ತಲೆಮರೆಸಿಕೊಂಡಿದ್ದ ಆರೋಪಿಯನ್ನು 26 ವಷ೯ಗಳ ನಂತರ ಬಂಧಿಸಿದ ಪೊಲೀಸರು
ಮೂಡುಬಿದಿರೆ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಮನೆಯ ರಿಚಾರ್ಡ್ ನೊರೊನ್ಹ ಎಂಬ ಆರೋಪಿಯನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
1999 ರಲ್ಲಿ ಮಾಣಿಲ ಮನೆಯಲ್ಲಿ ನಡೆದ ಹಲ್ಲೆ ಹಾಗೂ ಕೊಲೆ ಬೆದರಿಕೆಗೆ ಸಂಬಂಧಿಸಿ ತೆರೆಸಾ ಸಿಕ್ವೇರಾ ಅವರು ರಿಚಾರ್ಡ್ ಸಹಿತ ನಾಲ್ಕು ಮಂದಿಯ ವಿರುದ್ಧ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪೈಕಿ ರಿಚಾರ್ಡ್ ಅವರು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಎಲ್.ಪಿ.ಸಿ.ಪ್ರಕರಣವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಠಾಣಾ ಸಿಬ್ಬಂದಿಗಳನ್ನು ಪತ್ತೆ ಕಾರ್ಯಕ್ಕೆ ನೇಮಿಸಿ ಕಳುಹಿಸಿದ್ದರು.ಆರೋಪಿ ಪ್ರಸ್ತುತ ಉಜಿರೆ ಅನುಗ್ರಹ ಶಾಲೆಯ ಬಳಿ ಕೆಲಸ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಡುಬಿದಿರೆ ಠಾಣಾ ಸಿಬ್ಬಂದಿಗಳಾದ ರಾಜೇಶ್,ನಾಗರಾಜ್ ಮತ್ತು ಮುಹಮ್ಮದ್ ಇಕ್ಬಾಲ್ ಅವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
0 Comments