ಗಾಣಿಗರ ಸಂಘದಿಂದ 13ನೇ ವರ್ಷದ "ಆಟಿಡ್ ಕೆಸರ್ಡೊಂಜಿ ದಿನ"
*ವಿವಿಧ ಆಟೋಟ ಸ್ಪರ್ಧೆಗಳು, 72 ಬಗೆಯ ವಿಶೇಷ ತಿನಿಸುಗಳು
ಮೂಡುಬಿದಿರೆ: ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ(ರಿ), ಗಾಣಿಗರ ಯುವ ಘಟಕ ಮತ್ತು ಮಹಿಳಾ ಘಟಕದ ವತಿಯಿಂದ ಕಾಂತಾವರ ಬಾರಾಡಿ ಶಾಲೆಯ ಬಳಿ ಭಾನುವಾರ 13ನೇ ವರ್ಷದ " ಆಟಿಡ್ ಕೆಸರ್ಡೊಂಜಿ ದಿನ" ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಕಾಂತಾವರ ಕ್ಷೇತ್ರದ ಧರ್ಮದರ್ಶಿ ಜೀವಾಂಧರ್ ಬಲ್ಲಾಳ್ ಬಾರಾಡಿ ಬೀಡು ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇವಲ ಒಂದು ದಿನ ಮಾತ್ರ ಕೆಸರಿನಲ್ಲಿದ್ದರೆ ಸಾಲದು ಬದಲಾಗಿ ವರ್ಷಪೂರ್ತಿ ಕೆಸರಿನ ಜೊತೆ ಬೆರೆಯುವ ಮೂಲಕ ನಮ್ಮ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತ್ತಾಗಬೇಕೆಂದರು.
ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕೃಷಿ ಸಂಸ್ಕೃತಿಯಿಂದ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ. ಆದ್ದರಿಂದ ನಮ್ಮ ಹಳ್ಳಿ, ಕೃಷಿ, ಗದ್ದೆ, ಕೆಸರು ಇವುಗಳ ಬಗ್ಗೆ ನಮಗೆ ಗೌರವ ಹೆಚ್ಚಾಗಬೇಕು.
ಒಂದು ಭತ್ತವನ್ನು ಗದ್ದೆಗೆ ಚೆಲ್ಲಿದರೆ ಹಲವಾರು ತೆನೆಗಳ ಮೂಲಕ ಹೆಚ್ಚಿನ ಭತ್ತವನ್ನು ನೀಡುವುದು ಇದು ಕೃಷಿಯ ಶ್ರೇಷ್ಠತೆ. ಇದನ್ನು ನಾವು ಭೂಮಿಯಿಂದ ಮಾತ್ರ ನಿರೀಕ್ಷಿಸಲು ಸಾಧ್ಯ ಹೊರತು ಕೈಗಾರಿಕೆಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದಿನ ಕಾಲದ ಆಟಿ ತಿಂಗಳಿಗೂ ಈಗ ನಾವು ಆಚರಿಸುತ್ತಿರುವ ಆಟಿ ತಿಂಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿನ ಆಟಿ ತಿಂಗಳಲ್ಲಿ ಬಡತನವಿತ್ತು ಆದರೆ ಇಂದು ಆ ದಿನದ ಪರಿಸ್ಥಿತಿ ಇಲ್ಲ ಆದರೆ ನಮ್ಮ ಮಕ್ಕಳಿಗೆ ಅಂದಿನ ಆ ದಿನಗಳ ಬಗ್ಗೆ, ಕೃಷಿ ಸಂಸ್ಕೃತಿಯ ಬಗ್ಗೆ ಹಿರಿಯರು ತಿಳಿಸಿ ಕೊಡಬೇಕು. ಹಳ್ಳಿಯ ಸಂಸ್ಕೃತಿಯನ್ನು ಉಳಿಸಿ ಆ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಶ್ ಬಂಗೇರಾ ಮಾತನಾಡಿ ಸಮಾಜದ ಎಲ್ಲಾ ಜನರನ್ನು ಸೇರಿಸಿಕೊಂಡು ಎಲ್ಲರೂ ಒಟ್ಟಾಗಿ ಸೇರಿ ಬೆರೆಯಲು ಇದೊಂದು ಉತ್ತಮ ಅವಕಾಶ. ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು, ಆಟಿ ತಿಂಗಳ ವಿವಿಧ ತಿಂಡಿ ತಿನಿಸುಗಳನ್ನು ಸವಿಯಲು ಮತ್ತು ಅದರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು ಹಿಂದೆ ಜೀವನ ನಾಲ್ಕು ದಿನ ಅಂತ ಇತ್ತು ಆದರೆ ಇಂದು ಅದು ಎರಡೇ ದಿನಕ್ಕೆ ಸೀಮಿತವಾಗಿದೆ ಆದ್ದರಿಂದ ಒಟ್ಟಾಗಿ ಸೇರಿ ಖುಷಿ ಪಡೋಣ ಎಂದರು.
ಬೆಳ್ಮಣ್ ಲಕ್ಷ್ಮೀ ಜನಾರ್ದನ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಂದೀಪ್ ಪುತ್ರನ್, ಕಾಂತಾವರ ಗ್ರಾ.ಪಂ.ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಹಿಳಾ ವೇದಿಕೆಯ ಕಾರ್ಯದರ್ಶಿ ಪ್ರಮೀಳಾ ರವಿ ಗುರುಬೆಟ್ಟು, ಯುವ ವೇದಿಕೆಯ ಅಧ್ಯಕ್ಷ ಶತ್ರುಘ್ನ ಬೆಟ್ಕೇರಿ, ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಪ್ರಥಮ್ ಉಪಸ್ಥಿತರಿದ್ದರು.
ಬಹುಮಾನಗಳ ಪ್ರಾಯೋಜಕರಾದ ಸುಶ್ಮಿತಾ ರಂಜಿತ್, ಮಾಲತಿ ನವೀನ್ ಪುತ್ರನ್ ಮತ್ತು ಸಹಕರಿಸಿರುವ ಕಂಬಳ ಓಟಗಾರ ನತೇಶ್ ಬಾರಾಡಿ ಅವರನ್ನು ಗುರುತಿಸಲಾಯಿತು.
ಮಹಿಳಾ ವೇದಿಕೆಯ ರೂಪಾ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಗಾಣಿಗರ ಸಂಘದ ಉಪಾಧ್ಯಕ್ಷ ಜಗನ್ನಾಥ ಸಫಲಿಗ ವಂದಿಸಿದರು.
-------------
ವಿಶೇಷಗಳು :
ಹಳ್ಳಿಯ ಮತ್ತು ಆಟಿ ತಿಂಗಳಲ್ಲಿ ಮಾಡುತ್ತಿದ್ದ ಸುಮಾರು 72 ಬಗೆಯ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು, ಮಕ್ಕಳು ಮತ್ತು ಹಿರಿಯರಿಂದ ಎದುರುಕತೆ, ರಸಪ್ರಶ್ನೆ, ಹಾಡುಗಳು ಮತ್ತು ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ವಿಶೇಷವಾಗಿ ಗಮನ ಸೆಳೆದವು.
0 Comments