ಚರಂಡಿಗೆ ಜಾರಿದ ಟ್ರೇಲರ್ : ಪರ್ಯಾಯ ರಸ್ತೆಯಲ್ಲಿ ವಾಹನಗಳ ಸಂಚಾರ
ಮೂಡುಬಿದಿರೆ : ಕಬ್ಬಿಣದ ರಾಡ್ ಗಳನ್ನು ಹೇರಿಕೊಂಡು ಸಾಗುತ್ತಿದ್ದ 18 ಚಕ್ರದ ಬ್ರಹತ್ ಟ್ರೇಲರ್ ಚರಂಡಿಗೆ ಜಾರಿದ ಘಟನೆ ಕುಪ್ಪೆಪದವು-ಇರುವೈಲು-ಮೂಡುಬಿದಿರೆ ಹೆದ್ದಾರಿಯ ಕಟ್ಟೆಮಾರ್ ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದ್ದು, ಹೆದ್ದಾರಿಯಲ್ಲಿ ಬೆಳಿಗ್ಗೆ 7ಗಂಟೆಯಿಂದ 11ಗಂಟೆವರೆಗೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಮಂಗಳೂರಿನಿಂದ ಎಡಪದವು ಸಮೀಪದ ನಿರ್ಪರಿ ಎಂಬಲ್ಲಿಗೆ ಟನ್ ಗಟ್ಟಲೆ ಟಿಯಂಟಿ ಬಾರ್ ಗಳನ್ನು ತುಂಬಿದ್ದ ಬ್ರಹತ್ ಲಾರಿ ಕಟ್ಟೆಮಾರ್ ಬಳಿಯ ಇಕ್ಕಟ್ಟಾದ ರಸ್ತೆಯಲ್ಲಿ ಅಪಾಯಕಾರಿ ತಿರುವಿನಲ್ಲಿ ಸಾಗುವ ವೇಳೆ ಹಿಂದಿನ ಒಂದು ಬದಿಯ ಟಯರ್ ಗಳು ಚರಂಡಿಗೆ ಜಾರಿ, ಪಕ್ಕದ ಕಟ್ಟಡಕ್ಕೆ ವಾಳಿಕೊಂಡು ಮುಂದೆ ಚಲಿಸಲಾಗದೆ ಸಿಕ್ಕಿಕೊಂಡಿತ್ತು.
ಇರುವೈಲಿನಿಂದ ಕುಪ್ಪೆಪದವು ಮೂಲಕ ಮಂಗಳೂರಿಗೆ ಸಾಗುವ ಬಸ್ಸುಗಳು ಹಾಗೂ ಇತರ ವಾಹನಗಳು ಪರ್ಯಾಯ ರಸ್ತೆಗಳಲ್ಲಿ ಸಾಗಿದವು. 11ಗಂಟೆ ವೇಳೆಗೆ ಕ್ರೇನ್ ಮೂಲಕ ಟ್ರೇಲರನ್ನು ಮೇಲಕ್ಕೆತ್ತಲಾಯಿತು.
ನಾಗರಪಂಚಮಿಯಾದುದರಿಂದ ವಾಹನ ದಟ್ಟನೆ ಹೆಚ್ಚಿದ್ದು, ನಾಗಬನಗಳಿಗೆ ಹೋಗುವವರು ಪರದಾಡುವಂತಾಯಿತು.
ಇಕ್ಕಟ್ಟಾದ ರಸ್ತೆ ತಿರುವು: ಕುಪ್ಪೆಪದವು-ಇರುವೈಲು ರಸ್ತೆಯ ಕಟ್ಟೆಮಾರ್ ಎಂಬಲ್ಲಿ ರಸ್ತೆ ಇಕ್ಕಟ್ಟಾಗಿದ್ದು,ಇಲ್ಲಿ ತಿರುವು ಕೂಡಾ ಅಪಾಯಕಾರಿಯಾಗಿದೆ. ಎದುರುಗಡೆಯಿಂದ ಬರುವ ವಾಹನ ಅತೀ ಸಮೀಪ ಬರುವರೆಗೂ ಕಾಣುವುದಿಲ್ಲ. ಪರಿಣಾಮವಾಗಿ ಇಲ್ಲಿ ಹಲವಾರು ಅಪಘಾತಗಳಾಗಿದ್ದು, ಇಲ್ಲಿ ರಸ್ತೆಯನ್ನು ನೇರಗೊಳಿಸಲು ಹಲವು ವರ್ಷಗಳಿಂದ ಜನರು ಒತ್ತಾಯಿಸುತ್ತಲೇ ಇದ್ದಾರೆ. ಖಾಸಗಿಯವರು ಜಾಗ ಕೊಟ್ಟರೂ ಲೋಕೋಪಯೋಗಿ ಇಲಾಖೆ ಮಾತ್ರ ರಸ್ತೆ ನೇರಗೊಳಿಸುವ ಗೋಜಿಗೆ ಹೋಗಿಲ್ಲ.
0 Comments