ಬೈಕ್ ಗೆ ಕಾರ್ ಢಿಕ್ಕಿ : ದ್ವಿಚಕ್ರ ಸವಾರ ಮೃತ್ಯು
ಮೂಡುಬಿದಿರೆ : ತಮ್ಮ ಬೈಕ್ ನಲ್ಲಿ ಮದುವೆ ಕಾಯ೯ಕ್ರಮಕ್ಕೆ ಹೋಗುತ್ತಿದ್ದವರಿಗೆ ವೇಗನರ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ತೋಡಾರಿನಲ್ಲಿ ನಡೆದಿದೆ.
ಸಿದ್ಧಕಟ್ಟೆ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮೋಹನ್ ಗೌಡ (45ವ) ಮೃತಪಟ್ಟ ವ್ಯಕ್ತಿ. ಸಹ ಸವಾರ ನಾರಾಯಣ ಗೌಡ ಸಣ್ಣ ಪುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿದ್ಧಕಟ್ಟೆಯ ನಿವಾಸಿಗಳಾದ ಮೋಹನ್ ಗೌಡ ಮತ್ತು ಸಹ ಸವಾರ ನಾರಾಯಣ ಗೌಡ ಒಂದು ಬೈಕಿನಲ್ಲಿ ಹಾಗೂ ಇನ್ನೊಂದು ಬೈಕ್ ನಲ್ಲಿ ಯಶೋಧರ ಗೌಡ ಎಂಬವರು ಮೂಡುಬಿದಿರೆಯಲ್ಲಿ ನಡೆಯುತ್ತಿದ್ದ ಮದುವೆ ಕಾಯ೯ಕ್ರಮವನ್ನು ಮುಗಿಸಿ ಮಿಜಾರು ಧೂಮಚಡವಿನಲ್ಲಿ ನಡೆಯುತ್ತಿದ್ದ ಇನ್ನೊಂದು ಮದುವೆ ಕಾಯ೯ಕ್ರಮಕ್ಕೆ ಹೊರಟಿದ್ದರು.
ತೋಡಾರು ಮೈಟ್ ಕಾಲೇಜು ಬಳಿ ಹೋಗುತ್ತಿದ್ದ ಸಂದಭ೯ ಮಂಗಳೂರಿನಿಂದ ಮೂಡುಬಿದಿರೆ ಕಡೆಗ ಬರುತ್ತಿದ್ದ ಪಾಲಡ್ಕದ ನಿವಾಸಿ, ಮೂರನೇ ವಷ೯ದ ಎಂಜಿನಿಯರಿಂಗ್ ವಿದ್ಯಾರ್ಥಿ ಏರನ್ ಮಥಾಯಸ್ ಎಂಬವರ ವೇಗನರ್ ಕಾರು ರಸ್ತೆಯ ಬಲಭಾಗಕ್ಕೆ ವೇಗವಾಗಿ ಬಂದು ಬೈಕ್ ಗೆ ಢಿಕ್ಕಿ ಹೊಡೆದಿದ್ದು ಈ ಸಂದರ್ಭ ಮೋಹನ್ ಗೌಡ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದು ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments