ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಿದೆ ` ಅಗತ್ಯ ಚಿಕಿತ್ಸೆ'
* ಸಿಬಂದಿಗಳ ಕೊರತೆ, ಕಟ್ಟಡದೊಳಗೆ ಗುಜರಿ ಶೇಖರಣೆ
ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ಹಂತಹಂತವಾಗಿ ಅಭಿವೃದ್ಧಿಯನ್ನು ಕಾಣುತ್ತಿದ್ದರೂ ಇಲ್ಲಿನ ಪ್ರಮುಖ ಜಾಗದಲ್ಲಿರುವ ಹಳೆ ಕಟ್ಟಡವು ಗುಜರಿ ಶೇಖರಣೆಯ ಕೊಠಡಿಯಾಗಿ ಪರಿವರ್ತನೆಗೊಂಡಿರುವುದು ಬೇಸರದ ಸಂಗತಿ.
ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿರುವ ಈ ಕಟ್ಪಡವು ಹಿಂದೆ ಪುರುಷರ ವಾರ್ಡ್ ಆಗಿದ್ದು ಆ ಬಳಿಕ 108 ಸಿಬ್ಬಂದಿಗಳ ವಿಶ್ರಾಂತಿ ಕೊಠಡಿಯಾಗಿತ್ತು. ಕೋವಿಡ್ ಸಂದರ್ಭದಲ್ಲಿ ಇಲ್ಲಿ ಕೋವಿಡ್ ತಪಾಸಣೆಯೂ ನಡೆಯುತ್ತಿತ್ತು. ಆದರೆ ಇದೀಗ ಅದರ ಒಳಗೆ ಕಾಲು ಮುರಿದ ಬೆಡ್-ಕುರ್ಚಿ ಹಾಗೂ ಇತರ ಗುಜರಿ ವಸ್ತುಗಳನ್ನು ಶೇಖರಣೆ ಮಾಡಿ ಇಡಲಾಗುತ್ತಿದ್ದು ಪ್ರಸ್ತುತ ಗುಜರಿ ಶೇಖರೆಣೆ ಕೊಠಡಿಯಾಗಿ ಪರಿವರ್ತನೆಗೊಂಡಿದೆಯಲ್ಲದೆಒಳಗೆಲ್ಲ ಧೂಳು ತುಂಬಿಕೊಂಡಿದೆ.
ಜಗಲಿಯು ನಾಯಿಗಳ ವಿಶ್ರಾಂತಿ ಸ್ಥಳವಾಗಿದೆ. ಜೈನಮಿಲನ್ ಸಂಘಟನೆಯವರು ಕೊಡುಗೆಯಾಗಿ ಈ ಹಿಂದೆ ನೀಡಿದ್ದ ಕುಡಿಯುವ ನೀರಿನ ಘಟಕ ನಾದುರಸ್ತಿಯಲ್ಲಿದ್ದು, ಮೂಲೆಯಲ್ಲಿ ಧೂಳು ತುಂಬಿಕೊಂಡು ನಿಂತಿದೆ.
ಈ ಕಟ್ಟಡವನ್ನು ದುರಸ್ಥಿಗೊಳಿಸಿ, ಸ್ವಲ್ಪ ಸುಣ್ಣ ಬಣ್ಣ ಬಳಿದರೆ ಯಾವುದಾದರೊಂದು ವ್ಯವಸ್ಥೆಗೆ ಬಳಸಿಕೊಳ್ಳಬಹುದಾಗಿದೆ.
ವಿಶ್ರಾಂತಿ ಕಟ್ಟಡದ ಒಂದು ಬದಿ, ಅದರ ಹಿಂಬದಿಯಲ್ಲಿ ಮಳೆ ನೀರು ಶೇಖರೆಣೆಯಾಗಿದೆ. ಪೈಪ್‌ಲೈನ್ ಲಿಕೇಜ್‌ನಿಂದಾಗಿಯೂ ನೀರು ತುಂಬಿಕೊಂಡಿದ್ದು, ಸೊಳ್ಳೆ ಉತ್ಪಾದನೆಯ ಸ್ಥಳವಾಗಿ ಪರಿವರ್ತನೆಯಾಗಿದೆ. ನೀರಿನ ಮೇಲೆ ಕಸಕಡ್ಡಿಗಳು ಶೇಖರೆಯಾಗಿದ್ದು ವಾಸನೆ ಬರುತ್ತಿದೆ.
ಆರೋಗ್ಯ ಕೇಂದ್ರದ ಸುತ್ತ, ಬಾವಿಯ ಮೇಲೆ ಹುಲ್ಲುಗಳು ಎತ್ತರವಾಗಿ ಬೆಳೆದಿದ್ದು ವಿಷ ಜಂತುಗಳಿಗೆ ಆಶ್ರಯ ನೀಡುವ ತಾಣವಾಗಿದೆ.
ತಾಲೂಕು ಕೇಂದ್ರವಾಗಿ ಮೂಡುಬಿದಿರೆ ರಚನೆಯಾದ ಬಳಿಕ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆನ್ನುವ ಜನರ ಬೇಡಿಕೆಗಳು, ಜನಪ್ರತಿನಿಧಿಗಳು ನೀಡುವ ಭರವಸೆಗಳು ಹೆಚ್ಚಾಗುತ್ತಿದ್ದರೂ, ಮತ್ತೊಂದೆಡೆಯಲ್ಲಿ ಪೂಣ೯ ಕಾಲಿಕ ವೈದ್ಯರ, ಸಿಬಂಧಿಗಳ ಕೊರತೆ, ಆಸ್ಪತ್ರೆಯ ಆವರಣದಲ್ಲಿ ಅಶುಚಿತ್ವ, ಅವ್ಯವಸ್ಥೆಗಳಿಂದ ಆಸ್ಪತ್ರೆಗೆ ರೋಗಿಗಳು ತೊಂದರೆಯನ್ನು ಅನುಭವಿಸುವಂತ್ತಾಗಿದೆ.
-------------------
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೇವಲ ಮೂಡುಬಿದಿರೆ ತಾಲೂಕಿನ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳು ಬರುತ್ತಾರೆ. ಇಲ್ಲಿ ಹೆಚ್ಚಿನ ಯಾವುದೇ ಸೌಲಭ್ಯ ಇಲ್ಲ. ವೈದ್ಯರು, ಸಿಬಂದಿ ಕೊರತೆಯೂ ಕಾಡುತ್ತಿದೆ. ಆವರಣ ಕೂಡ ಸುಸ್ಥಿತಿಯಲಿಲ್ಲ. ಇದನ್ನೆಲ್ಲ ಮನಗಂಡು ಇಲ್ಲಿನ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ಕೇಂದ್ರವನ್ನು ಸೂಕ್ತ ರೀತಿಯಲ್ಲಿ ಮೇಲ್ದರ್ಜೆಗೇರಿಸಬೇಕು.
- ರಾಘವೇಂದ್ರ ಶೆಟ್ಟಿ, ಮೂಡುಬಿದಿರೆ ನಿವಾಸಿ
---
0 Comments