ಮೂಡುಬಿದಿರೆಯಲ್ಲಿ ಶಿಕ್ಷಕರ ದಿನಾಚರಣೆ
*ಶಿಕ್ಷಕರು ಪ್ರಶಸ್ತಿ ಪಡೆಯುವುದಕ್ಕಿಂತ ಪುರಸ್ಕೃತರಾಗುವುದು ಉತ್ತಮ
ಮೂಡುಬಿದಿರೆ: ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ತಮ್ಮ ಮಕ್ಕಳೆಂಬತೆ ನೋಡಿಕೊಳ್ಳಬೇಕು ಮತ್ತು ಅವರಲ್ಲಿ ಹುದುಗಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆದು ಸಮಾಜದಲ್ಲಿ ಗುರುತಿಸುವಂತೆ ಮಾಡಿದಾಗ ನೀವು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡುವ ಅಗತ್ಯವಿಲ್ಲ ಬದಲಾಗಿ ಪುರಸ್ಕಾರಕ್ಕೆ ನೀವೆ ಭಾಜನರಾಗುತ್ತೀರಿ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಡಾ. ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನಾಚರಣೆಯ ಅಂಗವಾಗಿ ನಡೆಯುವ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಅವರು ಮಾತನಾಡಿದರು.
ಇಂದು ವಿದ್ಯಾರ್ಥಿಗಳಿಗೆ 10 ನೇ ತರಗತಿಯಲ್ಲಿ 625ಕ್ಕೆ 625 ಅಂಕಗಳನ್ನು ನೀಡುವುದು ಸಮಂಜಸವಲ್ಲ. ಬದಲಾಗಿ ಪೂರ್ಣ ಅಂಕದಿಂದ ಒಂದು ಅಥವಾ ಅರ್ಧ ಅಂಕವನ್ನು ಕಡಿಮೆಗೊಳಿಸಿ ಅವರ ಮನಸಲ್ಲಿ ಯೋಚನಾಕ್ರಮವನ್ನು ಬೆಳೆಸುವ ಗುಣವನ್ನು ಬಿತ್ತಬೇಕು ಎಂದ ಅವರು ಬಡ ಮಕ್ಕಳ ಹರಿದ ಬಟ್ಟೆ, ಹಸಿದ ಹೊಟ್ಟೆ ತಣಿಸಿ ಶಿಕ್ಷಣ ನೀಡಿದ ಅಧ್ಯಾಪಕರನ್ನು ಜನತೆ ಸದಾ ನೆನೆಪಿಟ್ಟುಕೊಳ್ಳುತ್ತಾರೆ ಎಂದು ತನ್ನ ಜೀವನದ ಘಟನೆಗಳನ್ನು ತಿಳಿಸಿದರು.
ಅಧ್ಯಾಪಕ ವಿಠಲ್ ನಾಯಕ್ ದಿಕ್ಸೂಚಿ ಭಾಷಣಗೈದು ಬೇರೆ ಬೇರೆ ಇಲಾಖೆಗಳಲ್ಲಿ ಒತ್ತಡಗಳಿರುವಂತೆ ಶಿಕ್ಷಕರಿಗಿಲ್ಲ ಅದೇನಿದ್ದರೂ ಬೆಳಿಗ್ಗೆ ಒಂಭತ್ತೂವರೆಯಿಂದ ಸಂಜೆ ಐದು ಗಂಟೆ ತನಕ ಮಾತ್ರ. ಶಿಕ್ಷಕರು ಸ್ಟಾಫ್ ರೂಮಿನ ನಾಲ್ಕುಗೋಡೆಗಳ ಮಧ್ಯೆ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಿ ಮತ್ತು ಶಾಂತಚಿತ್ತದಿಂದ, ನಗು ಮೊಗದೊಂದಿಗೆ ಶಾಲಾ ಕೊಠಡಿಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಿ ಎಂದ ಅವರು ಪಾಲಕ, ಮಾಲಕ,ಚಾಲಕ ಹಾಗೂ ಬಾಲಕ ಒಗ್ಗೂಡಿ ಮುನ್ನಡೆದಾಗ ಶಾಲೆಯ ಪ್ರಗತಿ ಸಾಧ್ಯವಿದೆ ಎಂದರು.
2023-24ನೇ ಸಾಲಿನಲ್ಲಿ ನಿವೃತ್ತಿ ಪಡೆದ ಶಿಕ್ಷಕರು, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ಸಾಲಿನಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳು ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ಶಿಕ್ಷಕರನ್ನು ಅಭಿನಂದಿಸಲಾಯಿತು.
ಸನ್ಮಾನ : ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಾಲೂಕು ದೈ.ಶಿ.ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕೆಎಂಎಫ್ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಪುರಸಭಾಧ್ಯಕ್ಷೆ ಜಯಶ್ರೀ,ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ತಾಲೂಕು ಪಂಚಾಯತ್ ಶಿಕ್ಷಣಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾರ್, ಶಿಕ್ಷಕರ ಸಂಘದ ಪ್ರಮುಖರಾದ ನಾಗೇಶ್ ಎಸ್., ಶಶಿಕಾಂತ್ ಜೈನ್, ನವೀನ್ ಟಿ.ಆರ್., ಸೌಮ್ಯ, ಶಿವಾನಂದ ಕಾಯ್ಕಿಣಿ, ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಎಸ್. ವಿರೂಪಾಕ್ಷಪ್ಪ ಸ್ವಾಗತಿಸಿದರು. ಶಿಕ್ಷಕ ರಾಮಕೃಷ್ಣ ಶಿರೂರು ವರದಿ ವಾಚಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
0 Comments