ಗ್ರಾಮಾಭಿವೃದ್ಧಿ ಯೋಜನೆಯಿಂದ 55 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ
ಮೂಡುಬಿದಿರೆ: ಶ್ರೀ ಕ್ಷೇತ್ರ ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕು ಇದರ ವತಿಯಿಂದ ತಾಂತ್ರಿಕ, ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನಾ ಮಂಜುರಾತಿ ಪತ್ರ ವಿತರಣಾ ಕಾರ್ಯಕ್ರಮವು ಶನಿವಾರ ಎಂಸಿಎಸ್ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಸಹಕಾರಿ ರತ್ನ ಎಂ.ಬಾಹುಬಲಿ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಮಂಜುರಾತಿ ಪತ್ರವನ್ನು ವಿತರಿಸಿ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಇವು ಮನುಷ್ಯನಿಗೆ ಅಗತ್ಯವಾಗಿ ಬೇಕು. ಇದಕ್ಕೆ ಪೂರಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣವನ್ನು ಪಡೆಯಲು ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಮತ್ತು ಆರೋಗ್ಯಕ್ಕಾಗಿ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದು ಬಡವರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡುತ್ತಿದೆ ಅಲ್ಲದೆ ಮನೆ ನಿರ್ಮಾಣಕ್ಕೆ, ಉದ್ಯೋಗವನ್ನು ಪಡೆಯಲು ಟ್ರೈನಿಂಗ್ ನೀಡುವ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಗುರಿಯತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕೆಂಬುದು ಹೆತ್ತವರ ಕನಸಾಗಿರುತ್ತದೆ. ಹಿಂದೆ ಕಲಿಯಲು ಆಸಕ್ತಿ ಇದ್ದರೂ ಅದಕ್ಕೆ ಪೂರಕವಾದ ವಾತಾವರಣವಿರಲಿಲ್ಲ ಆದರೆ ಇಂದು ಸರಕಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಿತ ವಿವಿಧ ಸಂಘ ಸಂಸ್ಥೆಗಳು ಹಲವಾರು ಯೋಜನೆಗಳನ್ನು ತರುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ವಿತರಣೆ: ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 55 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ನಿಧಿಯನ್ನು ವಿತರಿಸಲಾಯಿತು.
ಸಹಾಯಧನ ವಿತರಣೆ: ಈ ವರ್ಷ ಪ್ರಾಕೃತಿಕ
ವಿಕೋಪದಿಂದ ಸಂಘದ ಎರಡು ಕುಟುಂಬ ಮನೆಗಳು ಹಾನಿಗೊಳಗಾಗಿದ್ದು ಅವರಿಗೆ ಸಹಯಧನವನ್ನು ವಿತರಿಸಲಾಯಿತು. ಹಾಗೂ ಸುಜ್ಞಾನ ನಿಧಿಯಿಂದ ಶಿಷ್ಯಾವೇತನ ಪಡೆದು ಶಿಕ್ಷಣ ಮುಗಿಸಿ ಉದ್ಯೋಗ ಪಡೆದಿರುವವರನ್ನು ಗುರುತಿಸಿ ಅಭಿನಂಧಿಸಲಾಯಿತು.
ತಾಲ್ಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೇಲ್ವೀಚಾರಕ ವಿಠ್ಠಲ್ ಉಪಸ್ಥಿತರಿದ್ದರು.
ಶಿರ್ತಾಡಿ ವಲಯದ ಮೇಲ್ವೀಚಾರಕಿ ಶಿವಲಕ್ಷ್ಮೀ ಸ್ವಾಗತಿಸಿದರು. ಮಕ್ಕಳ ಪೋಷಕರು ಅನಿಸಿಕೆಯನ್ನು ಹಂಚಿಕೊಂಡು ಸುಜ್ಞಾನ ನಿಧಿ ಶಿಷ್ಯ ವೇತನವು ತಮ್ಮ ಮಕ್ಕಳ ಶಿಕ್ಷಣಕ್ಕೆ ತುಂಬಾ ಸಹಾಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಲೆಕ್ಕ ಪರಿಶೋಧಕ ನಾಗೇಶ್ ವಿದ್ಯಾರ್ಥಿಗಳ ವಿವರ ನೀಡಿದರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಮೇಲ್ವೀಚಾರಕ ಲೋಕೇಶ್ ವಂದಿಸಿದರು.
0 Comments