ಮಾನವ ಸರಪಳಿಯ ಮೂಲಕ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ
ಮೂಡುಬಿದಿರೆ : ಮಾನವ ಸರಪಳಿಯ ಮೂಲಕ ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುವುದು ಎಂದು ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ತಿಳಿಸಿದರು.
ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮೂಡುಬಿದಿರೆ, ಮೂಲ್ಕಿ ತಾಲೂಕುಗಳ ವ್ಯಾಪ್ತಿಯ ಸರ್ವ ಇಲಾಖೆ, ಶಿಕ್ಷಣ, ಸಾಮಾಜಿಕ, ಸಾರ್ವಜನಿಕ ಸಂಘಟನೆಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
ಮೂಡುಬಿದಿರೆ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆ ಗಂ. ೯ಕ್ಕೆ ಹೆಜಮಾಡಿ ಟೋಲ್‌ಗೇಟ್‌ನಿಂದ ಮಾನವ ಸರಪಳಿ ಆರಂಭವಾಗಲಿದ್ದು , ಹತ್ತಿರದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು,ವಿವಿಧ ಇಲಾಖಾಧಿಕಾರಿಗಳು, ಸಿಬಂದಿಗಳು ಸಾರ್ವಜನಿಕರು ಕೈ ಜೋಡಿಸಲಿರುವರು.
ಮುಂದೆ ಸಾಗುವ ಸರಪಳಿಯಲ್ಲಿ ಯಾವ ಸಂಸ್ಥೆಯವರು, ಇಲಾಖೆಯವರು ಎಲ್ಲಿ ಸೇರಿಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ ಎಂದರು.
ಉಭಯ ತಾಲೂಕುಗಳಿಂದ ಸುಮಾರು ೭೦೦೦ ಮಂದಿ ಕಲೆತು, ಮೂಲ್ಕಿ ಗಡಿ ಪ್ರದೇಶ ಪಾವಂಜೆಯವರೆಗಿನ ಸುಮಾರು ೮.೫ ಕಿ.ಮೀ ಉದ್ದದ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಲಘು ಉಪಾಹಾರದ ವ್ಯವಸ್ಥೆ:
ಸುಮಾರು ಒಂದೂವರೆ ತಾಸು ನಡೆಯಲಿರುವ ಈ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವವರಿಗಾಗಿ ಅಲ್ಲಲ್ಲಿ ಅಂದರೆ ಪ್ರತಿ ೭೦೦ ಮೀ. ಹಂತದಲ್ಲಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ನಿಯೋಜನೆಯಲ್ಲಿ, ಮೊದಲ ೭೦೦ ಮೀ.ವ್ಯಾಪ್ತಿಯ ವರೆಗೆ ಬಪ್ಪನಾಡು ವೆಂಕಟಗಿರಿ ಅಪಾರ್ಟ್ಮೆಂಟ್, ಬಳಿಕದ ೭೦೦ ಮೀ. ಹಂತದಲ್ಲಿ ಕಾರ್ನಾಡು ಎಕ್ಸ್ ಪ್ರೆಸ್ ಬಸ್‌ನಿಲ್ದಾಣದಲ್ಲಿ, ಮುಂದೆ ಕ್ರಮವಾಗಿ ಕಾರ್ನಾಡು ಬೈಪಾಸ್, ಹೊನ್ನಕಟ್ಟೆ ಪೆಟ್ರೋಲ್ ಬಂಕ್, ಕೊಲ್ನಾಡು ಬಸ್‌ನಿಲ್ದಾಣದಲ್ಲೂ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಿಯೋಜನೆಯಲ್ಲಿ ಪಡುಪಣಂಬೂರು ನ್ಯಾಚುರಲ್ ಗ್ರಾನೈಟ್ ಬಿಲ್ಡಿಂಗ್, ಬಿಲ್ಲವ ಭವನ, ಹಳೆಯಂಗಡಿ ಪೂಜಾ ಹೋಟೆಲ್ ಬಳಿ,ಪಾವಂಜೆ ದೇವಸ್ಥಾನ ಆವರಣ ಮತ್ತು ಪಾವಂಜೆ ಸೇತುವೆ ಬಳಿಯ ವಾಣಿ ಕಾಲೇಜು ಈ ಹತ್ತು ಕಡೆಗಳಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ಶುದ್ಧ ನೀರನ್ನೂ ಒದಗಿಸಲಾಗುವುದು ಎಂದರು.
ಮಂಗಳೂರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸ. ಆಯಕ್ತ ಗೋವಿಂದ ನಾಯಕ್, ತಹಶೀಲ್ದಾರ್ ಕಿರಣ್ ಎಸ್., ಮೂಡುಬಿದಿರೆ-ಮೂಲ್ಕಿ ತಾ.ಪಂ. ಕಾ.ನಿ. ಅಧಿಕಾರಿ ಕುಸುಮಾಧರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ ಅಡಿಗ, ಮೂಡುಬಿದಿರೆ ಪುರಸ`ಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ. . ಬಿಇಓ ವಿರೂಪಾಕ್ಷಪ್ಪ, ಸಹಿತ ವಿವಿಧ ಸ್ಥಳೀಯ ಆಡಳಿತ ಪ್ರಮುಖರು, ಇಲಾಖಾಧಿಕಾರಿಗಳು, ಶಿಕ್ಷಣ ಮತ್ತು ಇತರ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
0 Comments