ವಿವಿಧ ಕಲಾ ಸೇವೆಯ ತರಬೇತುದಾರರಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಿ ಅವರು ಮಾತನಾಡಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಕಿರಣ್ ಹೆಬ್ಬಾರ್ ರವರು ದೇಶದ ಆಧ್ಯಾತ್ಮಿಕ ಶಕ್ತಿಗೆ ಕಲಾ ಸೇವೆಯ ಮಹತ್ವದ ಮಹತ್ವದ ಬಗ್ಗೆ ತಿಳಿಸಿದರು. ಭಾರತವು ವೇದ ಉಪನಿಷತ್ತುಗಳನ್ನು ಜಗತ್ತಿಗೆ ನೀಡಿರುವುದರಿಂದ ಭಾರತವು ಸಹಜವಾಗಿಯೇ ವಿಶ್ವಗುರುವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್(ರಿ.) ಇದರ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರು ಮಾತನಾಡಿ ರತ್ನ ಸಂಜೀವ ಕಲಾಮಂಡಲ ನಡೆದು ಬಂದ ಹಾದಿ, ಸಾಧನೆ ಹಾಗೂ ವಿವಿಧ ಕಲಾ ಪ್ರಕಾರಗಳ ಸೇವೆಯ ಬಗ್ಗೆ ವಿವರಿಸಿ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಗೀತ ಪರೀಕ್ಷೆಯಲ್ಲಿ ಉನ್ನತ ದರ್ಜೆ ಹಾಗೂ ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ ಸಂಗೀತ ವಿದ್ಯಾರ್ಥಿಗಳನ್ನು ಅಂಕಪಟ್ಟಿ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ಗುರುಗಳಾದ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ಟ್ರಸ್ಟಿ ಶ್ರೀಮತಿ ಅಶ್ವಿನಿ ಮಹೇಶ್ ಠಾಕೂರ್, ಸಂಗೀತ ಗುರು ಉಷಾ ಹೆಬ್ಬಾರ್, ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ರಮಾನಂದ ಸಾಮಂತ್, ಚಿತ್ರಕಲೆ ಶಿಕ್ಷಕಿ ಸುಮತಿ ಎ.ಕಾಮತ್,ಹಾರ್ಮೋನಿಯಂ ಶಿಕ್ಷಕ ನಿತ್ಯಾನಂದ ನಾಯಕ್, ತಬಲಾ ಶಿಕ್ಷಕ ನಾಗರಾಜ್ ಖಾರ್ವಿ, ಭಗವದ್ಗೀತೆ ಪ್ರವಚನ ನೀಡುವ ರಾಸ ರಸಿಕ ದಾಸ್, ಅನುಪ್ ಕರ್ಜೆ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು. ಜ್ಯೋತಿ ವಿಷ್ಣುದಾಸ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.
0 Comments