ಮೂಡುಬಿದಿರೆಯಲ್ಲಿ ಹೆಚ್ಚುತ್ತಿದೆ ಸರಗಳ್ಳರ ಕಾಟ
ಮೂಡುಬಿದಿರೆ : ಪರಿಚಯಸ್ಥರಂತೆ ವರ್ತಿಸಿ ಅಥವಾ ದಾರಿ ಕೇಳುವ ನೆಪದಲ್ಲಿ ಮಹಿಳೆಯರ ಬಳಿ ಬಂದು ಅವರ ಕುತ್ತಿಗೆಯಲ್ಲಿರುವ ಸರವನ್ನು ಎಗರಿಸಿಕೊಂಡು ಹೋಗುತ್ತಿರುವ ಘಟನೆಗಳು ಮೂಡುಬಿದಿರೆಯಲ್ಲಿ ಹೆಚ್ಚಾಗುತ್ತಿದೆ.
ಹಿರಿಯ ವಕೀಲ ಕೆ.ಆರ್.ಪಂಡಿತ್ ಅವರ ಪುತ್ರಿಯು ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ವಾಸವಿದ್ದು ಅಲ್ಲಿಗೆ ಪತ್ನಿ ಹೋಗಿದ್ದರು. ಕಳೆದೆರಡು ದಿನಗಳ ಹಿಂದೆ ಆಕೆ ಮನೆಯ ಅಂಗಳದಲ್ಲಿ ನಿಂತು ಹೂವಿನ ಗಿಡಗಳನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದವರಿಬ್ಬರಲ್ಲಿ ಓರ್ವ ಇಲ್ಲಿ ಆರ್.ಕೆ.ಟ್ರೇಡರ್ಸ್ ಎಲ್ಲಿ ಎಂದು ವಿಚಾರಿಸಿದ್ದಾನೆ. ಆಗ ಆಕೆ ತನಗೆ ಗೊತ್ತಿಲ್ಲ ಪೇಟೆಯ ಬಳಿ ವಿಚಾರಿಸಿ ಎಂದು ತಿಳಿಸಿದಾಗ ಆತನ ಬಳಿ ಇದ್ದ ವಿಸಿಟಿಂಗ್ ಕಾಡ್ ೯ ತೋರಿಸುವ ನೆಪದಲ್ಲಿ ಹತ್ತಿರಕ್ಕೆ ಬಂದು ಕಾಡ್ ೯ ತೋರಿಸಿದಾಗ ಮಹಿಳೆ ಕಾಡ್೯ ಕಡೆ ಬಗ್ಗಿ ನೋಡುವಾಗ ಕುತ್ತಿಗೆಯಿಂದ ಸರವನ್ನು ಎಳೆದಿದ್ದು ಆಗ ಆಕೆ ಕಳ್ಳ ಕಳ್ಳ ಎಂದು ಕೂಗಿದ್ದು ತಕ್ಷಣ ಆತನ ದ್ವಿಚಕ್ರ ವಾಹನದಲ್ಲಿ ಕುಳಿತು ಪರಾರಿಯಾಗಿದ್ದಾನೆ.
ಈ ಬಗ್ಗೆ ಹಿರಿಯ ವಕೀಲ ಮುಖಂಡ ಕೆ.ಆರ್.ಪಂಡಿತ್ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ತಿಂಗಳು ಮೂಡುಬಿದಿರೆ ಪೇಟೆಯಲ್ಲಿ ಮಧ್ಯ ವಯಸ್ಸಿನ ಮಹಿಳೆಯ ಬಳಿ ಓರ್ವ ಸಂಬಂಧಿಕನಂತೆ ವರ್ತಿಸಿ ನಿಮ್ಮ ಕುತ್ತಿಗೆಯಲ್ಲಿರುವ ಡಿಸೈನ್ ನ ಸರದಂತೆ ತನ್ನ ಮಗಳಿಗೂ ಸರ ಮಾಡಿಸಬೇಕು ಅದಕ್ಕಾಗಿ ಒಮ್ಮೆ ಸರ ನೀಡಿ ತಾನು ಚಿನ್ನದ ಅಂಗಡಿಯವರಿಗೆ ತೋರಿಸಿ ಬರುತ್ತೇನೆಂದು ಹೇಳಿ ಮಹಿಳೆಯಿಂದ ಸರ ಮತ್ತು ಹಣ ಪಡೆದು ಪರಾರಿಯಾಗಿದ್ದ.
ಈ ಎರಡೂ ಪ್ರಕರಣಗಳ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೇರೆ ಬೇರೆ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ ಆದರೆ ಕಳ್ಳರ ಪತ್ತೆಯಾಗಿಲ್ಲ. ಕಳೆದ ತಿಂಗಳು ಮಹಿಳೆಯಿಂದ ಸರ ಎಗರಿಸಿರುವಾತನ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಆದರೆ ಮುಖ ಚಹರೆ ಸರಿಯಾಗಿ ಕಾಣಿಸಿಲ್ಲ. ಇದೀಗ ಒಂದು ತಿಂಗಳು ಕಳೆಯುವ ಮುನ್ನವೇ ಮತ್ತೆ ಸರಗಳ್ಳತನವಾಗಿದೆ.
ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡಾ ಎಚ್ಚರ ವಹಿಸುವ ಅಗತ್ಯವಿದೆ. ಗುರುತು ಪರಿಚಯವಿಲ್ಲದವರು ತಮ್ಮ ಮನೆಯ ಬಳಿ ಸುಳಿದಾಡುತ್ತಿದ್ದರೆ ಅಥವಾ ರಸ್ತೆ ಬಳಿ, ಪೇಟೆಯಲ್ಲಿ ಯಾರಾದರೂ ಪರಿಚಯಸ್ಥರಂತೆ ಮಾತನಾಡಿದರೆ ಅವರ ಬಗ್ಗೆ ತಕ್ಷ ಣ ತಮ್ಮ ಮನೆಯವರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವುದು ಉತ್ತಮ.
ಮಹಿಳೆಯರು ಒಬ್ಬೊಬ್ಬರೇ ಹೊರಗಡೆ ಹೋಗುವಾಗ ಹೆಚ್ಚಿನ ಚಿನ್ನಾಭರಣಗಳನ್ನು ಧರಿಸದಿರುವುದೇ ಒಳ್ಳೆಯದು.
0 Comments