ತುರ್ತು ಚಿಕಿತ್ಸೆಯ ನಿರೀಕ್ಷೆಯಲ್ಲಿ ರಸ್ತೆಯ ಹೊಂಡಗಳು *ರಸ್ತೆಯಲ್ಲಿರುವ ಹೊಂಡಗಳಿಂದ ವಾಹನ ಸವಾರರಿಗೆ ಪ್ರಾಣಭಯ

ಜಾಹೀರಾತು/Advertisment
ಜಾಹೀರಾತು/Advertisment

 ತುರ್ತು ಚಿಕಿತ್ಸೆಯ ನಿರೀಕ್ಷೆಯಲ್ಲಿ ರಸ್ತೆಯ ಹೊಂಡಗಳು

*ರಸ್ತೆಯಲ್ಲಿರುವ ಹೊಂಡಗಳಿಂದ ವಾಹನ ಸವಾರರಿಗೆ ಪ್ರಾಣಭಯ

ಮೂಡುಬಿದಿರೆ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸಹಿತ ಪುರಸಭಾ ವ್ಯಾಪ್ತಿಗಳಲ್ಲಿರುವ ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ತುಂಬಿಕೊಂಡಿದ್ದು ವಾಹನ ಸವಾರರು ಪ್ರಾಣಭಯದಿಂದ ವಾಹನವನ್ನು ಚಲಾಯಿಸಿಕೊಂಡು ಹೋಗುವಂತ್ತಾಗಿದೆ.

     ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಬರುವ ಖಾಸಗಿ ಬಸ್ ನಿಲ್ದಾಣದಿಂದ ಹೊರಗೆ ಬರುವವಲ್ಲಿಯ ರಸ್ತೆಯಲ್ಲಿ ಕಳೆದ ಕೆಲವು ಹೊಂಡವೊಂದು ಸೃಷ್ಠಿಯಾಗಿದೆ ಇಲ್ಲಿ ಏಕಮುಖ ರಸ್ತೆಯಾಗಿದ್ದರು ಕೂಡಾ ಕೆಲವು ಸಲ ಕೆಲವರು ಇದೇ ರಸ್ತೆಯ ಮೂಲಕ ವಾಹನವನ್ನು ಚಲಾಯಿಸಿಕೊಂಡು ಬರುವುದರಿಂದ ಎದುರಿನಿಂದ ಬರುವ ಸವಾರರು ತೊಂದರೆಯನ್ನು ಅನುಭವಿಸುವಂತ್ತಾಗಿದೆ. 

  ಇದಕ್ಕಿಂತ ಸ್ವಲ್ಪ ಮುಂದಕ್ಕೆ ಬಂದಾಗ ಅಲ್ಲೂ ರಸ್ತೆಯ ಡಾಂಬರು ಕಿತ್ತು ಬಂದಿದ್ದು ಇಲ್ಲೂ ಕೂಡಾ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. 

  ಇನ್ನು ಇದಕ್ಕಿಂತ ಮುಂದಕ್ಕೆ ಬಂದಾಗ ಸತ್ಯನಾರಾಯಣ ದೇವಸ್ಥಾನದ ಬಳಿಯ ರಸ್ತೆಯಲ್ಲಿ ದೊಡ್ಡದಾದಂತಹ ಹೊಂಡವೊಂದು ತೆರೆದುಕೊಂಡಿದೆ. ಅಲ್ಲಿಂದ ಮುಂದಕ್ಕೆ ಬಂದಾಗ ಜ್ಯೋತಿನಗರ ಹಂಪ್ಸ್ ನ ಬಳಿಯಲ್ಲಿ ರಸ್ತೆಯಲ್ಲಿ ಜಲ್ಲಿಕಲ್ಲು ಮತ್ತು ಡಾಂಬರು ಕಿತ್ತು ಹೋಗಿದ್ದಲ್ಲದೆ ಎರಡೂ ಬದಿಗಳಲ್ಲಿ ನಾಲ್ಕೈದು ದೊಡ್ಡದಾದ ಹೊಂಡಗಳು ಯಮರಾಯನಂತೆ ಬಾಯಿ ತೆರೆದುಕೊಂಡಿದ್ದು ಮಳೆ ಬಂದಾಗ ನೀರು ತುಂಬಿಕೊಂಡು ರಸ್ತೆಯ ಯಾವುದು ಹೊಂಡ ಯಾವುದು ಎಂದು ಗಮನಕ್ಕೆ ಬಾರದೆ ವಾಹನಗಳನ್ನು ಹೊಂಡಗಳಿಗೆ ಬೀಳಿಸಬೇಕಾಗಿದೆ. 


ಇನ್ನು ಮೆಸ್ಕಾಂ ಕಛೇರಿಯ ಮುಂಭಾಗ ವೇಣೂರಿಗೆ ಹೋಗುವ ರಸ್ತೆಯಲ್ಲಿಯೂ ಇಂತಹದ್ದೇ ಪರಿಸ್ಥಿತಿಯಿದೆ. ಇಲ್ಲೂ ಕೂಡಾ ಹಂಪ್ಸ್ ನ ಸುತ್ತಲೂ ಹೊಂಡಗಳು ತುಂಬಿಕೊಂಡಿದ್ದಲ್ಲದೆ ರಸ್ತೆಗಳು ಕಿತ್ತು ಬಂದಿವೆ. 

    ಮೆಸ್ಕಾಂ ಮತ್ತು ಜ್ಯೋತಿನಗರದ ಬಳಿ ಪ್ರತಿವರ್ಷವೂ ಮಳೆಗಾಲದ ಸಂದರ್ಭ ವಾಹನ ಸವಾರರು ಮತ್ತು ಪಾದಾಚಾರಿಗಳು ಈ ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದ್ದಾರೆ. ಕೆಲವು ಬಾರಿ ಈ ರಸ್ತೆಗಳಿಗೆ ಸಾರ್ವಜನಿಕರು, ಪೊಲೀಸರು ಕಲ್ಲು ಮಣ್ಣುಗಳನ್ನು ಹಾಕಿ ಹೊಂಡಗಳನ್ನು ಮುಚ್ಚುತ್ತಾ ಬಂದಿರುತ್ತಾರೆ ಆದರೆ ಈ ಬಾರಿ ಯಾರೂ ಈ ಮಹಾತ್ಕಾರ್ಯವನ್ನು ಕೈಗೊಳ್ಳಲು ಮುಂದೆ ಬಂದಿಲ್ಲ.

 ಮೂಡುಬಿದಿರೆಯಿಂದ ಬೆಳ್ತಂಗಡಿವರೆಗೆ ಇರುವ ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡಗಳೇ ತುಂಬಿಕೊಂಡಿದ್ದು ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿಡಿದುಕೊಂಡು ಹರಸಾಹಸದೊಂದಿಗೆ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

   ವಾಹನ ಸವಾರರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗುವ ಸ್ಥಿತಿಯನ್ನು ಕಂಡಿರುವ ಹೊಂಡಗಳಿಗೂ ಬೇಸರ ಆಗಿರಬಹುದೇನೋ ತಮ್ಮಿಂದಾಗಿ ಎಲ್ಲಿ ಮನುಷ್ಯರು ಪ್ರಾಣ ಕಳೆದುಕೊಂಡು ತಮ್ಮ ಮೇಲೆ ಆರೋಪ ಬರಬಹುದೇನೋ ಎಂಬ ಆತಂಕದಿಂದ ತಮಗೆ ಯಾವಾಗ ಚಿಕಿತ್ಸೆ ನೀಡಿ ತಮ್ಮನ್ನು ಆ ಆರೋಪದಿಂದ ಮುಕ್ತಗೊಳಿಸುತ್ತಾರೆಂದು ರಸ್ತೆಗಳು ಕಾತರತೆಯಿಂದ ಕಾಯುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ರಸ್ತೆಗಳಿಗೆ ಡಾಂಬಾರು ಹಾಕಿ ಸರಿಪಡಿಸಬೇಕಾಗಿದೆ ಅಥವಾ ಪುರಸಭೆಯಾದರೂ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದರೆ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಲಾಯಿಸಿಕೊಂಡು ಹೋಗಬಹುದೇನೋ..

Post a Comment

0 Comments