ನಾಟಕ, ಯಕ್ಷಗಾನದಿಂದ ತುಳು ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ : ಡಾ.ಆಳ್ವ
ಮೂಡುಬಿದಿರೆ: ತುಳು ಭಾಷೆಯಿಂದ ರಚನೆಗೊಂಡಿರುವ ನಾಟಕ, ಸಿನಿಮಾ, ಯಕ್ಷಗಾನ ಸಹಿತ ಜಿಲ್ಲೆಯ ವೈವಿಧ್ಯ ಕಲಾ ಪ್ರಕಾರಗಳಿಂದಾಗಿ ಇನ್ನೂರು ವರ್ಷಗಳ ಇತಿಹಾಸವಿರುವ ತುಳು ಭಾಷೆಯನ್ನು ಮಾತನಾಡುವವರ ಸಂಖ್ಯೆಯು ವೃದ್ಧಿಯಾಗುವುದರ ಜತೆಗೆ ಭಾಷೆಯ ಮೇಲಿನ ಗೌರವವು ಹೆಚ್ಚಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಅವರು ಕನ್ನಡ ಭವನದಲ್ಲಿ ಕುರಲ್ ಕಲಾವಿದೆರ್ ಬೆದ್ರ ಅಭಿನಯದ ಪ್ರಸಾದ್ ಆಳ್ವ ಸಾರಥ್ಯದ `ಯೇರ್' ತುಳು ಹಾಸ್ಯಮಯ ನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ೧೯೩೩ರಲ್ಲಿ ಪ್ರದರ್ಶನಗೊಂಡ `ಮದ್ಮೆ' ತುಳು ನಾಟಕದ ನಂತರ ಇತ್ತೀಚಿನವರೆಗೆ ಸಾಕಷ್ಟು ತುಳುನಾಟಕಗಳು ಜಿಲ್ಲೆಯಲ್ಲಿ ಪ್ರದರ್ಶನಗೊಳ್ಳುತ್ತಾ ಬಂದಿವೆ. ದೊಡ್ಡಣ್ಣ ಶೆಟ್ಟಿ, ಸಂಜೀವ ದಂಡಕೇರಿಯಂತಹ ಪ್ರಬುದ್ಧ ಕಲಾವಿದರ ಆಂದೋಲನದಿಂದಾಗಿ ತುಳು ನಾಟಕಗಳು ನಂತರ ಬೇರೆ ಬೇರೆ ಮಜಲುಗಳ ಮೂಲಕ ಮೇಲ್ದರ್ಜೆಗೇರಿದವು. ವಿಜಯ ಕುಮಾರ್ ಕೊಡಿಯಾಲ್ ಬೈಲು, ದೇವದಾಸ್ ಕಾಪಿಕಾಡು ಇನ್ನಿತರ ಹಿರಿಯ ಕಲಾವಿದರು ಹಾಗೂ ವಿವಿಧ ನಾಟಕ ತಂಡಗಳು ತುಳು ನಾಟಕಗಳಿಗೆ ಹೊಸ ರೂಪವನ್ನು ಕೊಟ್ಟು ಬೆಳೆಸಿರುವುದು ತುಳು ನಾಡಿಗೆ ಹೆಮ್ಮೆ ಎಂದರು.
ಉದ್ಯಮಿ ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಚೌಟರ ಅರಮನೆಯ ಕುಲದೀಪ್ ಎಂ., ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಂಸಿಎಸ್ ಸೊಸೈಟಿ ಸಿಇಒ ಚಂದ್ರಶೇಖರ್, ರಕ್ಷಿತ್ ಜೈನ್ ಜಿಪಂ ಉಡುಪಿ, ಬ್ಯಾಂಕ್ ಉದ್ಯೋಗಿ ಜನಾರ್ಧನ ಶೇರಿಗಾರ್, ರಂಗಭೂಮಿ ಕಲಾವಿದ ಶಿವಪ್ರಕಾಶ್ ಪೂಂಜಾ ಹರೇಕಳ, ನಡ್ಯೋಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಗಣೇಶ್ ಬಿ. ಅಳಿಯೂರು ಸ್ವಾಗತಿಸಿದರು.ಶ್ರೀನಿಧಿ ಶೆಟ್ಟಿ ನಿರೂಪಿಸಿದರು. ತಂಡದ ವ್ಯವಸ್ಥಾಪಕಿ ಬಾಲಿಕ ಜೈನ್ ವಂದಿಸಿದರು.
0 Comments