ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಕ್ಕೆ ಕೋಟ್ಯಾನ್ ಭೇಟಿ:
ಮೃತರ ಕುಟುಂಬಕ್ಕೆ ೫ ಲಕ್ಷ ಪರಿಹಾರ
ಮೂಡುಬಿದಿರೆ : ಮಳೆಯಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ಹಾನಿಗಳಾಗಿದ್ದು ಈ ಪ್ರದೇಶಗಳಿಗೆ ಶಾಸಕ ಉಮನಾಥ ಕೋಟ್ಯಾನ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಅಲಂಗಾರು ಬಡಗುಬಸದಿ ಬಳಿ ಕಿರು ಸೇತುವೆ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಸೇತುವೆಗೂ ಹಾನಿಯಾಗಿದ್ದು ಪುನರ್‌ನಿರ್ಮಿಸಲು ಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಉದ್ಯಮಿಗಳಾದ ಮಹೇಂದ್ರವರ್ಮ, ಅಬುಲ್ ಅಲಾ ಪುತ್ತಿಗೆ, ಡೆನ್ನಿಸ್ ಪಿರೇರಾ, ರೊನಾಲ್ಡ್ ಫೆರ್ನಾಂಡೀಸ್ ಮತ್ತಿತರರು ಈ ಭಾಗದಲ್ಲಿ ವಸತಿ ಸಮುಚ್ಛಯಗಳು ಮತ್ತು ಕಾಲೋನಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದರು.
ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯಲ್ಲಿ ಮನೆ ಕುಸಿದು ಮೃತಪಟ್ಟ ಗೋಪಿ ಮನೆಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಸರ್ಕಾರದ ಪ್ರಕೃತಿ ವಿಕೋಪ ನಿಧಿಯಿಂದ ೫ ಲಕ್ಷ ಪರಿಹಾರ ಹಾಗೂ ಮನೆ ನವೀಕರಣಕ್ಕೆ ೧.೨೦ ಲಕ್ಷ ರೂ ಒದಗಿಸುವಂತೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಸೂಚಿಸಿದರು.
ಪಣಪಿಲ-ಬೋರುಗುಡ್ಡೆ ಸಂಪರ್ಕ ರಸ್ತೆಯ ಬಿರ್ಮರಬೈಲು ಎಂಬಲ್ಲಿ ಕುಸಿದ ಸೇತುವೆಯನ್ನು ಪರಿಶೀಲಿಸಿ ಹೊಸ ಸೇತುವೆ ನಿರ್ಮಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಇಂಜಿನಿಯರ್ ಇಂದು ಎಂ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಮಾಜಿ ಅಧ್ಯಕ್ಷ ಜಯಂತ ಹೆಗ್ಡೆ, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ ಶೆಟ್ಟಿ ಬೇಲೊಟ್ಟು, ಬಿಜೆಪಿ ಮಂಡಲ ಅಧ್ಯಕ್ಷ ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
0 Comments