ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025' ‘ ಮಹಿಳೆ - ದೇಶದ ಅಭೂತಪೂರ್ವ ಶಕ್ತಿ'

ಜಾಹೀರಾತು/Advertisment
ಜಾಹೀರಾತು/Advertisment

 ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025'

‘ ಮಹಿಳೆ - ದೇಶದ ಅಭೂತಪೂರ್ವ ಶಕ್ತಿ'

ಮೂಡುಬಿದಿರೆ : ‘ಮಹಿಳೆ ಇಲ್ಲದೇ ಪ್ರಕೃತಿ ಇಲ್ಲ. ‘ಶಕ್ತಿ’ ಇಲ್ಲದೆ ಶಿವನೂ ನಿಶ್ಶಕ್ತ. ಶೋಷಣೆ ಮೆಟ್ಟಿ ನಿಲ್ಲುವವಳೇ ನಿಜವಾದ ‘ಹೆಣ್ಣು’. ಹೆಣ್ಣಿಗೆ ವಿದ್ಯೆಯೇ ಸೌಂದರ್ಯ, ತೇಜಸ್ಸು’ ಎಂದು ಹಿರಿಯ ರಂಗಕರ್ಮಿ, ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ಗಿರಿಜಾ ಲೋಕೇಶ್ ಹೇಳಿದರು.


ಅವರು ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿಸಿರಿ) ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ ಸ್ಮರಣೆಯಲ್ಲಿ ಆಯೋಜಿಸಿದ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2025’ ಅನ್ನು ಉದ್ಘಾಟಿಸಿ ಮಾತನಾಡಿದರು.


‘ಮಹಿಳೆ ಇಲ್ಲದೇ ಪ್ರಕೃತಿಯೇ ಇಲ್ಲ. ಆದರೆ ಹಿಂದೆ ಪುರುಷನೂ ಬೇಕು ಎಂಬುದು ಗುಟ್ಟು’ ಎಂದು ನಸುನಕ್ಕ ಅವರು, ‘ವಿದ್ಯೆ- ವಿನಯ ಇಲ್ಲದವರಿಗೆ ಮೇಕಪ್ ಹೆಚ್ಚು ಬೇಕು’ ಎಂದು ಚಟಾಕಿ ಹಾರಿಸಿದರು.


‘ಅಮ್ಮ ಹೊಡೆದು ತಿದ್ದಿ ತೀಡಿದಾಗ ಗೊತ್ತಾಗಲಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇನೆ. ಅಮ್ಮನ ಋಣ ಹೇಗೆ ತೀರಿಸಲಿ’ ಎಂದು ಭಾವುಕರಾದರು. ‘ಆಳ್ವಾಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಬಹುದಿನದ ಕನಸು. ಕರೆದುದಕ್ಕೆ ಧನ್ಯವಾದ ಎಂದು ಗ್ರೀಷ್ಮಾ ಆಳ್ವ ಅವರಿಗೆ ಹೇಳಿದರು.


‘ಆಳ್ವಾಸ್ ಆವರಣದ ಶಿಸ್ತು ಮತ್ತು ನೈರ್ಮಲ್ಯ ದೇಶಕ್ಕೆ ಮಾದರಿ. ಹೀಗಾಗಿ ಇಲ್ಲಿ ಕಲಿತರೆ ದೇಶದ ಉತ್ತಮ ಪ್ರಜೆ ಆಗುವ ಅವಕಾಶ ಮಕ್ಕಳಿಗೆ ಲಭಿಸುತ್ತದೆ. ಆಳ್ವಾಸ್ ನಲ್ಲಿ ಓದುವುದು ದೊಡ್ಡ ಹೆಮ್ಮೆ’ ಎಂದ ಅವರು, ‘ಡಾ. ಮೋಹನ ಆಳ್ವರಿಗೂ ನಮಗೂ 50 ವರ್ಷಗಳ ನಂಟು.  ಅವರ ಸಾಮಾಜಿಕ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.

‘ನೀವು ಗ್ರಾಮೀಣ ಮಹಿಳೆ ಸುಕ್ರಿ ಬೊಮ್ಮನಗೌಡ ಅವರಿಗೆ ನೀಡಿದ ಗೌರವ ಶ್ಲಾಘನೀಯ. ಇಂದಿನ ‘ಸಿ’ ಶಸ್ತ್ರಚಿಕಿತ್ಸೆ ಹೆರಿಗೆಯ ನಡುವೆ ಸೂಲಗಿತ್ತಿಯರು ಅಂದು ನಿರ್ವಹಿಸಿದ ಪಾತ್ರ ಬಹುಮುಖ್ಯ. ಅದೇ ರೀತಿ ಸಾಲುಮರ ತಿಮ್ಮಕ್ಕ ಅವರ ಸಾಧನೆ’ ಎಂದು ಕೊಂಡಾಡಿದರು. ‘ನಾಳೆ ಎಲ್ಲ ನಮ್ಮದೂ’ ಎಂದು ವಿದ್ಯಾರ್ಥಿಗಳಿಗೆ ಹಾಡುವ ಮೂಲಕ ಮಹಿಳಾ ದಿನಾಚರಣೆಯ ಶುಭ ಕೋರಿದರು.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ ,ಪುರುಷರಲ್ಲಿ ಸೌಂದರ್ಯ ಪ್ರಜ್ಞೆಯ ಗುಣವನ್ನು ಬಿತ್ತಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಮಹಿಳೆಯು ವಿಭಿನ್ನ ಮತ್ತು ಜವಾಬ್ದಾರಿಯುತ ಪಾತ್ರದ ಮೂಲಕ ಪುರುಷರ ಬದುಕಿನಲ್ಲಿ ಪ್ರಜ್ಞೆ ಮತ್ತು ಶಕ್ತಿಯನ್ನು ಮೂಡಿಸುವಲ್ಲಿ ಕಾರಣಿಕರ್ತೆಯಾಗಿದ್ದಾಳೆ.  

ಸಮಾಜದಲ್ಲಿ ಹೆಣ್ಣಿಂದು ಅನೇಕ ರೀತಿಯ ಪಾತ್ರಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾಳೆ. ಪ್ರಸ್ತುತ ಕಾಲಮಾನದಲ್ಲಿ  ಮಹಿಳೆ- ನರ್ಸ್, ಆಶಾ ಕಾರ್ಯಕರ್ತೆ, ಅಧ್ಯಾಪನಾ ವೃತ್ತಿ, ಪೊಲೀಸ್, ಪೈಲೆಟ್, ಲೋಕೋ ಪೈಲೆಟ್, ಉದ್ಯಮ ಕ್ಷೇತ್ರ , ಕ್ರೀಡೆ, ರಾಜಕೀಯ, ಸರ್ಕಾರೇತರ ಉದ್ಯೋಗ, ವಕೀಲಿ ವೃತ್ತಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತನ್ನನ್ನು ತಾನು ಪುರುಷನಿಗೆ ಸಮಾನಳಾಗಿ ಸ್ಫರ್ಧೆ ನೀಡುತ್ತಾ ಬಂದಿದ್ದಾಳೆ.   


ಪುರುಷ ಪ್ರದಾನ ಸಮಾಜದಲ್ಲಿ ಹಿಂದೆ ಸ್ಥಳೀಯ ಜನಪದ ಕಲೆಗಳಾದ ಕಂಬಳ, ಹುಲಿವೇಷ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಥಾನವಿರಲಿಲ್ಲ. ಆದರೆ, ಇಂದು ಮಹಿಳೆ ಹಂತ ಹಂತವಾಗಿ ಪುರುಷನ ಸಮಾನಕ್ಕೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.


ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರುಕಿ ಮಾತನಾಡಿ,  ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ  ಸಂಸ್ಕೃತಿಯನ್ನು ಪರಿಪಾಲಿಸುವುದು ಪ್ರಸ್ತುತತೆಗೆ ಹೆಚ್ಚು ಅಗತ್ಯವಿದೆ. ಮಾಡುವ ಎಲ್ಲಾ ಒಳ್ಳೆಯ ಕಾರ್ಯದಲ್ಲಿ ಆತ್ಮ ವಿಶ್ವಾಸ , ಧೈರ್ಯ ಮತ್ತು ಪರಿಶ್ರಮವಹಿಸುವ ಮನಸ್ಥಿತಿ ಇದ್ದಾಗ ಗುರಿಯನ್ನು ಸಾಧಿಸಲು ಸಾಧ್ಯ ಎಂದರು.  ದೇಶದ ಮಹಿಳೆ ವಿದ್ಯಾವಂತಳಾದರೆ ಶಿಶು ಮರಣವನ್ನು  ಗಣನೀಯವಾಗಿ ತಡೆಯಲು ಸಾಧ್ಯ ಎಂದು ತಿಳಿಸಿದ ಯುನೆಸ್ಕೋ ಸಂಸ್ಥೆ ವರದಿಯನ್ನು ಉಲ್ಲೇಶಿಸಿದರು.


ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಮೂವರು ಸಾಧಕಿಯರನ್ನು  ಮಹಿಳಾ ದಿನಾಚರಣೆಯ ಅಂಗವಾಗಿ ಗೌರವಿಸಲಾಯಿತು. ಮಹಿಳಾ ಉದ್ಯಮಿ ಮತ್ತು ಇವೊಲ್ವ್ ಸಂಸ್ಥೆಯ ಅಧ್ಯಕ್ಷೆ ದಿವ್ಯಾ ಡಿ’ಸೋಜಾ, ರಾಷ್ಟ್ರೀಯ ಚಿಂತಕಿ ಮಾತಾ ಮೀನಾಕ್ಷಿ, ಭತ್ತದ ತಳಿಯನ್ನು ಸಂಗ್ರಹಿಸಿ ಪೋಷಿಸುವ ಸಾಣೂರಿನ ಸಾಧಕಿ ಬಾಲಕಿ ಮರಿಯಂ ಅಫ್ನಾ  ಅವರನ್ನು ಗೌರವಿಸಲಾಯಿತು. ಗಿರಿಜಾ ಲೋಕೇಶ್‌ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಸ್-ವ್ಯಾಸ ಪರಿಗಣಿತ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಡೀನ್, ಪ್ರೊ ಕರುಣಾ ವಿಜಯೇಂದ್ರ, ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್(ಸಿಎಫ್‌ಎಎಲ್)ನ ಸಂಶೋಧನಾ ನಿರ್ದೇಶಕಿ ಪ್ರೊ ಸ್ಮಿತಾ ಹೆಗ್ಡೆ,ಆಳ್ವ ಫಾರ್ಮಸಿಯ ಆಡಳಿತ ನಿರ್ವಾಹಕಿ ಡಾ ಗ್ರೀಷ್ಮಾ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ ಇದ್ದರು. ಬಂಟ್ಸ್ ಅಸೋಸಿಯೇಶನ್‌ನ ಸದಸ್ಯರು, ಸಂಸ್ಥೆಯ ಹಿತೈಷಿಗಳು, ಸಕ್ಷಮದ ಪದಾಧಿಕಾರಿಗಳು,  ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕರ‍್ಯಕ್ರಮದಲ್ಲಿ ಪಾಲ್ಗೊಂಡರು.  

ಕಾರ್ಯಕ್ರಮವನ್ನು ಆಳ್ವಾಸ್ ಪ.ಪೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ನಿರೂಪಿಸಿದರು. ಸಕ್ಷಮ ವುಮೆನ್ಸ್ ಅಸೋಸಿಯೇಷನ್ ಅಧ್ಯಕ್ಷೆ ಮೂಕಾಂಬಿಕಾ ಸ್ವಾಗತಿಸಿದರು. ಆಳ್ವಾಸ್ ಪ. ಪೂ ಕಾಲೇಜಿನ  ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ರುಚಿಕಾ  ವಂದಿಸಿದರು.

ತದ ನಂತರ, ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಸಂಸ್ಥೆಯ ಮಹಿಳಾ ಸಿಬ್ಬಂದಿ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಈ ಕರ‍್ಯಕ್ರಮವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ  ಪ್ರಾಚರ‍್ಯ ಸದಾಕತ್, ಆಳ್ವಾಸ್ ಸಹಕಾರ ಬ್ಯಾಂಕ್‌ನ ಮುಖ್ಯ ಪ್ರಬಂಧಕಿ  ಅರ್ಪಿತಾ ಶೆಟ್ಟಿ ನರವೇರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರನ್ನು  “ಲಕ್ಕಿ ಸ್ಟಾರ್” ಎಂದು ಗುರುತಿಸಿ ಈ ವರ್ಷದ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಪದವಿಪೂರ್ವ ಕಾಲೇಜಿನ ಅಧ್ಯಾಪಕವೃಂದದಿಂದ ಸೆಮಿಕ್ಲಾಸಿಕಲ್ ನೃತ್ಯ ಪ್ರದರ್ಶನಗೊಂಡಿತು. ನಂತರ ಝುಂಬಾ ಟ್ರೈನರ್ ನಿತೇಶ್ ಕುಲಾಲ್‌ರಿಂದ ನಡೆದ ಝುಂಬಾ ಡ್ಯಾನ್ಸ್ ಸಭಿಕರನ್ನು ಸಂಗೀತಕ್ಕೆ ಅನುಗುಣವಾಗಿ ನೃತ್ಯ ಮಾಡಲು ಹುರಿದುಂಬಿಸಿತು.  ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಡಾ ನಮೃತಾ ಕುಲಾಲ್ ನಡೆಸಿಕೊಟ್ಟರು.

 ಆರಂಭದಲ್ಲಿ ಅತಿಥಿಗಳನ್ನು ಸಾಂಸ್ಕೃತಿಕ ಕಲಾತಂಡಗಳು, ಸಾಧಕಿಯರ ವೇಷಭೂಷಣಧಾರಿ ಮಕ್ಕಳು ಸೇರಿದಂತೆ ವಿಜೃಂಭಣೆಯಿಂದ ವೇದಿಕೆಗೆ ಕರೆದು ಕೊಂಡು ಬರಲಾಯಿತು.

Post a Comment

0 Comments