ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟಕ್ಕೆ ಚಾಲನೆ
ಮೂಡುಬಿದಿರೆ: ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಸರಕಾರಿ ಪ್ರೌಢಶಾಲೆ ನೀರ್ಕೆರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗದ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವು ಶಾಲಾ ಆವರಣದಲ್ಲಿ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಖೋ-ಖೋ ಪಂದ್ಯಾಟ ಮತ್ತು ಕಲಿಕಾ ಚಟುವಟಿಕೆಗಳ ಬೋಧನ ಪರಿಕರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಚುರುಕುತನವನ್ನು ಉಪಯೋಗಿಸಿ ಆಡುವಂತಹ ಆಟ ಖೋ ಖೋ. ತಾವು ಪ್ರಶಸ್ತಿಯನ್ನು ಪಡೆಯುತ್ತೇವೆ ಎಂಬ ಪ್ರಯತ್ನದೊಂದಿಗೆ ಬಹುಮಾನ ಕೈತಪ್ಪಿ ಹೋದರೆ ಮತ್ತೊಮ್ಮೆ ಪ್ರಯತ್ನಿಸಿ ಜಯಗಳಿಸುತ್ತ ಗಮನಹರಿಸಿ ಮತ್ತು ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಿ ಎಂದ ಅವರು ಪ್ರಯೋಗ ಮಾಡಿ ಹೇಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮಾಹಿತಿ ಸಿಗಬಹುದು ಎಂಬುದನ್ನು ಸರಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳು ಉತ್ತಮ ರೀತಿಯಲ್ಲಿ ಇಲ್ಲಿ ತೋರ್ಪಡಿಸಿರುವುದು ಶ್ಲಾಘನೀಯ ಎಂದರು.
ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿ ನಡೆಯುವ ಪಂದ್ಯಾಟದ ಸಿದ್ಧತೆಗೆ ಶಾಲಾ ಶಿಕ್ಷಕರು ಮತ್ತು ಊರಿನವರು ಶ್ರಮಪಟ್ಟಿದ್ದಾರೆ. ಈ ಶಾಲೆಯಲ್ಲಿ ಪ್ರತಿವರ್ಷವೂ ಪಂದ್ಯಾಟವನ್ನು ಆಯೋಜಿಸುತ್ತಿರುವುದು ನಮಗೆಲ್ಲರಿಗೂ ಖುಷಿಯ ವಿಷಯ ಎಂದು ಶುಭ ಹಾರೈಸಿದರು.
ಸನ್ಮಾನ : ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿರುವ ನೀರ್ಕೆರೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಅವರನ್ನು ಮತ್ತು ಉದ್ಯಮಿ, ದಾನಿ ವಿನ್ಸೆಂಟ್ ಡಿ"ಕುನ್ಹಾ ಅವರನ್ನು ಸನ್ಮಾನಿಸಲಾಯಿತು.
ಗೌರವ : ಈ ವರ್ಷದಲ್ಲಿ ಶಾಲೆಯ 100 ಶೇ ಫಲಿತಾಂಶವನ್ನು ದಾಖಲಿಸಲು ಕಾರಣೀಕರ್ತರಾಗಿರುವ ಅಧ್ಯಾಪಕ ವೃಂದದವರನ್ನು ಗೌರವಿಸಲಾಯಿತು.
ಪಂದ್ಯಾಟಕ್ಕೆ ಸಹಕಾರ ನೀಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಮತ್ತು ಲಯನ್ಸ್ ವಲಯಾಧ್ಯಕ್ಷ ರಾಯನ್ ರೋಶನ್ ಡಿ"ಸೋಜ ಅವರನ್ನು ಗುರುತಿಸಿ ಗೌರವಿಸಲಾಯಿತು.
ದ.ಕ.ಜಿ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಪಂಚಾಯತ್ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಪಂಚಾಯತ್ ಸದಸ್ಯರಾದ ದಿನೇಶ್ ಬಿ.ಎಲ್., ಲಿಂಗಪ್ಪ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಜಯಲಕ್ಷ್ಮೀ ದೈ.ಶಿ.ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಹೆಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಸವಿತಾ ವಿಠ್ಠಲ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments