ಮೂಡುಬಿದಿರೆಯಲ್ಲಿ ನಡೆಯುತ್ತಿದೆ ಮಟ್ಕಾ ದಂಧೆ: ಕ್ರಮಕ್ಕಾಗಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಗ್ರಹ
ಮೂಡುಬಿದಿರೆ ತಾಲೂಕು ವ್ಯಾಪ್ತಿ ಸಹಿತ ಸಮೀಪದ ಕಾರ್ಕಳ ತಾಲೂಕು ವ್ಯಾಪ್ತಿಯ ಸಚ್ಚರಿಪೇಟೆಯ ವಿವಿಧ ಕಡೆಗಳಲ್ಲಿ ಮಟ್ಕಾ ದಂಧೆಯು ಎಗ್ಗಿಲ್ಲದೆ ನಡೆಯುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪುರಸಭಾ ಸದಸ್ಯರು ಪೊಲೀಸರಲ್ಲಿ ಆಗ್ರಹಿಸಿದ ಘಟನೆ ನಡೆದಿದೆ.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯ ರಾಜೇಶ್ ನೈಕ್ ಅವರು ಈ ಬಗ್ಗೆ ಮಾತನಾಡಿ ಮೂಡುಬಿದಿರೆ ಪೇಟೆಯಲ್ಲಿ, ಶಿರ್ತಾಡಿ, ಸಹಿತ ಇತರ ಕಡೆಗಳಲ್ಲಿ ಆಫೀಸ್ ಮಾಡಿಕೊಂಡು ಮಟ್ಕಾ ದಂಧೆ ನಡೆಯುತ್ತಿದೆ ಈ ದಂಧೆಯಿಂದಾಗಿ ಈಗಾಗಲೇ ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆಂದು ಮಾತನಾಡಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ಸಿದ್ಧಪ್ಪ ನರನೂರ ಅವರ ಗಮನಕ್ಕೆ ತಂದರು ಇದಕ್ಕೆ ಉಳಿದ ಸದಸ್ಯರೂ ಧ್ವನಿಗೂಡಿಸಿದರು.
ಎಲ್ಲೆಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ಲೊಕೇಷನ್ ಕಳುಹಿಸಿದರೆ ತಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆಂದು ಸಿದ್ಧಪ್ಪ ಅವರು ಭರವಸೆ ನೀಡಿದರು.
ಪ್ರಾಂತ್ಯ ಬಳಿ 14 ವರ್ಷದ ಮಕ್ಕಳು ಅಪಾಯಕಾರಿ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದಾರೆ ಈ ಬಗ್ಗೆ ಕೈಗೊಳ್ಳುವಂತೆ ಸದಸ್ಯ ಇಕ್ಬಾಲ್ ಕರೀಂ, ಲೈಸನ್ಸ್ ಇಲ್ಲದವರೂ ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ ಅವರಿಗೂ ಕ್ರಮಕೈಗೊಳ್ಳುವಂತೆ ರಾಜೇಶ್ ನಾಯ್ಕ್,
ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಇನ್ನೂ ಸರಿಯಾಗಿಲ್ಲ, ಕೆಲವು ಬಾರಿ ಈ ಬಗ್ಗೆ ಮೀಟಿಂಗ್ ನಡೆಸಿದರೂ ಪ್ರಯೋಜನವಾಗಿಲ್ಲ,ಪುರಸಭಾ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ, ಪುರಸಭೆಗೆ ಲಾಭ ಮಾಡಿ ಕೊಡುವ ಅಂಗಡಿ ವ್ಯಾಪಾರಸ್ಥರಿಗೆ ಅನ್ಯಾಯವಾದರೆ ಹೇಗೆ? ಎಂದು ಸದಸ್ಯೆ ಶ್ವೇತಾ ಜೈನ್ ಅವರು ಸಭೆಯಲ್ಲಿ ಗಮನಕ್ಕೆ ತಂದರು.
ಶಾಲಾ ಬಳಿಗಳಲ್ಲಿ ವಾಹನಗಳು ರಭಸವಾಗಿ ಹೋಗುತ್ತಿರುವುದರಿಂದ ಮಕ್ಕಳು ಅಪಾಯಕ್ಕೆ ಒಳಗಾಗುವ ಸಂಭವವಿದೆ ಇರುವುದರಿಂದ ಇಲ್ಲಿ ಪೊಲೀಸರನ್ನು ನಿಲ್ಲಿಸಬೇಕೆಂದು ಸದಸ್ಯೆ ಶ್ವೇತಾ ಕುಮಾರಿ ಆಗ್ರಹಿಸಿದರು.
ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲ್ಲಿಸಿದ್ದರೆ ಅವುಗಳಿಗೆ ಲಾಕ್ ಹಾಕಿ ಕ್ರಮ ಕೈಗೊಳ್ಳುತ್ತೇವೆ . ಸಾರ್ವಜನಿಕರಿಗೆ ನಮ್ಮಿಂದ ತೊಂದರೆಯಾಗದಂತೆ ನಾವು ಕರ್ತವ್ಯ ನಿರ್ವಹಿಸಬೇಕಾಗಿದೆ ಕೆಲವೊಂದು ಸಲ ಹಿರಿಯ ನಾಗರಿಕರು ಮತ್ತು ಮಹಿಳೆಯರು ವಾಹನದೊಳಗಡೆ ಇದ್ದಾಗ
ನಮ್ಮಿಂದ ತೊಂದರೆಯಾಗದಂತೆಯೂ ನೋಡಿಕೊಳ್ಳಬೇಕಾಗಿದೆ ಉಳಿದಂತೆ ದಂಡ ಹಾಕುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಇಂದು ಎಂ.ಅವರು ‘ಬಸ್ ಸ್ಟಾಂಡ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಈ ಹಿಂದೆ ಮೀಟಿಂಗ್ ಆಗಿದೆ,ಅದು ಹೆಚ್ಚು ಫಲಕಾರಿಯಾಗಿಲ್ಲ,ಮತ್ತೊಮ್ಮೆ ಮೂಡುಬಿದಿರೆ ಇನ್ಸ್ಪೆಕ್ಟರ್, ಪುರಸಭೆ, ಬಸ್ಸು ಮಾಲಕರು ಮತ್ತು ಏಜೆಂಟರ ಸಭೆ ನಡೆಸಲಾಗುವುದು’ ಎಂದರು.
ಆಹಾರ ಸುರಕ್ಷತೆಯ ದೃಷ್ಠಿಯಿಂದ ಫಾಸ್ಟ್ ಫುಡ್ ಅಂಗಡಿಗಳಿಗೆ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳಿಗೆ ನಾವು ಸಾಲ ಕೊಡುತ್ತೇವೆ ಅಲ್ಲದೆ ಅವರಿಂದ ನಮಗೂ ಬಾಡಿಗೆ ಬರುತ್ತಿದೆ ಆದ್ದರಿಂದ ನಾವು ಅವರಿಗೆ ಸ್ಟಾಲ್ ಇಡಲು ಪೇಟೆಯ ಮೂರು ಕಡೆಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮುಖ್ಯಾಧಿಕಾರಿ ಇಂದು ಎಂ.ತಿಳಿಸಿದರು.
ಅವರನ್ನು ಶಿಫ್ಟ್ ಮಾಡಿ ನಾವು ಜಾಗ ತೋರಿಸುವುದು ಬೇಡ. ಅವರು ಒಳಬಾಡಿಗೆಗೆ ಅಂಗಡಿಗಳನ್ನು ನೀಡಿ ಮಂಗಳೂರಿಗಿಂತಲೂ ಹೆಚ್ಚು ಬಾಡಿಗೆಯನ್ನು ಪಡೆಯುತ್ತಿದ್ದಾರೆಂದು ರಾಜೇಶ್ ನಾಯ್ಕ್ ತಿಳಿಸಿದರು. ವ್ಯಾಪಾರ ಮಾಡಿ ಜೀವನ ಮಾಡುವವರಿಗೆ ನಾವು ತೊಂದರೆ ಮಾಡುವುದು ಬೇಡ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಟಿ.ಸಿ. ಕೆಳಗಡೆ ವ್ಯಾಪಾರ ನಡೆಸಬಹುದೇ?? ವಿದ್ಯುತ್ ಕಂಬಗಳಿಗೆ ಹಗ್ಗ ಕಟ್ಟಿ ಬಟ್ಟೆಗಳನ್ನು ಒಣಗಿಸಬಹುದೇ ಎಂದು ರಾಜೇಶ್ ನಾಯ್ಕ್ ಪ್ರಶ್ನಿಸಿದರು.
ಲಾಡಿ ಬಳಿ ವಿದ್ಯುತ್ ಕಂಬವೊಂದು ವಾಲಿದೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ವಿದ್ಯುತ್ ಕಂಬಗಳಿಗೆ ಸುತ್ತಿಕೊಂಡಿರುವ ಬಳ್ಳಿಗಳನ್ನು ತೆರವುಗೊಳಿಸುವಂತೆ ಸದಸ್ಯರಾದ ಸುರೇಶ್ ಪ್ರಭು ವಿದ್ಯುತ್ ಕಂಬಗಳಲ್ಲಿ ಕೇಬಲ್ ವಯರ್ ಗಳು ನೇತಾಡುತ್ತಿರುವುದರ ಬಗ್ಗೆ ಶ್ವೇತಾ ಅವರು, ಸುರೇಶ್ ಕೋಟ್ಯಾನ್ ಮತ್ತು ಸ್ವಾತಿ ಪ್ರಭು ಮೆಸ್ಕಾಂ ಅಧಿಕಾರಿ ಸತೀಶ್ ಅವರ ಗಮನಕ್ಕೆ ತಂದರು. ನಿಮ್ಮಿಂದ ಸಾಧ್ಯವಾಗದಿದ್ದರೆ ನಮ್ಮ ಖರ್ಚಿನಲ್ಲೇ ನಾವೇ ಕೆಲಸಗಳನ್ನು ಮಾಡಿಸುವುದಾಗಿ ಸುರೇಶ್ ಪ್ರಭು ತಿಳಿಸಿದರು. ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಕುಡಿಯುವ ನೀರಿನ ಅಮೃತ್ ಜಲಜೀವನ್ ಯೋಜನೆಯ ಕಾಮಗಾರಿಗಳು ಆರಂಭವಾಗುವ ಮುನ್ನ ಕೌನ್ಸಿಲ್ ಗಮನಕ್ಕೆ ತರದೆ ಅಂತಿಮವಾಗಿ ಮಾಹಿತಿ ನೀಡಲು ಬಂದಿರುವ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ವಿಷಯ ಚರ್ಚಿಸಲು ಅಧಿಕಾರಿಗಳನ್ನು ಕರೆದು ಮತ್ತೊಮ್ಮೆ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಮೂಡುಬಿದಿರೆ ಪುರಸಭೆಯ ಕೆಲವು ಪ್ರದೇಶಗಳು ಮಹಾಯೋಜನೆ ಝೋನ್ ಗೆ ಸರಕಾರಕ್ಕೆ ಸಬಿಟ್ ಆಗಿದ್ದು ಇದರಿಂದ ೯-೧೧ ಕನ್ವರ್ಷನ್ ಮಾಡಿ ನೀಡಲು ತೊಂದರೆಯಾಗುತ್ತಿದೆ ಆದ್ದರಿಂದ ಝೋನ್ ಫೈನಲ್ ಆಗುವವರೆಗೆ ಖಾತೆ ನೀಡಲು ಅವಕಾಶ ನೀಡಬೇಕೆಂದು ಸದಸ್ಯ ಸುರೇಶ್ ಕೋಟ್ಯಾನ್ ಆಗ್ರಹಿಸಿದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ನಿರ್ಗಮಿತ ಪುರಸಭಾ ಅಧ್ಯಕ್ಷ ಪ್ರಸಾದ್ದ ಕುಮಾರ್, ಸದಸ್ಯರಾದ ಪಿ.ಕೆ.ಥೋಮಸ್, ಪುರಂದರ ದೇವಾಡಿಗ, ಜೊಸ್ಸಿ ಮೆನೇಜಸ್, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ರೂಪಾ ಶೆಟ್ಟಿ, ಹಿದಾಯಲ್ ಆಲಿ ಎಂಜಿನಿಯರ್, ಆರೋಗ್ಯ ನಿರೀಕ್ಷಕಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 Comments